
ಬೆಂಗಳೂರು, ಫೆ. ೧೭- ರಾಜ್ಯದಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನಿಯಮಗಳನ್ನು ಮೀರಿ ನಿವೇಶನಗಳನ್ನು ಹಂಚಿಕೆ ಮಾಡಿದೆ. ಇದು ಕಾನೂನು ಬಾಹಿರ. ನಿವೇಶನಗಳನ್ನು ಕೂಡಲೇ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಬಿಜೆಪಿ ಹೋರಾಟ ನಡೆಸಲಿದೆ ಎಂದು ವಿರೋಧ ಪಕ್ಷದ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಕ್ಷಾಂತರ ರೂ. ಬೆಲೆ ಬಾಳುವ ಸಿಎ ನಿವೇಶನಗಳನ್ನು ಕಾಂಗ್ರೆಸ್ ಕಚೇರಿಗೆ ಕಡಿಮೆ ದರದಲ್ಲಿ ಪಡೆಯಲಾಗಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಬೆಲೆ ಬಾಳುವ ನಿವೇಶನಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಹಂಚಿಕೆ ಮಾಡಲಾಗಿದೆ. ಈ ರೀತಿ ಕಾಂಗ್ರೆಸ್ ಕಚೇರಿಗೆ ಸಿಎ ಸೈಟ್‌ಗಳನ್ನು ಹಂಚಿಕೆ ಮಾಡಲು ನಿಯಮಾವಳಿಗಳಲ್ಲಿ ಅವಕಾಶ ಇಲ್ಲ ಎಂದರು.
ನಗರಾಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ಸಿಎ ಸೈಟ್‌ಗಳನ್ನು ಕಾಂಗ್ರೆಸ್ ಕಚೇರಿಗೆ ನೀಡಲು ಅವಕಾಶ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ ಸಚಿವ ಸಂಪುಟದ ಮುಂದಿಟ್ಟು ಒಪ್ಪಿಗೆ ಪಡೆಯಲಾಗಿದೆ. ಅವರದ್ದೇ ಪೆನ್ನು, ಅವರದ್ದೇ ಒಪ್ಪಿಗೆ, ಅವರದ್ದೇ ಸಹಿ ಎಂದು ವ್ಯಂಗ್ಯವಾಡಿದರು.
ರಾಜ್ಯದ ೩೧ ಕಡೆ ೪೦ ಕೋಟಿ ಬೆಲೆ ಬಾಳುವ ಆಸ್ತಿಯನ್ನು ೨ ಕೋಟಿಗೆ ಕಾಂಗ್ರೆಸ್ ಪಕ್ಷ ಪಡೆದಿದೆ. ಇವುಗಳ ಬಗ್ಗೆ ತನಿಖೆ ಆಗಬೇಕು ಎಂದರು.
ಈ ಲ್ಯಾಂಡ್ ರಾಬರಿ ವಿರುದ್ಧ ಕಾನೂನು ಇಲಾಖೆ ಕ್ರಮ ವಹಿಸಬೇಕು. ಈ ಲ್ಯಾಂಡ್‌ಗಳನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಮುಡಾದಂತೆ ಇಲ್ಲೂ ಸಂಕಷ್ಟ ಅನವಭವಿಸಿ, ಆಮೇಲೆ ಹಿಂತಿರುಗಿಸುವ ಕೆಲಸ ಮಾಡಬೇಡಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಎಂದು ಹೇಳಿ, ಕಾಂಗ್ರೆಸ್ ಕಚೇರಿಗೆ ನೀಡಿರುವ ನಿವೇಶನಗಳ ದಾಖಲಾತಿಯನ್ನು ಬಿಡುಗಡೆ ಮಾಡಿದರು.
ಕಾನೂನು ಬಾಹಿರವಾಗಿ ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ನಿವೇಶನಗಳನ್ನು ವಾಪಸ್ ಪಡೆಯದಿದ್ದರೆ ಬಿಜೆಪಿ ಹೋರಾಟ ನಡೆಸಲಿದೆ ಎಂದು ಅವರು ಹೇಳಿದರು.
ಒಳ ಮೀಸಲು ಹಂಚಿಕೆಯಲ್ಲೂ ಅನ್ಯಾಯವಾಗುತ್ತಿದೆ. ಒಳ ಮೀಸಲಾತಿ ಹಂಚಿಕೆ ಅವಾಸ್ತವಿಕವಾಗಿದೆ. ಸರ್ಕಾರ ದಲಿತರಿಗೆ ಅನ್ಯಾಯ ಮಾಡಲು ಹೊರಟಿದೆ. ಒಂದೇ ಜಾತಿಗೆ ಎಲ್ಲವನ್ನೂ ಸೀಮಿತ ಮಾಡಲು ಹೊರಟಿದೆ ಎಂದು ಅವರು ದೂರಿದರು.




























