Home ಜಿಲ್ಲೆ ಕಂದಾಯ ಇಲಾಖೆ ಕೆಲಸ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ: ಶಾಸಕ ತುನ್ನೂರ ಸೂಚನೆ

ಕಂದಾಯ ಇಲಾಖೆ ಕೆಲಸ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ: ಶಾಸಕ ತುನ್ನೂರ ಸೂಚನೆ

ಯಾದಗಿರಿ:ಏ.೨೯: ಕಂದಾಯ ಇಲಾಖೆಯ ಕಾರ್ಯಪದ್ಧತಿಯಲ್ಲಿ ತಂತ್ರಜ್ಞಾನ ಬಳಕೆಯನ್ನು ಕಟ್ಟುನಿಟ್ಟಾಗಿ ಅನುಸರಿಸಿ, ಎಲ್ಲಾ ಕೆಲಸಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜನಸಂಪರ್ಕ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು (ವಿಎ) ಮತ್ತು ಆದಾಯ ನಿರೀಕ್ಷಕರು (ಆರ್‌ಐ)ಗಳಿಗೆ ಸರ್ಕಾರದಿಂದ ಮಂಜೂರಾದ ೧೭ ಲ್ಯಾಪ್‌ಟಾಪ್‌ಗಳನ್ನು ವಿತರಿಸಿ ಅವರು ಮಾತನಾಡಿದರು.
ಕಂದಾಯ ಸಚಿವ ಕೃಷ್ಣ ಬೈರೈಗೌಡ ಅವರ ಮುಂದಾಳತ್ವದಲ್ಲಿ ಇಲಾಖೆಯಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಅಳವಡಿಸಲಾಗುತ್ತಿದೆ. ಇ-ಆಫೀಸ್, ಇ-ಪಾವತಿ ಸೇರಿದಂತೆ ವಿವಿಧ ಸೇವೆಗಳು ಡಿಜಿಟಲ್ ಮಾಧ್ಯಮದ ಮೂಲಕ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಲ್ಯಾಪ್‌ಟಾಪ್‌ಗಳನ್ನು ಪಡೆದ ಅಧಿಕಾರಿಗಳು ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಎಲ್ಲಾ ಕಾರ್ಯಗಳನ್ನು ಗಣಕೀಕರಣದ ಮೂಲಕವೇ ನಿರ್ವಹಿಸಬೇಕು ಎಂದು ತಿಳಿಸಿದರು. ಕೆಲಸಗಳ ವಿಳಂಬಕ್ಕೆ ಅವಕಾಶ ನೀಡದೇ, ಸಮಯಮಿತಿಯೊಳಗೆ ಪೂರ್ಣಗೊಳಿಸುವುದು ಅತ್ಯಾವಶ್ಯಕವೆಂದರು.
ತಾಲೂಕಿನ ಕಂದಾಯ ಇಲಾಖೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸರ್ಕಾರವು ಒದಗಿಸಿದ ಈ ೧೭ ಲ್ಯಾಪ್‌ಟಾಪ್‌ಗಳನ್ನು ಶಾಸಕರ ಮೂಲಕ ವಿತರಿಸಲಾಗಿದ್ದು, ಅವುಗಳ ಸಮರ್ಪಕ ಬಳಕೆಗೆ ಅಗತ್ಯ ಮಾರ್ಗದರ್ಶನ ನೀಡಲಾಗಿದೆ ಎಂದು ಹೇಳಿದರು.
ತಹಸೀಲ್ದಾರ ಸುರೇಶ ಅಂಕಲಗಿ ಮಾತನಾಡಿ, ಗ್ರಾಮ ಆಡಳಿತಾಧಿಕಾರಿಗಳ ಕಾರ್ಯಭಾರವನ್ನು ಸುಲಭಗೊಳಿಸಿ, ಡೇಟಾ ಎಂಟ್ರಿ ಕಾರ್ಯವನ್ನು ವೇಗವಾಗಿ ನಡೆಸಲು ಈ ಲ್ಯಾಪ್‌ಟಾಪ್‌ಗಳು ನೆರವಾಗಲಿವೆ. ಇದರ ಸದುಪಯೋಗದಿಂದ ಸಾರ್ವಜನಿಕರಿಗೆ ಶೀಘ್ರ ಸೇವೆ ನೀಡುವಲ್ಲಿ ಅಧಿಕಾರಿಗಳು ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಬೂದಿಹಾಳ, ಮಲ್ಲಿಕಾರ್ಜುನ ಈಟೆ, ಗಿರೀಶ ರಾಯಕೋಟಿ, ರಾಜಶೇಖರ ಪಾಟೀಲ್, ಬಸವರಾಜ ಸೇರಿದಂತೆ ಶರಣಗೌಡ ಬಬಲಾದ ಉಪಸ್ಥಿತರಿದ್ದರು.