
ಯಾದಗಿರಿ:ಮಾ.೧೨:ಜಿಲ್ಲೆಯ ದಲಿತ ಕುಟುಂಬಗಳಿಗೆ ಭೂಮಿ, ವಸತಿ ನಿವೇಶನ ಹಾಗೂ ಸ್ಮಶಾನ ಸೌಲಭ್ಯಗಳನ್ನು ತಕ್ಷಣ ಒದಗಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಯಾದಗಿರಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಹಿಳೆಯರ ಭಾರೀ ನಿಯೋಗವು ರಾಜ್ಯದ ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಂಯೋಜಕ) ರಾಜ್ಯಾಧ್ಯಕ್ಷರಾದ ಡಾ. ಆರ್. ಅಶ್ವತ್ ಅಂತೇಜ ಹಾಗೂ ರಾಜ್ಯ ಸಮಿತಿ ಸದಸ್ಯರಾದ ಎಂ. ರವಿಕುಮಾರ್ ಅವರ ಮಾರ್ಗದರ್ಶನದಲ್ಲಿ, ಜಿಲ್ಲಾಧ್ಯಕ್ಷರಾದ ಹತ್ತಿಗೂಡೂರು ಶರಣರೆಡ್ಡಿ ಅವರ ನೇತೃತ್ವದಲ್ಲಿ ಯಾದಗಿರಿ ಜಿಲ್ಲೆಯಿಂದ ಮಹಿಳೆಯರು ಮತ್ತು ಸಂಘಟನೆಯ ಕಾರ್ಯಕರ್ತರು ಸಚಿವರನ್ನು ಅವರ ಸರ್ಕಾರಿ ಅತಿಥಿ ಗೃಹದಲ್ಲಿ ಭೇಟಿ ಮಾಡಿ ಜಿಲ್ಲೆಯ ದಲಿತ ಕುಟುಂಬಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರು.
ಈ ವೇಳೆ ಮಾತನಾಡಿದ ಹತ್ತಿಗೂಡೂರು ಶರಣರೆಡ್ಡಿ, ಯಾದಗಿರಿ ಜಿಲ್ಲೆಯ ಅನೇಕ ದಲಿತ ಕುಟುಂಬಗಳು ಇನ್ನೂ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ಭೂಮಿ ಇಲ್ಲದೆ, ವಸತಿ ನಿವೇಶನವಿಲ್ಲದೆ ಹಾಗೂ ಸ್ಮಶಾನ ಸೌಲಭ್ಯಗಳ ಕೊರತೆಯಿಂದ ಸಂಕಷ್ಟ ಅನುಭವಿಸುತ್ತಿವೆ. ಸರ್ಕಾರದಿಂದ ಈ ಮೂಲಭೂತ ಹಕ್ಕುಗಳು ದೊರೆಯುವವರೆಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹೋರಾಟ ಮತ್ತು ಚಳುವಳಿಯನ್ನು ನಿರಂತರವಾಗಿ ಮುಂದುವರಿಸಲಿದೆ ಎಂದು ಹೇಳಿದರು.
ಮನವಿ ಸ್ವೀಕರಿಸಿದ ಸಚಿವ ಸತೀಶ್ ಜಾರಕಿಹೊಳಿ ಅವರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸಂಬAಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಂಡು ದಲಿತ ಕುಟುಂಬಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಶರಣಪ್ಪ ಚಲವಾದಿ, ಸಿದ್ದಪ್ಪ ಹೊಸ್ಮನಿ, ಮಲ್ಲಮ್ಮ, ಬಸಲಿಂಗಮ್ಮ, ಶರಣಮ್ಮ, ಭೀಮಬಾಯಿ, ಗಂಗಮ್ಮ, ಎಲ್ಲಮ್ಮ, ಪ್ರಿಯಾ, ಜೇಜಮ್ಮ ಚಲವಾದಿ, ಸಿದ್ದಲಿಂಗಮ್ಮ, ಲಕ್ಷ್ಮಿ ಹೊಸಮನಿ, ಮರಿಯಮ್ಮ, ಮಾಳಮ್ಮ, ತಂಗಮ್ಮ ಸೇರಿದಂತೆ ನೂರಾರು ಮಹಿಳೆಯರು, ಯುವಕರು ಹಾಗೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.






















