
ಶಿವಮೊಗ್ಗ, ಏ.೧೬- ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜನ-ವಾಹನ ದಟ್ಟಣೆ ಹೆಚ್ಚಿರುವ ೫ ಸರ್ಕಲ್ ಗಳಲ್ಲಿ, ಜಪಾನ್ ದೇಶದ ಮಾದರಿಯಲ್ಲಿ ಎಲಿವೇಟರ್, ಲಿಫ್ಟ್ ಸೌಲಭ್ಯ ಹೊಂದಿರುವ ಅತ್ಯಾಧುನಿಕ ಸ್ಕೈ ವಾಕರ್ (ಪಾದಚಾರಿ ಮೇಲ್ಸೇತುವೆ) ಗಳು ನಿರ್ಮಾಣವಾಗಲಿವೆ.
ಈ ಕುರಿತಂತೆ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರರವರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಈ ಸಂಬಂಧ ಏಪ್ರಿಲ್ ೧೪ ರಂದು ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ ಸಂಸದರು ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಸ್ಕೈ ವಾಕರ್ ಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಜೊತೆಗೂಡಿ ವಿಸ್ತೃತ ಯೋಜನಾ ವರದಿ ಸಿದ್ದಪಡಿಸಿ ಕೇಂದ್ರ ಭೂ ಸಾರಿಗೆ ಇಲಾಖೆಗೆ ಕಾಲಮಿತಿಯೊಳಗೆ ಸಲ್ಲಿಸುವಂತೆ ಸೂಚಿಸಿದ್ದಾರೆ.
ಸದರಿ ಸಭೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್ ಎನ್ ಚನ್ನಬಸಪ್ಪ, ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ, ರಾಷ್ಟ್ರೀಯ ಹೆದ್ದಾರಿ ಯೋಜನಾ ವಿಭಾಗದ ಮುಖ್ಯಸ್ಥರಾದ ಅನೂಪ್ ಶರ್ಮಾ, ಎಂಜಿನಿಯರ್ ಲೋಕೇಶ್, ರಾಷ್ಟ್ರೀಯ ಹೆದ್ದಾರಿ ನಿವೃತ್ತ ಎಂಜಿನಿಯರ್ ಹಾಗೂ ಸಂಸದರ ಸಲಹೆಗಾರರಾದ ಪೀರ್ ಪಾಷಾ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಎಲ್ಲೆಲ್ಲಿ ನಿರ್ಮಾಣವಾಗಲಿದೆ ಸ್ಕೈ ವಾಕರ್‌ಗಳು
ಬಸ್ ನಿಲ್ದಾಣದ ಅಶೋಕ ಸರ್ಕಲ್, ಸರ್ಕ್ಯೂಟ್ ಹೌಸ್ ಸರ್ಕಲ್, ಗಾಡಿಕೊಪ್ಪದ ಸರ್ಕಾರಿ ಶಾಲೆ ಸರ್ಕಲ್, ಆಲ್ಕೋಳ ಹಾಗೂ ಎಂಆರೆಸ್ ಸರ್ಕಲ್ ಗಳಲ್ಲಿ ಸ್ಕೈವಾಕರ್ ಗಳ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.
ಹಲವು ವರ್ಷಗಳ ಬೇಡಿಕೆ : ಸದರಿ ಸರ್ಕಲ್ ಗಳಲ್ಲಿ ಜನ ವಾಹನ ಸಂಚಾರ ದಟ್ಟಣೆ ಹೆಚ್ಚಿದೆ. ಪಾದಚಾರಿಗಳು ಜೀವ ಕೈಯಲ್ಲಿಡಿದು ಹೆದ್ದಾರಿ ದಾಟಿ ಹೋಗುವಂತಹ ದುಃಸ್ಥಿತಿಯಿದೆ. ಈಗಾಗಲೇ ಹಲವು ನಾಗರಿಕರು ಸಾವು-ನೋವಿಗೆ ತುತ್ತಾಗಿದ್ದಾರೆ.
ಅದರಲ್ಲಿಯೂ ಗಾಡಿಕೊಪ್ಪದ ಸರ್ಕಾರಿ ಶಾಲೆ ಸಮೀಪದ ಸರ್ಕಲ್ ನಲ್ಲಿನ ಹೆದ್ದಾರಿಯು ನೂರಾರು ವಿದ್ಯಾರ್ಥಿಗಳ ಪಾಲಿಗೆ ಗಂಡಾಂತರಕಾರಿಯಾಗಿ ಪರಿಣಮಿಸಿತ್ತು. ಹೆದ್ದಾರಿ ದಾಟಿ ಶಾಲೆ ಹಾಗೂ ಮನೆಗೆ ಹೋಗಲು ವಿದ್ಯಾರ್ಥಿಗಳು ಹರಸಾಹಸ ಪಡುವಂತಾಗಿತ್ತು. ಈಗಾಗಲೇ ಹಲವು ವಿದ್ಯಾರ್ಥಿಗಳು ರಸ್ತೆ ದಾಟುವ ವೇಳೆ ಅಪಘಾತಕ್ಕೆ ತುತ್ತಾಗಿದ್ದರು.
ಸಂಸದರ ಕ್ರಮ : ಈ ಎಲ್ಲ ಕಾರಣಗಳಿಂದ ಬಸ್ ನಿಲ್ದಾಣ, ಗಾಡಿಕೊಪ್ಪ ಸೇರಿದಂತೆ ಪ್ರಮುಖ ಸರ್ಕಲ್ ಗಳಲ್ಲಿ ಸುಗಮ ಜನ – ವಾಹನ ಸಂಚಾರಕ್ಕೆ ಅಗತ್ಯವಿರುವ ಕ್ರಮಕೈಗೊಳ್ಳಬೇಕೆಂಬ ಬೇಡಿಕೆ ಹಲವು ವರ್ಷಗಳಿಂದಿತ್ತು. ಆದರೆ ಈ ನಿಟ್ಟಿನಲ್ಲಿ ಯಾವುದೇ ಕ್ರಮವಾಗಿರಲಿಲ್ಲ. ಇದೀಗ ಸಂಸದ ಬಿ ವೈ ರಾಘವೇಂದ್ರರವರು ಸದರಿ ಸರ್ಕಲ್ ಗಳಲ್ಲಿ ಜಪಾನ್ ದೇಶದ ಮಾದರಿಯಲ್ಲಿ ಅತ್ಯಾಧುನಿಕ ಸ್ಕೈವಾಕರ್ ಗಳ ನಿರ್ಮಾಣಕ್ಕೆ ಕ್ರಮಕೈಗೊಂಡಿರುವುದು ಸ್ವಾಗತಾರ್ಹ ಸಂಗತಿಯಾಗಿದೆ ಎಂದು ನಾಗರೀಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.























