
ಬೆಂಗಳೂರು, ಫೆ. ೧೭- ರಾಜ್ಯ ರಾಜಕಾರಣಕ್ಕೆ ವಾಪಸ್ಸಾಗುವ ಚಿಂತನೆ ನನಗಿಲ್ಲ. ಆದರೆ ಪಕ್ಷ ಏನು ಹೇಳುತ್ತದೋ ಅದನ್ನು ಕೇಳುತ್ತೇನೆ ಎಂದು ಕೇಂದ್ರದ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ ಹೇಳಿದರು.
ಬೆಂಗಳೂರಿನಲ್ಲಿಂದು ರೈಲ್ವೆ ಇಲಾಖೆಯ ಕಾರ್ಯಕ್ರಮದ ಸಂದರ್ಭದಲ್ಲಿ ತಮ್ಮ ರಾಜಕೀಯದ ಬದುಕಿನ ಬಗ್ಗೆ ಹೇಳಿಕೊಂಡ ಅವರು, ನಾನು ರಾಜ್ಯ ರಾಜಕಾರಣಕ್ಕೆ ಬರುವ ಯೋಚನೆ ಇಲ್ಲ ಎಂದರು.
ನಮ್ಮಲ್ಲಿ ವ್ಯಕ್ತಿಗಿಂತ ಪಕ್ಷ ದೊಡ್ಡದು. ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ವರಿಷ್ಠರು ಹೇಳಿದಂತೆ ಕೇಳುತ್ತೇನೆ. ಪಕ್ಷ ಏನು ಹೇಳತ್ತದೋ ಅದನ್ನು ಮಾಡಿಕೊಂಡು ಹೋಗುತ್ತೇನೆ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಮೇಗಾ ಕೋಚಿಂಗ್ ಸೆಂಟರ್
ಇದಕ್ಕೂ ಮೊದಲು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಸೋಮಣ್ಣ ಅವರು ಬೆಂಗಳೂರಿನ ಯಲಹಂಕದಲ್ಲಿ ಸುಮಾರು ೫ ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಮೇಗಾ ಕೋಚಿಂಗ್ ಕೇಂದ್ರವನ್ನು ನಿರ್ಮಿಸಲಾಗುವುದು. ಇದು ದೇಶದಲ್ಲೇ ದೊಡ್ಡ ಕೋಚಿಂಗ್ ಸೆಂಟರ್ ಆಗಲಿದೆ. ಆರಂಭದಲ್ಲಿ ದೇವನಹಳ್ಳಿಯಲ್ಲಿ ಈ ಕೇಂದ್ರವನ್ನು ಆರಂಭಿಸಲು ಪ್ರಸ್ತಾಪಿಸಲಾಗಿತ್ತು. ದೂರದ ಕಾರಣದಿಂದ ಯಲಹಂಕಗೆ ಸ್ಥಳಾಂತರ ಗೊಂಡಿದೆ ಎಂದರು.
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆಯ ಸಿದ್ಧವಾಗಿದೆ. ಬೆಂಗಳೂರಿನ ದಂಡು ರೈಲ್ವೆ ನಿಲ್ದಾಣದ ಆಧುನೀಕರಣ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ವೈಟ್ ಫೀಲ್ಡ್‌ನಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದವರೆಗಿನ ೪ ಪಥದ ರೈಲ್ವೆ ಮಾರ್ಗ ಶೀಘ್ರವೇ ಪೂರ್ಣಗೊಳ್ಳಲಿದೆ. ಇದರ ಜೊತೆಗೆ ತುಮಕೂರು- ಬೆಂಗಳೂರು ಪಥದ ಯೋಜನೆಗೂ ಈಗಾಗಲೇ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಸಚಿವ ಸೋಮಣ್ಣ ತಿಳಿಸಿದರು.





























