Home ಜಿಲ್ಲೆ ಬೆಂಗಳೂರು ಪರಿಸರ ಸಂರಕ್ಷಣೆಗೆ ಸಾಮಾಜಿಕ ಹೊಣೆಗಾರಿಕೆ ಹಿರಿದು : ಖಂಡ್ರೆ

ಪರಿಸರ ಸಂರಕ್ಷಣೆಗೆ ಸಾಮಾಜಿಕ ಹೊಣೆಗಾರಿಕೆ ಹಿರಿದು : ಖಂಡ್ರೆ

ಬೆಂಗಳೂರು, ಏ.೧೬: ಪ್ರಕೃತಿ, ಪರಿಸರ ಸಂರಕ್ಷಣೆ ಹಾಗೂ ಹಸಿರು ಹೊದಿಕೆ ಹೆಚ್ಚಳದಲ್ಲಿ ಸುಸ್ಥಿರ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪಾತ್ರ ಹಿರಿದಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.


ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಫ್.ಕೆ.ಸಿಸಿಐ) ಆಯೋಜಿಸಿದ್ದ ಜಾಗತಿಕ ಸುಸ್ಥಿರ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಶೃಂಗಸಭೆ ೨೦೨೬ರ ಪೂರ್ವಭಾವಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ನಾವಿಂದು, ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ಬದಲಾವಣೆಯ ಪರಿಣಾಮಗಳ ಕಾಲಘಟ್ಟದಲ್ಲಿ ನಿಂತಿದ್ದು, ಈ ಸಂದರ್ಭದಲ್ಲಿ ಸುಸ್ಥಿರ ಅಭಿವೃದ್ಧಿ, ಹವಾಮಾನ ಚೇತರಿಕೆ ಮತ್ತು ಸಮಗ್ರ ಪ್ರಗತಿಯ ಕಾರ್ಯತಂತ್ರಕ್ಕೆ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಚಾಲಕಶಕ್ತಿಯಾಗಿದೆ ಎಂದರು.


ಕರ್ನಾಟಕವು ಈ ಪಯಣದಲ್ಲಿ ವಿಶಿಷ್ಟ ಸ್ಥಾನದಲ್ಲಿದೆ. ಜಾಗತಿಕ ಜೀವವೈವಿಧ್ಯತೆಯ ಅದ್ಭುತ ತಾಣವಾದ ಪಶ್ಚಿಮ ಘಟ್ಟಗಳನ್ನು ಹೊಂದಿದ್ದು, ಹಲವು ಬಗೆಯ ವಿಶಿಷ್ಟ ಸಸ್ಯ ಸಂಕುಲ, ಪ್ರಾಣಿ ಸಂಕುಲ, ಪಕ್ಷಿ ಸಂಕುಲ ಹಾಗೂ ಕೀಟ ಸಂಕುಲಗಳ ತಾಣವಾದ ಈ ಸಮೃದ್ಧ ಕಾನನವನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು


ಪಶ್ಚಿಮ ಘಟ್ಟ ಭವಿಷ್ಯದ ಪೀಳಿಗೆಯ ಜೀವನಾಡಿ:ಈಶ್ವರ ಖಂಡ್ರೆ
ಹಲವು ಜೀವನದಿಗಳ ಮೂಲವೇ ಪಶ್ಚಿಮಘಟ್ಟವಾಗಿದ್ದು, ಮಳೆಯ ಮಾರುತಗಳನ್ನು ತಡೆದು ದೇಶಾದ್ಯಂತ ವ್ಯಾಪಕವಾಗಿ ಮಳೆ ಸುರಿಸುವಂತೆ ಮಾಡುವ ಪಶ್ಚಿಮ ಘಟ್ಟಗಳನ್ನು ಉದ್ದಿಮೆದಾರರು ಕೇವಲ ಒಂದು ಸಂಪನ್ಮೂಲವಾಗಿ ನೋಡದೆ, ಭವಿಷ್ಯದ ಪೀಳಿಗೆಯ ಜೀವನಾಡಿಯಾಗಿ ನೋಡಬೇಕು ಎಂದು ಹೇಳಿದರು.


ಹಸಿರು ಹೊದಿಕೆ ಹೆಚ್ಚಳಕ್ಕೆ ಸಿಎಸ್‌ಆರ್:
ಬೆಂಗಳೂರು ನಗರ ಒಂದು ಕಾಲದಲ್ಲಿ ನಿವೃತ್ತರ ಸ್ವರ್ಗ, ಹವಾನಿಯಂತ್ರಿತ ನಗರ ಎಂಬ ಖ್ಯಾತಿ ಪಡೆದಿತ್ತು. ಇಂದು ಬೆಂಗಳೂರು ಕೂಡ ಕಾಂಕ್ರೀಟ್ ಕಾಡಾಗುತ್ತಿದ್ದು, ತಾಪಮಾನದ ಏರಿಕೆಯ ಅನುಭವ ಆಗುತ್ತಿದೆ. ಬೆಂಗಳೂರು ನಗರದಲ್ಲಿ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಧೂಳು, ಹೊಗೆಯಿಂದಾಗಿ ವಾಯುಗುಣಮಟ್ಟವೂ ಕುಸಿಯುತ್ತಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರ ದೆಹಲಿಯಂತೆ ಮತ್ತೊಂದು ಗ್ಯಾಸ್ ಚೇಂಬರ್ ಆಗದಂತೆ ತಡೆಯಲು ಈಗಿನಿಂದಲೇ ಕ್ರಮ ವಹಿಸುವುದು ಅತ್ಯಗತ್ಯ ಎಂದರು.


ಬೆಂಗಳೂರಿನಲ್ಲಿ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಬಳಿಕ ಸರಿ ಸುಮಾರು ಶತಮಾನದ ತರುವಾಯ ೧೫೩ ಎಕರೆ ವಿಶಾಲ ಪ್ರದೇಶದಲ್ಲಿ ಬೃಹತ್ ಜೈವಿಕ ಉದ್ಯಾನ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಬೆಂಗಳೂರು ಉತ್ತರ ತಾಲೂಕು ಯಲಹಂಕ ಬಳಿಯ ಮಾದಪ್ಪನಹಳ್ಳಿಯಲ್ಲಿ ವಿಶ್ವಗುರು ಬಸವಣ್ಣ ಬೃಹತ್ ಜೈವಿಕ ಉದ್ಯಾನ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದಕ್ಕಾಗಿ ೫೦ ಕೋಟಿ ರೂ. ಬಿಡುಗಡೆಯಾಗಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ಬೆಂಗಳೂರು ನಗರದಲ್ಲಿ ಇಂತಹ ಒಂದು ಬೃಹತ್ ಉದ್ಯಾನ ನಿರ್ಮಾಣಕ್ಕೆ ನೀವೆಲ್ಲರೂ ಕೈಜೋಡಿಸಬೇಕು. ಸಿಎಸ್.ಆರ್. ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.


ಅರಣ್ಯೀಕರಣ, ಕ್ಷೀಣಿಸಿದ ಅರಣ್ಯಗಳ ಮರುಸ್ಥಾಪನೆ ಮತ್ತು ನಗರ ಹಸಿರು ಹೊದಿಕೆ ಹೆಚ್ಚಳದಂತಹ ಉಪಕ್ರಮಗಳಲ್ಲಿ ಕೈಗಾರಿಕೋದ್ಯಮಿಗಳು ಸಕ್ರಿಯವಾಗಿ ಭಾಗವಹಿಸಿದರೆ, ಅದು ಮುಂದಿನ ಪೀಳಿಗೆಗೆ ಶುದ್ಧ ಗಾಳಿಯ, ನಿರ್ಮಲ ಪರಿಸರದ, ಸುಗಮ ಜೀವನವನ್ನು ಖಾತ್ರಿ ಪಡಿಸುತ್ತವೆ ಎಂದ ಈಶ್ವರ ಖಂಡ್ರೆ, ಸಾರ್ವಜನಿಕರು, ತಮ್ಮ ಮನೆಯ ಸೌಂದರ್ಯಕ್ಕೆ ಅಡ್ಡಿ ಯಾಗುತ್ತದೆ, ಮನೆಯ ಮುಂದೆ ಎಲೆ ಉದುರುತ್ತದೆ ಎಂದು ಮರ, ಗಿಡ ಕಡಿಯದೆ, ಹಸಿರು ಉಳಿಸಬೇಕು. ಇಲ್ಲವಾದರೆ ಮುಂದೆ ಉಸಿರಾಟಕ್ಕೂ ಕಷ್ಟ ಪಡಬೇಕಾಗುತ್ತದೆ ಎಂದು ಹೇಳಿದರು.


ನಾವು ತಂತ್ರಜ್ಞಾನ ಯುಗದಲ್ಲಿದ್ದೇವೆ. ಉಪಗ್ರಹ ಮೇಲ್ವಿಚಾರಣೆ ಮತ್ತು ಕೃತಕ ಬುದ್ಧಿಮತ್ತೆ ಚಾಲಿತ ಅರಣ್ಯ ನಿರ್ವಹಣೆಯಿಂದ ಹಿಡಿದು ನೀರಿನ ಸಂರಕ್ಷಣೆ ಮತ್ತು ವನ್ಯಜೀವಿಗಳ ಚಲನವಲನದ ಮೇಲಿನ ನಿಗಾಕ್ಕೆ ತಂತ್ರಜ್ಞಾನ ಹೊಸ ಪರಿಹಾರವಾಗಿದೆ. ಈ ಅತ್ಯಾಧುನಿಕ ಸೌಲಭ್ಯ ಅಳವಡಿಸಲು ಉಪಕರಣಗಳ ಖರೀದಿಯಲ್ಲೂ ಸಿಎಸ್‌ಆರ್ ನಿಧಿ ಉಪಯುಕ್ತವಾಗಿದೆ ಎಂದರು.


ಜೀವನವೂ ಇರಬೇಕು, ಜೀವನೋಪಾಯವೂ ಇರಬೇಕು. ಪ್ರಕೃತಿಯೂ ಉಳಿಯಬೇಕು, ಜೀವನವೂ ನಡೆಯಬೇಕು. ಅಭಿವೃದ್ಧಿಯೂ ಆಗಬೇಕು. ಹಸಿರು ಉಳಿಸಿಕೊಂಡು, ಬೆಳೆಸಿಕೊಂಡು ಅಭಿವೃದ್ಧಿ ಸಾಧಿಸುವುದೇ ಸುಸ್ಥಿರತೆಯ ಮಂತ್ರ. ? ಇದು ಇಂದಿನ ಅಗತ್ಯ ಮತ್ತು ಅನಿವಾರ್ಯ. ಈ ಹಾದಿಯಲ್ಲಿ ನಡೆಯಲು ಸರ್ಕಾರ ಬದ್ಧವಾಗಿದೆ. ಇದಕ್ಕೆ ಉದ್ದಿಮೆಗಳ ಸಹಕಾರ ನೀಡಬೇಕು ಎಂದರು.


ಎಫ್.ಕೆಸಿಸಿಐನ ಕೀರ್ತನ್ ಕುಮಾರ್ ಅರಣ್ಯ ಇಲಾಖೆ ೧೦೦೦೦ ಸಸಿಗಳನ್ನು ನೀಡುತ್ತಿದ್ದು, ಇವುಗಳನ್ನು ನೆಟ್ಟು ಬೆಳೆಸುವ ಜವಾಬ್ದಾರಿಯನ್ನು ನಿರ್ವಹಿಸುವುದಾಗಿ ತಿಳಿಸಿದರು.
ಅಧ್ಯಕ್ಷರಾದ ಉಮಾರೆಡ್ಡಿ, ನವ್ ಕಿಸ್ಲೆ, ಸಾಯಿಪ್ರಸಾದ್ ಮತ್ತಿತರರು ಪಾಲ್ಗೊಂಡಿದ್ದರು.