
ಸಂಜೆ ವಾಣಿ ವಾರ್ತೆ
ಜಮಖಂಡಿ:ಮಾ.೩: ಡಾ ಬಾಬಾ ಸಾಹೇಬ ಅಂಬೇಡ್ಕರ್ ಅವರ ನಾಮಫಲಕಕ್ಕೆ ಅವಮಾನ ಮಾಡಿರುವ ಘಟನೆಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕೆ.ಆರ್.ಡಿ.ಎಸ್.ಎಸ್) ಬಾಗಲಕೋಟೆ ಜಿಲ್ಲಾ ಸಂಚಾಲಕ ಮುತ್ತಣ್ಣ ಮೇತ್ರಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಗುಳಗುಳ್ಳಿ ಗ್ರಾಮದಲ್ಲಿ ಪರಮಪೂಜ್ಯ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ನಾಮಫಲಕಕ್ಕೆ ದುಷ್ಕರ್ಮಿಗಳು ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದಿರುವುದು ಸಮಾಜದ ಶಾಂತಿಗೆ ಧಕ್ಕೆ ತರುವ ಹೇಯ ಕೃತ್ಯವಾಗಿದೆ ಎಂದು ಅವರು ಹೇಳಿದರು.
“ಇಂತಹ ವಿಷಜಂತುಗಳ ಅಟ್ಟಹಾಸ ಮಿತಿಮೀರಿದೆ. ಇದು ಕೇವಲ ಒಂದು ನಾಮಫಲಕಕ್ಕೆ ಮಾಡಿದ ಅವಮಾನವಲ್ಲ, ಪ್ರತಿಯೊಬ್ಬ ಸ್ವಾಭಿಮಾನಿ ಭಾರತೀಯನಿಗೆ ಮಾಡಿದ ಅಪಮಾನ. ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುವ ಇಂತಹ ಕೃತ್ಯಗಳನ್ನು ಕಟ್ಟುನಿಟ್ಟಾಗಿ ತಡೆಯಬೇಕು,” ಎಂದು ಅವರು ಆಗ್ರಹಿಸಿದರು.
ಗದಗ ಜಿಲ್ಲಾ ಆಡಳಿತ ಕೂಡಲೇ ಎಚ್ಚೆತ್ತುಕೊಂಡು ಈ ಹೇಯ ಕೃತ್ಯವೆಸಗಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಪೊಲೀಸರು ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ಉಗ್ರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ಈ ಅನ್ಯಾಯದ ವಿರುದ್ಧ ಗದಗ ಜಿಲ್ಲೆಯ ಮೂಲೆ ಮೂಲೆಗಳಿಂದ ದಲಿತ ಮುಖಂಡರು ಹಾಗೂ ಕಾರ್ಯಕರ್ತರು ಸಂಘಟಿತ ಹೋರಾಟ ನಡೆಸಿ ಗುಳಗುಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.
“ಬಾಬಾಸಾಹೇಬರು ನಮಗೆ ಸ್ವಾಭಿಮಾನದಿಂದ ಬದುಕುವುದನ್ನು ಕಲಿಸಿದ್ದಾರೆ. ಇಂದು ಆ ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ. ನಮಗೆ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು,” ಎಂದು ಮುತ್ತಣ್ಣ ಮೇತ್ರಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

























