Home ಜಿಲ್ಲೆ ಬೆಂಗಳೂರು ಅಂಬೇಡ್ಕರ್ ದಲಿತರಿಗೆ ಮಾತ್ರ ಸೀಮಿತವಲ್ಲ

ಅಂಬೇಡ್ಕರ್ ದಲಿತರಿಗೆ ಮಾತ್ರ ಸೀಮಿತವಲ್ಲ

ಕೆಂಗೇರಿ, ಮೇ.೨೬: ಬಾಬಾ ಸಾಹೇಬ್ ಅಂಬೇಡ್ಕರ್ ಕೇವಲ ದಲಿತರಿಗೆ ಮಾತ್ರ ಸೀಮಿತ ಅಲ್ಲ ಈ ದೇಶದ ಎಲ್ಲಾ ವರ್ಗದ ತುಳಿತಕ್ಕೊಳಗಾದ ಶೋಷಿತ ಸಮುದಾಯಗಳ ಆರಾಧ್ಯ ದೈವ ಎಂದು ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ತಿಳಿಸಿದರು.

ಮಾಗಡಿ ಮುಖ್ಯರಸ್ತೆಯ ಹೇರೋಹಳ್ಳಿ ಕ್ರಾಸ್, ಬ್ಯಾಡರಹಳ್ಳಿ ಪೊಲೀಸ್ ಠಾಣೆ ಮುಂಭಾಗದಲ್ಲಿ ಕರ್ನಾಟಕ ಜೈಭೀಮ್ ಸೇವಾಸಂಘ (ರಿ.) ಹೇರೋಹಳ್ಳಿ ವತಿಯಿಂದ ಹಮ್ಮಿಕೊಂಡಿದ್ದ “ಅಂಬೇಡ್ಕರ್ ಹಬ್ಬ” ಡಾ. ಬಿ.ಆರ್. ಅಂಬೇಡ್ಕರ್, ಶ್ರೀ ಜಗಜ್ಯೋತಿ ಬಸವಣ್ಣ ಹಾಗೂ ಬಾಬು ಜಗಜೀವನರಾಮ್ ಅವರ ಜಯಂತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಅಂಬೇಡ್ಕರ್, ಬಸವಣ್ಣ ಸೇರಿದಂತೆ ಹಲವು ಮಹನೀಯರು ಜಾಗೃತಿಗಾಗಿ ಹೋರಾಟ ಮಾಡಿದವರಲ್ಲ, ದೇಶಕ್ಕಾಗಿ, ಮನುಕುಲದ ಒಳಿತಿಗಾಗಿ ಶ್ರಮಿಸಿದರು ಎಂದರು.ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಅಕ್ಷರಸ್ಥರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಆದರೆ ಉನ್ನತ ವ್ಯಾಸಂಗ ಪಡೆಯುವಲ್ಲಿ ವಿಫಲರಾಗಿದ್ದೇವೆ. ಎಲ್ಲದಕ್ಕೂ ಸರ್ಕಾರ ನಂಬಿ ಕೂತರೆ ಸಾಧ್ಯವಿಲ್ಲ. ನಿಮ್ಮಗಳ ಬೆಳವಣಿಗೆ ನಿಮ್ಮ ಕೈಯಲ್ಲಿದೆ. ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧೆಗೆ ಸಿದ್ದರಾಗಿ ಎಂದು ಕರೆ ನೀಡಿದರು.

ಬಂಡಾಯ ಸಾಹಿತಿ ಡಾ. ಎಲ್. ಹನುಮಂತಯ್ಯ, ಮಾತನಾಡಿ ಅಂಬೇಡ್ಕರ್ ಹೆಸರನ್ನು ಜಾಗ ಕಬಳಿಕೆಗೆ ಬಳಸಬೇಡಿ, ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ.
ಭಾರತ ದೇಶದಲ್ಲಿ ಹುಟ್ಟಿದ ಬೌದ್ಧ ಧರ್ಮವನ್ನು ಬೇರೆ ದೇಶಗಳು ಪಾಲನೆ ಮಾಡುತ್ತಿವೆ. ಸಮಾಜದಲ್ಲಿ ಮೇಲು ಕೀಳು ಭಾವನೆ ನಶಿಸಿಲ್ಲ. ಬಸವಣ್ಣ, ಅಂಬೇಡ್ಕರ್ ಸೇರಿದಂತೆ ಎಲ್ಲಾ ಮಹನೀಯರ ತತ್ವ ಒಂದೇ ಮೊದಲು ಮಾನವನಾಗು ಎಂದು ತಿಳಿಸಿದರು.

ದಲಿತ ಸಂಘರ್ಷಸಮಿತಿ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ ಮಹಿಳೆಯರಿಗೆ ಸ್ವಾತಂತ್ರ್ಯ ಹಕ್ಕು ಕೊಟ್ಟಿದ್ದು ಅಂಬೇಡ್ಕರ್ ಹೊರತು ಯಾವ ದೇವರಲ್ಲ, ಮಹಿಳೆಯರು ದೇವರನ್ನು ಪೂಜಿಸುವ ಬದಲು ಅಂಬೇಡ್ಕರ್ ಅವರನ್ನು ಪೂಜಿಸಬೇಕು. ಸಮಾಜದ ಒಳಿತಿಗಾಗಿ ದುಡಿಯುವ ದಲಿತ ಜನಾಂಗ ಜಾತಿ ವ್ಯವಸ್ಥೆಯಲ್ಲಿ ಸಿಲುಕಿ ನರುಳುತ್ತಿದೆ.ನಾವು ಸ್ವಾಭಿಮಾನದಿಂದ ಬದುಕಲು ಕಾರಣ ಅಂಬೇಡ್ಕರ್, ದಲಿತರ ಮೇಲಿನ ದೌರ್ಜನ್ಯ ಕಡಿಮೆಯಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಚಿತ್ರ ನಟ ಪ್ರೇಮ್ ಮಾತನಾಡಿ ಅಂಬೇಡ್ಕರ್ ಅವರು ಅಪಾರ ಶ್ರಮದ ಮೂಲಕ ದೊರಕಿಸಿಕೊಟ್ಟ ಮೀಸಲಾತಿಯಿಂದ ಕೇವಲ ಶೇ.೩೫ ಪಡೆದರೆ ಸಾಕು ಎಂಬ ಮನೋಭಾವನೆಯಿಂದ ನಾವೆಲ್ಲರೂ ಸೋಮಾರಿಗಳಾಗುತ್ತಿದ್ಧೇವೆ. ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ವಿದ್ಯಾವಂತರಾಗಿ ಸರ್ಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದ ಮುನ್ನ ಮುತ್ತಿನ ಪಲ್ಲಕ್ಕಿಯಲ್ಲಿ ತಮಟೆ ವಾದ್ಯಗಳೊಂದಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೆರವಣಿಗೆ ನಡೆಸಲಾಯಿತು.ಇದೇ ಸಂದರ್ಭದಲ್ಲಿ ಬಡ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ, ನಿವೃತ್ತ ಸೈನಿಕರಿಗೆ ಮತ್ತು ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕರ್ನಾಟಕ ಜೈ ಭೀಮ್ ಸೇವಾ ಸಂಘದ ಅಧ್ಯಕ್ಷ ಮಂಜುನಾಥ್ ಎಸ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಎ. ಸಮಾಜ ಸೇವಕ ಹೇರೋಹಳ್ಳಿ ವಿ.ಪ್ರಕಾಶ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ರಘು ವಿ., ಎ. ಪಿ. ಹೆಚ್. ಸಿ. ಸದಸ್ಯ ಕುರ್ಲಪ್ಪ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ರಘುನಂದನ್, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಬೈಲಪ್ಪ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ್ ವಿ. ಕರ್ನಾಟಕ ಜೈ ಭೀಮ್ ಸೇವಾ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು