
ನವಲಗುಂದ,ಏ.೨೨: ಪಟ್ಟಣದ ಸುಕ್ಷೇತ್ರ ಸಂಸ್ಥಾನ ಪಂಚಗ್ರಹ ಹಿರೇಮಠದ ನೂತನ ಪಿಠಾಧಿಪತಿಗಳಾದ ಶ್ರೀ ವೀರಬಸವ ದೇವರ ಗುರುಪಟ್ಟಾಭಿಷೇಕದ ಅಂಗವಾಗಿ ಪುರಸಭೆಯ ಸಹಭಾಗಿತ್ವದಲ್ಲಿ ಸ್ವಚ್ಛತೆ ಕುರಿತು ಅರಿವು ಕಾರ್ಯಕ್ರಮಕ್ಕೆ ಶಾಸಕ ಎನ್ ಎಚ್ ಕೋನರಡ್ಡಿ ಚಾಲನೆ ನೀಡಿ ಮಾತನಾಡಿದರು.
ಇತ್ತೀಚೆಗೆ ಪುರಸಭೆ ಸದಸ್ಯರೊಂದಿಗೆ ಇಂದೋರ್ ನಗರದ ಸ್ವಚ್ಛತಾ ವ್ಯವಸ್ಥೆಯನ್ನು ಅವಲೋಕಿಸಿದ ಅನುಭವದಿಂದ, ಅದೇ ಮಾದರಿಯಲ್ಲಿ ನಮ್ಮ ನವಲಗುಂದವೂ ಮಾದರಿ ಸ್ವಚ್ಛ ನಗರವಾಗಿ ರೂಪುಗೊಳ್ಳಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಪಟ್ಟಣದ ಸಾರ್ವಜನಿಕರೆಲ್ಲರೂ ಮನೆಯ ಮುಂದೆ ಹೇಗೆ ಶ್ರದ್ಧೆಯಿಂದ ಸ್ವಚ್ಛತೆ ಕಾಪಾಡುತ್ತೇವೋ, ಅದೇ ಮನೋಭಾವದಿಂದ ನಮ್ಮ ಓಣಿಯನ್ನೂ, ನಮ್ಮ ಪಟ್ಟಣವನ್ನೂ ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ವಾರದಲ್ಲಿ ಕನಿಷ್ಠ ಒಂದು ದಿನ, ಪ್ರತಿಯೊಂದು ಓಣಿಯನ್ನು ಸ್ವಚ್ಛಗೊಳಿಸುವಂತೆ ಪುರಸಭೆ ಕ್ರಮ ಕೈಗೊಳ್ಳಬೇಕು ಹಾಗೂ ಈ ಕಾರ್ಯದಲ್ಲಿ ಸಾರ್ವಜನಿಕರೂ ಸಕ್ರಿಯವಾಗಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಪಂಚಗೃಹ ಹಿರೇಮಠದ ನೂತನ ಪೀಠಾಧಿಕಾರಿ ವೀರಬಸವ ದೇವರು ಮಾತನಾಡಿ ಸ್ವಚ್ಛತೆ ಎಂಬುದು ಕೇವಲ ಅಭಿಯಾನವಲ್ಲ, ಅದು ನಮ್ಮ ಜೀವನ ಶೈಲಿ ಆಗಬೇಕು ? ಈ ಮನೋಭಾವವೇ ನಮ್ಮ ಪಟ್ಟಣವನ್ನು ಸುಂದರ, ಆರೋಗ್ಯಕರ ಮತ್ತು ಆದರ್ಶ ನಗರವನ್ನಾಗಿ ರೂಪಿಸುತ್ತದೆ ಎಂದರು.
ಜಾಗೃತಿ ಅರಿವು ಜಾಥಾ ಪಂಚಗೃಹ ಹಿರೇಮಠ ದಿಂದ ಗ್ರಾಮ ಚಾವಡಿ ಮಾರ್ಗವಾಗಿ ಲಿಂಗರಾಜ್ ವೃತ್ತ, ಗಾಂಧಿ ಮಾರುಕಟ್ಟೆ ಗಣಪತಿ ಗುಡಿ, ನಾಗಲಿಂಗಸ್ವಾಮಿ ಮಠದ ಮೂಲಕ ಸಾಗಿದ “ನಮ್ಮ ನಡೆ ಸ್ವಚ್ಛತೆ ಕಡೆ” ಜಾಥಾ, ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವಲ್ಲಿ ಮಹತ್ವದ ಹೆಜ್ಜೆಯಾಯಿತು.
ಪುರಸಭೆ ಮುಖ್ಯಾಧಿಕಾರಿ ಎಸ್ ಪಿ ಪೂಜಾರ, ನ್ಯಾಯವಾದಿ ವಿ ಪಿ ಪಾಟೀಲ, ಪುರಸಭೆ ಮಾಜಿ ಸದಸ್ಯರಾದ ಜೀವನ ಪವಾರ, ಮೋದಿನ ಶಿರೂರ, ಪ್ರಕಾಶ ಸಿಗ್ಲಿ, ಸುರೇಶ ಮೇಟಿ, ಹಣಮಂತ ವಾಲಿಕಾರ, ಮುಖಂಡರಾದ ಗಂಗಪ್ಪ ಹಳ್ಳದ,ಎಸ್ ಕೆ ದೋಟಿಕಲ, ಶಂಕ್ರಯ್ಯ ಸುಬಬೇದಾರಮಠ, ಶರ್ಮಾ ಹಿರೇಮಠ, ವೀರೇಶ ಜಾವುರಮಠ, ಶಿದ್ದಲಿಂಗಯ್ಯ ಹಿರೇಮಠ, ಅಡಿವೆಪ್ಪ ಶಿರಸಂಗಿ, ರವಿ ಬೆಂಡಿಗೇರಿ, ಆನಂದ ಹವಳಕೋಡ, ಮದರಸಾಬ ಉಗರಗೋಳ, ಸೇರಿದಂತೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಪೌರಕಾರ್ಮಿಕರು ಜಾಥಾದಲ್ಲಿ ಭಾಗವಹಿಸಿದ್ದರು.























