
ಚಿತ್ತಾಪುರ; ಏ.9:ತಾಲೂಕಿನ ಸುಕ್ಷೇತ್ರ ಸೂಗೂರು ಎನ್ ಗ್ರಾಮದ ಶ್ರೀ ಭೋಜಲಿಂಗೇಶ್ವರರ ದೇವಸ್ಥಾನ ಉದ್ಘಾಟನೆ ಮತ್ತು ಬೆಳ್ಳಿ ರಥೋತ್ಸವ ಲೋಕಾರ್ಪಣೆ ಕಾರ್ಯಕ್ರಮ ಇದೇ ಏ. 11 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ್ ಮರಗೋಳ, ಕುರುಬ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ಹೊಸ್ಸಳ್ಳಿ ಹೇಳಿದರು.
ಪಟ್ಟಣದ ಕನಕ ಭವನದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ನೂತನ ನಿರ್ಮಿತ ದೇವಸ್ಥಾನ 190 ಅಡಿ ಉದ್ದ, 90 ಅಡಿ ಅಗಲ, 15 ಅಡಿ ಎತ್ತರದ ವಿನ್ಯಾಸದಲ್ಲಿ ದೇಗುಲ ರೂಪಗೊಂಡಿದ್ದು, 72 ಕಂಬಗಳನ್ನು ಒಳಗೊಂಡಿದ್ದು, ದ್ರಾವಿಡ ಶೈಲಿಯಲ್ಲಿ ಸಿದ್ದಪಡಿಸಲಾಗಿದೆ. ತಮಿಳುನಾಡು ಹಾಗೂ ಉಡುಪಿಯ ಶಿಲ್ಪಿಗಳಿಂದ ಕಳೆದ ನಾಲ್ಕುವರೆ ವರ್ಷಗಳಿಂದ ನಿರ್ಮಾಣ ಕಾರ್ಯ ನಡೆಯುತ್ತಾ ಬಂದು ಪೂರ್ಣಗೊಂಡಿದೆ ಎಂದರು.
ಸಂಪೂರ್ಣ ಬಿಳಿ ಗ್ರಾನೈಟ್ ಶಿಲೆಯಿಂದ ನಿರ್ಮಿಸಲಾಗಿದ್ದು, ಸಿಮೆಂಟ್ ರಾಡ್’ಗಳು ಬಳಕರ ಮಾಡದೇ ಕೇವಲ ಶಿಲೆಗಳು ಗರ್ಚು ಬಳಸಿ ಇಂಟರ್ ಲಾಕ್ ಮಾಡುವ ಮೂಲಕ ನಿರ್ಮಿಸಲಾಗಿದೆ ಎಂದು ಹೇಳಿದರು.
ಸಂಪೂರ್ಣ ವೆಚ್ಚ ಭಕ್ತಾದಿಗಳ ದೇಣಿಗೆಯಿಂದಲೇ ಆಗಿದ್ದು, ಯಾವುದೇ ಚಂದಾ ಇಲ್ಲವೇ ದೇಣಿಗೆ ಪಡೆಯದೇ ಇರುವುದು ಈ ದೇಗುಲದ ವಿಶೇಷ ಎಂದರು. ಮಾ.11 ರಂದು ಮಧ್ಯಾಹ್ನ 12-30ಕ್ಕೆ ಜರುಗುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಲ್ಯಾಣ ನಾಡಿನ ಹಲವು ಮಠಾಧೀಶರು ಲೋಕಾರ್ಪಣೆ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆಯವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿಯವರು ಕಲ್ಯಾಣ ಮಂಟಪ ಉದ್ಘಾಟನೆ ಮಾಡಲಿದ್ದಾರೆ. ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಭೈರತಿ ಸುರೇಶ ಅವರು ಬೆಳ್ಳಿ ರಥದ ಲೋಕಾರ್ಪಣೆ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪೂರ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್, ಕಲಬುರಗಿ ಸಂಸದರಾದ ರಾಧಾಕೃಷ್ಣ ದೊಡ್ಡನಿ, ರಾಯಚೂರು ಸಂಸದ ಜಿ. ಕುಮಾರ ನಾಯಕ, ಕೆಕೆಆರ್ ಡಿಬಿ ಅಧ್ಯಕ್ಷ ಅಜಯ ಸಿಂಗ್, ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರ ಸೇರಿದಂತೆ ರಾಜಕೀಯ ಗಣ್ಯಮಾನ್ಯರು ಆಗಮಿಸುತ್ತಿದ್ದಾರೆ. ಹೀಗಾಗಿ ಕಲ್ಯಾಣ ಕರ್ನಾಟಕ ಸೇರಿ ಜಿಲ್ಲೆ, ತಾಲೂಕಿನಿಂದ ಸಹಸ್ರಾರು ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ಮುಖಂಡರಾದ ಸುನೀಲ್ ದೊಡ್ಮನಿ, ಜುಮ್ಮಣ್ಣ ಪೂಜಾರಿ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಕುರುಬ ಸಮಾಜದ ತಾಲೂಕು ಕಾರ್ಯದರ್ಶಿ ಯಲ್ಲಾಲಿಂಗ ಪೂಜಾರಿ ಮುಗುಟಿ, ಶಿವರುದ್ರಪ್ಪ ಭೀಣಿ, ಮಲ್ಲು ಪೂಜಾರಿ, ಮಲ್ಲಿಕಾರ್ಜುನ ಪೂಜಾರಿ, ಶಿವಕುಮಾರ ಸುಲ್ತಾನಪೂರ್, ಮಲ್ಲಿಕಾರ್ಜುನ ಬೊಮ್ಮನಳ್ಳಿ, ಸುರೇಶ್ ಬೇನಕನಳ್ಳಿ, ಮಲ್ಲಿಕಾರ್ಜುನ ಪೂಜಾರಿ ಮೋಗಲಾ, ನಾಗರಾಜ ಸಜ್ಜನ್, ಜಗದೀಶ್ ಪೂಜಾರಿ, ಸಿದ್ದು ಹಲಕರ್ಟಿ ಸೇರಿದಂತೆ ವಿವಿಧ ಸಮಾಜದ ಅನೇಕ ಮುಖಂಡರು ಇದ್ದರು.




















