
ಶಿವಮೊಗ್ಗ, ಏ,೩– ತೋಟಗಳಿ ಪ್ರವೇಶಿಸಿದ ಎರಡು ಕಾಡಾನೆಗಳು, ಅಡಕೆ ಹಾಗೂ ತೆಂಗಿನ ಮರಗಳಿಗೆ ಹಾನಿ ಮಾಡಿರುವ ಘಟನೆ ಏಪ್ರಿಲ್ ೦೨ ರ ರಾತ್ರಿ ನಡೆದಿದೆ.
ಕೃಷ್ಣೇಗೌಡ ಹಾಗೂ ಈಶಣ್ಣ ಎಂಬುವರಿಗೆ ಸೇರಿದ ತೋಟಗಳಲ್ಲಿ ಘಟನೆ ನಡೆದಿದೆ. ತೋಟದಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್ ಕೂಡ ಎಳೆದು ಹಾಕಿವೆ.
ಅದೃಷ್ಟಾವಶಾತ್ ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದರಿಂದ ಸಂಭಾವ್ಯ ಅನಾಹುತ ತಪ್ಪಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಉಂಬ್ಳೆಬೈಲು ಗ್ರಾಮ ಸುತ್ತಮುತ್ತಲಿನ ತೋಟ, ಗದ್ದೆಗಳಿಗೆ ಕಾಡಾನೆಗಳು ನಿರಂತರವಾಗಿ ದಾಳಿಯಿಟ್ಟು ಫಸಲು ಹಾಳು ಮಾಡುತ್ತಿವೆ. ಆದರೆ ಅರಣ್ಯ ಇಲಾಖೆಯು ಕಾಡಾನೆಗಳ ನಿಯಂತ್ರಣಕ್ಕೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಹಾಗೆಯೇ ತೋಟದ ನಡುವೆ ಹಾದು ಹೋಗಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವಂತೆ ಹಲವು ಬಾರಿ ಮೆಸ್ಕಾಂಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣವೇ ತೋಟದಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವಂತೆ ಸ್ಥಳೀಯರು ಮೆಸ್ಕಾಂಗೆ ಆಗ್ರಹಿಸಿದ್ದಾರೆ.

























