Home ಜಿಲ್ಲೆ ನಿರಂತರ ಹೋರಾಟಕ್ಕೆ ಫಲ: ಕೈಗಾರಿಕಾ ವಿಸ್ತರಣೆ ಯೋಜನೆಗೆ ಬ್ರೇಕ್ | ರೈತರ ಆತ್ಮಗೌರವದ ಜಯ

ನಿರಂತರ ಹೋರಾಟಕ್ಕೆ ಫಲ: ಕೈಗಾರಿಕಾ ವಿಸ್ತರಣೆ ಯೋಜನೆಗೆ ಬ್ರೇಕ್ | ರೈತರ ಆತ್ಮಗೌರವದ ಜಯ

ಯಾದಗಿರಿ: ಮಾ.೨೨:ದೀರ್ಘಕಾಲದ ಹೋರಾಟ, ಅಸಹನೆ, ಆಕ್ರೋಶ ಮತ್ತು ಅಡಿಗಲ್ಲಿನಂತೆ ನಿಂತ ರೈತರ ಸಂಕಲ್ಪದ ಮುಂದೆ ರಾಜ್ಯ ಸರ್ಕಾರ ಕೊನೆಗೂ ತಲೆಬಾಗಿದ್ದು, ಕಡೇಚೂರು-ಬಾಡಿಯಾಳ ಕೈಗಾರಿಕಾ ವಲಯದ ಎರಡನೇ ಹಂತದ ಭೂ ಸ್ವಾಧೀನ ಪ್ರಕ್ರಿಯೆಗೆ ಬ್ರೇಕ್ ಹಾಕಿದೆ. ಈ ನಿರ್ಧಾರ ರೈತರ ಹಕ್ಕುಗಳ ರಕ್ಷಣೆಯಲ್ಲೊಂದು ಐತಿಹಾಸಿಕ ಘಟ್ಟವೆಂದು ವಿಶ್ಲೇಷಿಸಲಾಗುತ್ತಿದೆ.

“ಜಮೀನು ನಮ್ಮ ಜೀವನಾಧಾರ, ಅದನ್ನು ಕಳೆದುಕೊಂಡರೆ ಬದುಕೇ ಶೂನ್ಯ” ಎಂಬ ಘೋಷಣೆ ಕೂಗಿದ ರೈತರು, ಭೂಸ್ವಾಧೀನದ ವಿರುದ್ಧ ದಿಟ್ಟ ಹೋರಾಟ ನಡೆಸಿದ್ದರು. “ಪ್ರಾಣ ಹೋದರೂ ಜಮೀನು ಬಿಡಲ್ಲ” ಎಂಬ ಅಚಲ ಮನೋಭಾವದೊಂದಿಗೆ ಹೋರಾಡಿದ ಗ್ರಾಮಸ್ಥರ ಒಗ್ಗಟ್ಟಿನ ಧ್ವನಿ, ಸರ್ಕಾರದ ನೀತಿ ನಿರ್ಧಾರಗಳನ್ನೇ ಮರುಪರಿಶೀಲಿಸುವಂತೆ ಮಾಡಿದೆ.

ಹೈದ್ರಾಬಾದ್-ಬೆಂಗಳೂರು ಕೈಗಾರಿಕಾ ಕಾರಿಡಾರ್ ಮಹತ್ವಾಕಾಂಕ್ಷಿ ಯೋಜನೆಯಡಿ ಸಾವಿರಾರು ಎಕರೆ ಭೂಮಿಯನ್ನು ಕೈಗಾರಿಕಾ ಬಳಕೆಗಾಗಿ ಸ್ವಾಧೀನಪಡಿಸಿಕೊಳ್ಳುವ ಉದ್ದೇಶವಿತ್ತು. ಆದರೆ ಮೊದಲ ಹಂತದಲ್ಲೇ ಭೂ ಬಳಕೆ ಸಮರ್ಪಕವಾಗದಿರುವುದು, ಪರಿಸರ ಮಾಲಿನ್ಯ, ಆರೋಗ್ಯ ಹಾನಿ ಹಾಗೂ ಜೀವನೋಪಾಯದ ಹಿನ್ನಡೆ ಮುಂತಾದ ಅಂಶಗಳು ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಗಿದ್ದವು.

ಇದೇ ಹಿನ್ನೆಲೆಯಲ್ಲಿ, ಕಡೇಚೂರು, ಶೆಟ್ಟಿಹಳ್ಳಿ, ದದ್ದಲ್, ರಾಚನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳ ರೈತರು ಸಂಘಟಿತ ಹೋರಾಟ ಆರಂಭಿಸಿ, ಆಡಳಿತ ಮತ್ತು ರಾಜಕೀಯ ನಾಯಕತ್ವದ ಮೇಲೆ ನಿರಂತರ ಒತ್ತಡ ಹೇರುತ್ತಿದ್ದರು. ಪ್ರತಿಭಟನೆಗಳು, ಮನವಿ ಪತ್ರಗಳು, ಸಾರ್ವಜನಿಕ ಸಭೆಗಳು ಜನಆಂದೋಲನದ ಸ್ವರೂಪ ಪಡೆದುಕೊಂಡವು.

ಈ ಜನಆಂದೋಲನದ ತೀವ್ರತೆಗೆ ಮಣಿದ ಸರ್ಕಾರ, ಎರಡನೇ ಹಂತದ ಭೂ ಸ್ವಾಧೀನವನ್ನು ಹಿಂತೆಗೆದುಕೊಳ್ಳುವ ಮಹತ್ವದ ತೀರ್ಮಾನ ಕೈಗೊಂಡಿದ್ದು, ಗ್ರಾಮೀಣ ಸಮುದಾಯದಲ್ಲಿ ಹರ್ಷದ ಹೊಮ್ಮು ಮೂಡಿಸಿದೆ.

ಈ ಹೋರಾಟದ ಹಿನ್ನಲೆಯಲ್ಲಿ ಸ್ಥಳೀಯ ಶಾಸಕ ಶರಣಗೌಡ ಕಂದಕೂರ ಅವರ ಪಾತ್ರವನ್ನು ಜನರು ವಿಶಿಷ್ಟವಾಗಿ ಗುರುತಿಸಿದ್ದಾರೆ. ರೈತರ ಸಮಸ್ಯೆಗಳನ್ನು ಸದನದ ಒಳಗೆ ಮತ್ತು ಹೊರಗೆ ತೀವ್ರವಾಗಿ ಪ್ರತಿಪಾದಿಸಿದ ಅವರು, “ಅಭಿವೃದ್ಧಿ ಎಂಬ ಹೆಸರಿನಲ್ಲಿ ಜನರ ಬದುಕು ಹಾಳಾಗಬಾರದು” ಎಂಬ ನಿಲುವನ್ನು ದೃಢವಾಗಿ ಮುಂದಿಟ್ಟಿದ್ದರು.

ಮೊದಲ ಹಂತದಲ್ಲಿ ಸ್ವಾಧೀನಗೊಂಡ ಭೂಮಿಯ ಸಂಪೂರ್ಣ ಉಪಯೋಗವಾಗದೇ ಇರುವುದರ ಜೊತೆಗೆ, ಮಾಲಿನ್ಯಕಾರಿ ಕೈಗಾರಿಕೆಗಳಿಂದ ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ಅವರು ಸ್ಪಷ್ಟವಾಗಿ ಸರ್ಕಾರದ ಗಮನಕ್ಕೆ ತಂದಿದ್ದರು.

ರೈತರ ಆರ್ಥಿಕ ಸಂಕಷ್ಟ, ಜಮೀನು ದಾಖಲೆಗಳ ಸ್ಥಗಿತ, ಬ್ಯಾಂಕ್ ಸಾಲಗಳ ಅಸಾಧ್ಯತೆ-ಚಿಟಟ ಅಂಶಗಳನ್ನು ವಿಸ್ತೃತವಾಗಿ ಪ್ರಸ್ತಾಪಿಸಿ, ಭೂಸ್ವಾಧೀನದ ವಿರುದ್ಧ ತೀವ್ರ ವಾದ ಮಂಡಿಸಿದ್ದರು. ಈ ನಿರಂತರ ಪ್ರಯತ್ನವೇ ಅಂತಿಮವಾಗಿ ಫಲ ನೀಡಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಜನರ ಬದುಕು ಮತ್ತು ಪರಿಸರದ ಸಮತೋಲನ ಕಾಪಾಡುವುದು ಅಭಿವೃದ್ಧಿಗಿಂತಲೂ ಮಹತ್ತರ. ಸರ್ಕಾರ ನಮ್ಮ ಬೇಡಿಕೆಯನ್ನು ಗೌರವಿಸಿ ಭೂ ಸ್ವಾಧೀನವನ್ನು ಕೈಬಿಟ್ಟಿರುವುದು ಸ್ವಾಗತಾರ್ಹ. ಆದರೆ ಮಾಲಿನ್ಯಕಾರಿ ಕೈಗಾರಿಕೆಗಳ ವಿರುದ್ಧ ನಮ್ಮ ಹೋರಾಟ ಇನ್ನೂ ಮುಂದುವರಿಯಲಿದೆ. ಶುದ್ಧ ಪರಿಸರ, ಸಮೃದ್ಧ ಜೀವನೋಪಾಯ ಮತ್ತು ಯುವಕರಿಗೆ ಉದ್ಯೋಗ ಸೃಷ್ಟಿ ನಮ್ಮ ದೃಢ ಸಂಕಲ್ಪ.”

ಶರಣಗೌಡ ಕಂದಕೂರ
ಶಾಸಕರು, ಗುರುಮಠಕಲ್ ಮತಕ್ಷೇತ್ರ