
ಕಲಬುರಗಿ,ಫೆ.17-ನಗರ ಹೊರವಲಯದ ಕೇಂದ್ರ ಕಾರಾಗೃಹದಲ್ಲಿ ಆರ್ಟ ಆಫ್ ಲಿವಿಂಗ್ ಹಾಗೂ ಕೇಂದ್ರ ಕಾರಾಗೃಹ ಸಹ ಯೊಗದೊಂದಿಗೆ “ಪ್ರಿಸನ್ ಸ್ಮಾರ್ಟಕೋರ್ಸ್ ಅಡಿ”ಯಲ್ಲಿ ಒಂದು ವಾರದವರೆಗೆ ಬ್ಯಾರಕ್ ಸಂಖ್ಯೆ: 5 ರಿಂದ 7ರ ವರೆಗಿನ ಒಟ್ಟು 116 ಬಂದಿಗಳಿಗೆ 03ನೇ ತಂಡದ ಯೋಗ ತರಬೇತಿಯನ್ನು ಪ್ರಾರಂಭಿಸಲಾಗಿಯಿತು.
ಸಂಸ್ಥೆಯ ಅಧೀಕ್ಷಕರಾದ ರಾಕೇಶ್ ಕಾಂಬಳೆ, ರವಿಶಂಕರ್ ಗುರೂಜಿರವರ ಭಾವಚಿತ್ರಕ್ಕೆ ಪುಷ್ಪಾಚಾರ್ಣೆ ಮಾಡಿ ಯೋಗ ತರಬೇತಿಗೆ ಚಾಲನೆ ನೀಡಿ ಮಾತನಾಡುತ್ತ, ಜ್ಞಾನಕ್ಕೆ ಯೋಗ, ಅಜ್ಞಾನಕ್ಕೆ ರೋಗ, ಸ್ನೇಹಕ್ಕೆ ಶಕ್ತಿ, ದ್ವೇಷಕ್ಕೆ ಅಶಕ್ತಿ ಮನಸ್ಸು ಸದೃಡವಾಗುತ್ತದೆ. ಸಮಾಜ ಪ್ರಬಲವಾಗುತ್ತದೆ. ಜೀವನ ಎಂಬ ಚಕ್ರದಲ್ಲಿ ಯೋಗ ಮಹತ್ವದಾಗಿದೆ. ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಸತ್ಯದ ಬಲದಿಂದ ಅಸತ್ಯದ ಕೇಡು
ನೋಡಯ್ಯ. ಅದೇ ರೀತಿ ಚಂಚಲ ಮನಸ್ಸಿನಿಂದ ಕೇಡನ್ನು ಯೋಗದಿಂದ ನೋಡಯ್ಯ ಎಂದು ಹೇಳುತ್ತಾ ಯೋಗ ಕೇವಲ ಎರಡು ಅಕ್ಷರವಲ್ಲ, ಕುಗ್ಗಿದ ದೇಹಕ್ಕೆ ಶಕ್ತಿ ತುಂಬುವ ಯೋಗ ಜಿಗುಪ್ಸೆ ಹುಟ್ಟಿದ ಮನಸ್ಸಿಗೆ ಹುರುಪು ಕೊಡುವುದು ಯೋಗ, ಮೌನವಾದ ಮನಸ್ಸಿಗೆ ಮಹಿಮೆ ತಿಳಿಸುವುದೇ ಯೋಗ. ಯೋಗ ಕಲಿತವರಿಗೆಲ್ಲ ಭಾರತ ಮತ್ತು ವಿಶ್ವದ ಪ್ರತಿ ಜೀವರಾಶಿಗೂ ಸಂಬಂಧಿಸಿದ್ದು, ಸದೃಡದೇಹ ಬೇಕೇಂದರೆ ಸದೃಡಯುವಕರು ಬೇಕು, ಸದೃಡ ಮನಸ್ಸು ಯುವಕರಲ್ಲಿ ಇರಬೇಕೆಂದರೆ ಯೋಗಾಸನ ಪ್ರತಿಯೊಬ್ಬರಲ್ಲಿ ಇರಬೇಕು. ಯೋಗ ಸೀಮಿತವಲ್ಲ, ಅದು ಜಗತ್ತಿನ ಪ್ರತಿ ಜೀವರಾಶಿಗೆ ಪ್ರತಿದಿನ ಸಂಬಂಧಪಟ್ಟಿದ್ದು. ಹುಟ್ಟಿದ ಮಗುವಿನಿಂದ ಹಿಡಿದು ಸಾಯುವವರೆಗೂ ಯೋಗ ಪರಿಣಾಮಕಾರಿ ಎಂಬುದನ್ನು ಒಂದು ಸಣ್ಣ ಕವನದ ಮೂಲಕ ಹೇಳಿದರು.
ತಾಯಿಗರ್ಭದಿಂದ ಹೊರಬಂದ ಮೇಲೆ ಬಾಯಿಯಿಂದ ಜೋರಾದ ಅಳು ಅದುವೇ ಯೋಗದ ಒಂದು ಭಾಗ ಇನ್ನು ತಾಯಿ ಹಾಡುವ ಜೊಜೊ ಲಾಲಿ ಪದ ಜೋಕಾಲಿ ಆಡಿಸುವುದು ಇನ್ನೊಂದು ವಿಶೇಷ ಅದೇ ರೀತಿ ಮಗು ಅತ್ತಾಗ ಕಥೆ ಹೇಳಿ ಸಕ್ಕರೆ ಸಿಹಿ ಮುತ್ತು ನೀಡುವುದೇ ಯೋಗ” ಎಂದು ಹೇಳಿದರು. ಈ ಸಂಸ್ಥೆಯ ಸಹಾಯಕ ಅಧೀಕ್ಷಕರಾದ ಚನ್ನಪ್ಪರವರು ಮಾತನಾಡುತ್ತಾ ಯೋಗ ದೇಹಕ್ಕೆ, ಮೆದುಳಿಗೆ ಹಾಗೂ ಹೊಸ ಶಕ್ತಿಯನ್ನು ನಮಗೆ ನೀಡುತ್ತದೆ ಎಂದು ಹೇಳಿದರು.
ಆರ್ಟ್ ಆಫ್ ಲಿವಿಂಗ್‍ನ ವ್ಯವಸ್ಥಾಪಕ ಆಡಳಿತಾಧಿಕಾರಿ ದತ್ತಾತ್ರ ಚಿಂಚೂರ ಅವರು ಮಾತನಾಡುತ್ತಾ ಯೋಗವು ಒಂದು ಬೆಳಕು ಅದು ಒಮ್ಮೆ ಬೆಳಗಿದರೆ ಎಂದಿಗೂ ನಿಮ್ಮನ್ನು ಕತ್ತಲೆಯಲ್ಲಿ ಇಡಲು ಬಿಡುವುದಿಲ್ಲ. ಅಲ್ಲದೇ ಯೋಗ ಅನೇಕ ಭೌತಿಕ ಮತ್ತು ಆಧ್ಯಾತ್ಮೀಕ ಪ್ರಯೋಜನಗಳ ಬಗ್ಗೆ ಪ್ರಪಂಚದ ಜನರಿಗೆ ಅರಿವು ಮೂಡಿಸುವುದು ಅವಶ್ಯಕವಾಗಿದೆ ಹಾಗಾಗಿ ತಾವೆಲ್ಲರೂ ಯೋಗ ಶಿಕ್ಷಣವನ್ನು ಪಡೆದು ಮಾನಸಿಕವಾಗಿ, ದೈಹಿಕವಾಗಿ, ಸದೃಡರಾಗಿ ನಿರೋಗಿಯಾಗಿ ಎಂದು ಕರೆನೀಡಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಜೈಲರ್‍ಗಳಾದ ಸಾಗರ ಪಾಟೀಲ್, ಶ್ರೀಮಂತಗೌಡ ಪಾಟೀಲ್, ಪುಂಡಲೀಕ. ಟಿ.ಕೆ, ಶ್ಯಾಮ ಬಿದ್ರಿ ಹಾಗೂ ಎಲ್ಲಾ ಅಧಿಕಾರಿ/ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಈಕಾರ್ಯಕ್ರಮವನ್ನು ನಾಗರಾಜ ಮುಲಗೆ ಶಿಕ್ಷಕರು ನಡೆಸಿಕೊಟ್ಟರು.


























