
ಯಾದಗಿರಿ, ಏ. ೧:ವಿಧಾನಸಭಾ ಕ್ಷೇತ್ರದ ವಡಗೇರಾ ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಲಾದ “ಪಂಡಿತ್ ದೀನ್ ದಯಾಳ್ ಪ್ರಶಿಕ್ಷಣ ಮಹಾಭಿಯಾನ-೨೦೨೬” ಕಾರ್ಯಕ್ರಮ ಉತ್ಸಾಹಭರಿತವಾಗಿ ಜರುಗಿತು. ವಡಗೇರಾ, ತುಮಕೂರು ಹಾಗೂ ಹಯ್ಯಾಳ ‘ಬಿ’ ಮಹಾಶಕ್ತಿ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಅಭಿಯಾನಕ್ಕೆ ಪಕ್ಷದ ಕಾರ್ಯಕರ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾದ ಶ್ರೀ ಮಹೇಶರಡ್ಡಿ ವೆಂಕಟರಡ್ಡಿ ಮುದ್ನಾಳ ಅವರು ಭಾಗವಹಿಸಿ ಮಾತನಾಡಿ, ಬಿಜೆಪಿ ಪಕ್ಷವು ರಾಷ್ಟ್ರಪ್ರೇಮ ಮತ್ತು ಸೇವಾ ಮನೋಭಾವದ ಮೌಲ್ಯಗಳ ಮೇಲೆ ನಿರ್ಮಾಣಗೊಂಡಿದೆ ಎಂದು ಹೇಳಿದರು. ಅಂತ್ಯೋದಯದ ಸಂಕಲ್ಪದೊAದಿಗೆ ಪಕ್ಷದ ಕಾರ್ಯಕರ್ತರಲ್ಲಿ ಶಿಸ್ತು, ಸಂಘಟನಾ ಬಲ ಮತ್ತು ಸಮರ್ಪಣೆಯ ಮನೋಭಾವ ಬೆಳೆದಿದ್ದು, ಅದು ಪಕ್ಷದ ನಾಡಿ-ನಾಡಿಗಳಲ್ಲಿ ಹರಿಯುತ್ತಿದೆ ಎಂದು ಅಭಿಪ್ರಾಯಪಟ್ಟರು.
ಪಕ್ಷವು ಕೇವಲ ಅಧಿಕಾರದ ಆಸೆಗಾಗಿ ಆಡಳಿತ ನಡೆಸುವುದಿಲ್ಲ; “ಜನಸೇವೆಯೇ ಜನಾರ್ಧನ ಸೇವೆ” ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಪ್ರತಿಯೊಬ್ಬ ಕಾರ್ಯಕರ್ತರೂ ಜನಸಂಪರ್ಕ ಮತ್ತು ಜನಸೇವೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಕರೆ ನೀಡಿದರು. ಜೊತೆಗೆ, ರಾಜ್ಯದ ಹಿಂದಿನ ಬಿಜೆಪಿ ಸರ್ಕಾರ ಹಾಗೂ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆಗಳು ಮತ್ತು ಜನಪರ ಯೋಜನೆಗಳನ್ನು ಮನೆ ಮನೆಗೂ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಬಸವರಾಜಪ್ಪಗೌಡ ವಿಭೂತಿಹಳ್ಳಿ, ಮಾಜಿ ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ್, ರಾಚಣ್ಣಗೌಡ ಮುದ್ನಾಳ, ಸಿದ್ದಣಗೌಡ ವಡಗೇರಾ, ಸದಾಶಿವಪ್ಪಗೌಡ ರೊಟ್ನಡಗಿ, ಡಾ. ಶರಣಭೂಪಾಲರಡ್ಡಿ ನಾಯ್ಕಲ್, ದೇವರಾಜ ನಾಯಕ್ ಉಳ್ಳೇಸೂಗೂರ, ವೇಣುಗೋಪಾಲ ಜೇವರ್ಗಿ, ಮೌನೇಶ ಹಯ್ಯಾಳಕರ್, ಪರಶುರಾಮ ಕುರುಕುಂದಾ, ಮೇಲಪ್ಪ ಗುಳಗಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಗ್ರಾಮೀಣ ಮಂಡಲ ಅಧ್ಯಕ್ಷರಾದ ರಾಜಶೇಖರ ವಡಗೇರಾ, ವೆಂಕಟರಡ್ಡಿ ಅಬ್ಬೆತುಮಕೂರು, ಶಂಕ್ರಪ್ಪಗೌಡ ಗೋನಾಲ್, ಮಹಾದೇವ ರೆಡ್ಡಿ ನಾಟೇಕಾರ ಹಾಗೂ ಜಿಲ್ಲಾ ಸಂಚಾಲಕ ಮೌನೇಶ ಬೆಳಗೇರಾ ಸೇರಿದಂತೆ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ ಮತ್ತು ಬೂತ್ ಮಟ್ಟದ ಅಧ್ಯಕ್ಷರು ಹಾಗೂ ಪ್ರಶಿಕ್ಷಣಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.






















