
ಕಲಬುರಗಿ: ದೀಪಾವಳಿಯು ಕೇವಲ ಬಾಹ್ಯ ಕತ್ತಲೆಯನ್ನು ಹೋಗಲಾಡಿಸುವ ಸಂದೇಶ ಹೊಂದಿಲ್ಲ. ಬದಲಿಗೆ ಬೆಳಕನ್ನು ಹೊತ್ತಿಸುವ ಸಂಕೇತವಾದ, ಅಜ್ಞಾನ, ಅಂಧಕಾರ, ಮೌಢ್ಯತೆ ತೊಲಗಿ ವೈಚಾರಿಕೆತೆ, ಸುಜ್ಞಾನ ಎಲ್ಲರಲ್ಲಿ ಮೂಡಲಿ ಎಂಬ ಶ್ರೇಷ್ಠ ಮೌಲ್ಯವನ್ನು ಸಾರುವ ಹಬ್ಬವಾಗಿದೆ. ಪರಸ್ಪರ ಶಾಂತಿ, ಪ್ರೀತಿ, ಸೌಹಾರ್ದತವಾಗಿ ಆಚರಿಸುವ ಮೂಲಕ ಹಬ್ಬದ ಮೌಲ್ಯವನ್ನು ಅನುಸರಿಸಬೇಕಾಗಿದೆ ಎಂದು ಚಿಂತಕ,ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.
ನಗರದ ಆಳಂದ ರಸ್ತೆಯ ಶಿವ ನಗರದಲ್ಲಿರುವ ‘ಜ್ಞಾನ ಚಿಗುರು ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ದೀಪಾವಳಿ-ದೀಪೋತ್ಸವ ಕಾರ್ಯಕ್ರಮದಲ್ಲಿ ಸಾಮೂಹಿಕವಾಗಿ ದೀಪಗಳನ್ನು ಬೆಳಗಿಸಿ,ನಂತರ ಅವರು ಮಾತನಾಡುತ್ತಿದ್ದರು.
ಈಗಾಗಲೇ ಅನೇಕ ಮಾಲಿನ್ಯಗಳಿಂದ ಪರಸರ ತತ್ತರಿಸಿ ಹೋಗಿದೆ. ದೀಪಾವಳಿಯಲ್ಲಿ ವಿಪರಿತ ಪಟಾಕಿ ಸಿಡಿಸಿ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯಗಳ ಮೂಲಕ ಮತ್ತಷ್ಟು ಮಾಲಿನ್ಯ ಸೇರ್ಪಡೆ ಬೇಡ. ದೀಪಗಳನ್ನು ಬೆಳಗಿಸಿದರೆ ಪರಿಸರ ಶುದ್ದವಾಗುವುದರಿಂದ ಪಟಾಕಿ ಬಿಟ್ಟು, ದೀಪಗಳನ್ನು ಬೆಳಗಿಸುವ ಮೂಲಕ ಪರಿಸರ ಸ್ನೇಹಿ ದೀಪಾವಳಿ ಆಚರಿಸುವುದು ಪ್ರಸ್ತುತ ಸಂದರ್ಭದಲ್ಲಿ ತುಂಬಾ ಅಗತ್ಯವಾಗಿದೆ. ಮಕ್ಕಳಿಗೆ ಪಟಾಕಿ ಸಿಡಿದು ಕಣ್ಣಿಗೆ ಗಾಯವಾಗುತ್ತಿರುವ ಘಟನೆಗಳು ಸಂಭವಿಸುತ್ತಿವೆ. ಇದಕ್ಕೆ ಆಸ್ಪದ ಬೇಡ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಿವಯೋಗಪ್ಪ ಬಿರಾದಾರ, ದೇವೇಂದ್ರಪ್ಪ ಗಣಮುಖಿ, ವಿಠಲ, ಸಿದ್ದರಾಮ, ರಾಹುಲ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.





















