
ತುಮಕೂರು, ಸೆ. ೪- ರಸ್ತೆಯ ಮೇಲಿರುವ ಧಾರ್ಮಿಕ ಕಟ್ಟಡಕ್ಕೆ ಮಹಾನಗರ ಪಾಲಿಕೆಯವರು ಖಾತೆ ಮಾಡಿಕೊಟ್ಟಿದ್ದಾರೆ. ಪಾಲಿಕೆ ಸಿಬ್ಬಂದಿ ನಗರದ ರಸ್ತೆ, ಪಾರ್ಕ್, ಪಾಲಿಕೆ ಜಾಗ, ಸರ್ಕಾರಿ ಜಾಗಗಳಿಗೆ ಖಾತೆ ಮಾಡಿಕೊಟ್ಟಿರುವುದು ಕಣ್ಮಂದೆ ಮುಂದೆ ಇದೆ. ಪಾಲಿಕೆಯ ಸುಮಾರು ೨೩ ಕೋಟಿ ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ೧೭ ಲಕ್ಷಕ್ಕೆ ಮಾರಾಟ ಮಾಡಿದ್ದಾರೆ.ಇದೆಲ್ಲವೂ ಪಾಲಿಕೆ ಅಧಿಕಾರಿಗಳ ಕರಾಮತ್ತು.ಇದೆಲ್ಲವನ್ನು ಗಮನಿಸುತ್ತಿರುವ ಜನಪ್ರತಿನಿಧಿಗಳು ಕಂಡೂ ಕಾಣದಂತೆ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ ಅಧ್ಯಕ್ಷ ಜಿ.ಎಸ್. ಬಸವರಾಜು ಆರೋಪಿಸಿದ್ದಾರೆ.
ಹಿಂದೆ ನಾನು ಬಿ.ಎಚ್.ರಸ್ತೆ ಒತ್ತುವವರಿಗೆ ತೆರವುಗೊಳಿಸದೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ ಎಂಬ ವಿಚಾರವನ್ನು ಮಾಧ್ಯಮಗಳಲ್ಲಿ ಪ್ರಸ್ತಾಪ ಮಾಡಿದ್ದೆ. ಆ ಹಿನ್ನೆಲೆಯಲ್ಲಿ ತುಮಕೂರಿನ ಜನ ಬಹಳ ವರ್ಷಗಳಿಂದ ನಿರೀಕ್ಷಿಸಲ್ಪಟ್ಟಿದ್ದ ಸಮಸ್ಯೆಯೊಂದು ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿದೆ.
ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೌನ್ ಹಾಲ್ ವೃತ್ತದಲ್ಲಿ ರಸ್ತೆ ಒತ್ತುವರಿ ಮಾಡಿಕೊಂಡಿರುವ ಎರಡು ಧಾರ್ಮಿಕ ಕೇಂದ್ರಗಳನ್ನು ತೆರೆವುಗೊಳಿಸುವಂತೆ ನೋಟಿಸ್ ನೀಡಲಾಗಿದೆ ಎಂಬ ಸುದ್ದಿ ಮಾಧ್ಯಮಗಳ ಮೂಲಕ ತಿಳಿದು ಬಂದಿದೆ. ಆದರೆ ರಸ್ತೆಯ ಮೇಲಿರುವ ಧಾರ್ಮಿಕ ಕಟ್ಟಡಕ್ಕೆ ಮಹಾನಗರ ಪಾಲಿಕೆಯವರು ಖಾತೆ ಮಾಡಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಒತ್ತುವರಿಗೆ ಸಂಬಂಧಿಸಿದಂತೆ ಪಾಲಿಕೆಯ ಅಧಿಕಾರಿಗಳು ಶಾಮೀಲಾಗಿರುವುದು ಎದ್ದು ಕಾಣುತ್ತದೆ. ಅಧಿಕಾರಿಗಳ ಸಹಾಯ, ಸಹಕಾರ, ಸಹಭಾಗಿತ್ವವಿಲ್ಲದೆ ಒಂದಿಂಚು ಸರ್ಕಾರಿ ಜಾಗ ಒತ್ತುವರಿಯಾಗಲು ಸಾಧ್ಯವಿಲ್ಲ ಅನ್ನುವುದು ನೂರಕ್ಕೆ ನೂರು ಸತ್ಯ. ಈ ರೀತಿ ಸರ್ಕಾರಿ ಜಾಗ ಒತ್ತುವರಿಯಲ್ಲಿ ಶಾಮೀಲಾಗಿರುವ ಸರ್ಕಾರಿ ಭ್ರಷ್ಟ ನೌಕರರನ್ನು ಜೈಲಿಗೆ ಕಳುಹಿಸುವ ವ್ಯವಸ್ಥೆ ಜಾರಿಯಾಗುವವರೆಗೂ ಈ ಸಮಸ್ಯೆಗೆ ಪರಿಹಾರವಿಲ್ಲ. ಅಲ್ಲದೆ, ಕಾಣದ ಕೈಗಳು, ಪ್ರಭಾವಿಗಳು ಈ ರಸ್ತೆ ಒತ್ತುವರಿ ತೆರವಿನಲ್ಲಿ ತಲೆ ಹಾಕದೇ ಹೋದರೆ ನೂರಕ್ಕೆ ನೂರು ಭಾಗ ಅಧಿಕಾರಿಗಳು ರಸ್ತೆ ಒತ್ತುವರಿ ತೆರವುಗೊಳಿಸುತ್ತಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ ಎಂದು ಜಿ.ಎಸ್. ಬಸವರಾಜು ತಿಳಿಸಿದ್ದಾರೆ.






























