Home ಜಿಲ್ಲೆ ಕಲಬುರಗಿ ಭೀಮಾ ನದಿಗೆ 15 ಟಿಎಮ್‍ಸಿ ನೀರು ನಿಯಮಿತ ಹಂಚಿಕೆ:ಮಹಾರಾಷ್ಟ್ರ ಸಿ.ಎಂ. ಜೊತೆ ಚರ್ಚೆ:ಡಿ.ಕೆ ಶಿವಕುಮಾರ

ಭೀಮಾ ನದಿಗೆ 15 ಟಿಎಮ್‍ಸಿ ನೀರು ನಿಯಮಿತ ಹಂಚಿಕೆ:ಮಹಾರಾಷ್ಟ್ರ ಸಿ.ಎಂ. ಜೊತೆ ಚರ್ಚೆ:ಡಿ.ಕೆ ಶಿವಕುಮಾರ

ಕಲಬುರಗಿ, ಸೆ.18: ಬಚಾವತ್ ಆಯೋಗದ ಐತೀರ್ಪಿನ ಪ್ರಕಾರ ಭೀಮಾ ಸಬ್ ಬೇಸಿನ್‍ನಲ್ಲಿ ರಾಜ್ಯಕ್ಕೆ ಹಂಚಿಕೆಯಾದ 15 ಟಿ.ಎಂ.ಸಿ. ನೀರು ಮಹಾರಾಷ್ಟ್ರದಿಂದ ನಿಯಮಿತವಾಗಿ ಹರಿಸದ ಕಾರಣ ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ರಾಜ್ಯದ ಪಾಲಿನ 15 ಟಿ.ಎಂ.ಸಿ. ನೀರು ಸಕಾಲದಲ್ಲಿ ಬಿಡುಗಡೆ ಮಾಡುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಜೊತೆ ಚರ್ಚಿಸುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ತಿಳಿಸಿದರು.

ನಗರದ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭೀಮಾ ನದಿಗೆ ರಾಜ್ಯದ ಪಾಲಿನ ನೀರು ನಿಯಮಿತವಾಗಿ ಹಂಚಿಕೆಯಾಗುತ್ತಿಲ್ಲ ಎಂಬ ಮಾಹಿತಿ ಇದ್ದು, ಈಗಾಗಲೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಭೆ ನಡೆಸಿದ್ದಾರೆ. ಶಾಸಕ ಎಂ.ವೈ.ಪಾಟೀಲ ಅವರು ನನ್ನ ಗಮನಕ್ಕೆ ತಂದಿದ್ದಾರೆ. ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳಿಂದ ವರದಿ ಪಡೆದು ಮಹಾರಾಷ್ಟ್ರ ಸಿಎಂ ಅವರೊಂದಿಗೆ ಮಾತನಾಡುವೆ ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲಬುರಗಿ ಕೋಟೆ, ಶ್ರೀ ಶರಣಬಸವೇಶ್ವರ ದೇವಸ್ಥಾನ, ಬುದ್ದ ವಿಹಾರ, ಸನ್ನತ್ತಿ, ದೇವಲ ಗಾಣಗಾಪೂರ, ಬೀದರ ಕೋಟೆ, ಬಸವಕಲ್ಯಾಣ, ಹಂಪಿ, ಕನಕಗಿರಿ ಹೀಗೆ ಅನೇಕ ಪ್ರಾಚೀನ, ಐತಿಹಾಸಿಕ ಸ್ಮಾರಕಗಳು ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ಪ್ರವಾಸಿ ತಾಣಗಳಿದ್ದು, ಪ್ರದೇಶದ ಪ್ರವಾಸೋದ್ಯಮ ಉತ್ತೇಜನ ನೀಡಲು ಹೆಚ್ಚಿನ ಒತ್ತು ನೀಡಲಾಗುವುದು. ಕೆ.ಕೆ.ಆರ್.ಡಿ.ಬಿ ಮಂಡಳಿ ಮೂಲಕ ಪ್ರವಾಸಿ ಕ್ಷೇತ್ರದಲ್ಲಿ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದರು.

ಕಸ್ತೂರಿ ರಂಗನ್ ವರದಿ,ಬರಗಾಲ ಕುರಿತು ಚರ್ಚೆಗೆ ವಿಶೇಷ ಅಧಿವೇಶನ: ಪಶ್ಚಿಮ ಘಟ್ಟಗಳ ಸಂರಕ್ಷಣೆ ಮತ್ತು ಪರಿಸರ ರಕ್ಷಣೆಗೆ ಸಂಬಂಧಿಸಿದ ಡಾ.ಕೆ.ಕಸ್ತೂರಿ ರಂಗನ್ ವರದಿ ಕುರಿತಂತೆ ಕೇಂದ್ರ ಸರ್ಕಾರದ ಕರಡು ಅಧಿಸೂಚನೆ ಸಂಬಂಧಿಸಿದಂತೆ ಮತ್ತು ಬರಗಾಲ ಮತ್ತು ರೈತರ ಕುರಿತಂತೆ ಸುದೀರ್ಘವಾಗಿ ಚರ್ಚಿಸಲು ಇದೇ ಸೆ.21 ರಿಂದ ಮೂರು ದಿನಗಳ ಕಾಲ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದು ಸಿ.ಎಂ. ಡಿ.ಕೆಮ ಶಿವಕುಮಾರ ತಿಳಿಸಿದರು.

ಸುಪರ್ ಎಲ್ನಿನೋ ಕಾರಣ ರಾಜ್ಯದಾದ್ಯಂತ ಬರದ ಛಾಯೆ ಇದೆ. ಹಲವು ಕಡೆ ಬೆಳೆ ಕೈ ಕೊಟ್ಟಿದರಿಂದ ರೈತ ಕಂಗಾಲಾಗಿದ್ದಾನೆ. ಬರಗಾಲ ಘೀಷಣೆ ಮಾಡಬೇಕೆಂದರೆ ಕೇಂದ್ರದ ಎನ್.ಡಿ.ಆರ್.ಎಫ್. ಕಟ್ಟುನಿಟ್ಟಿನ ನಿಯಮಾವಳಿ ತಡೆಯೊಡ್ಡುತ್ತಿದೆ ಎಂದ ಅವರು, ರೈತರ ಸಾಲ ಮನ್ನಾ ಕುರಿತಂತೆ ಸುದ್ದಿಗಾರರಿಗೆ ಉತ್ತರಿಸಿ, ದೊಡ್ಡ ದೊಡ್ಡ ಉದ್ದಿಮೆಗಳ ಒನ್ ಟೈಮ್ ಸೆಟ್ಲಮೆಂಟ್ ಮಾಡುವ ಕೇಂದ್ರ ದೇಶದ ಬೆನ್ನೆಲುಬಾಗಿರುವ ಅನ್ಮದಾತನ ಸಾಲ ಮನ್ನಾ ಮಾಡಲು ಮುಂದಾಗಲಿ ಎಂದರು.

ಮಳೆಯಿಲ್ಲದೆ ಒಣಗುತ್ತಿರುವ ಬೆಳೆಗಳನ್ನು ಉಳಿಸಲು ಮತ್ತು ಕೃಷಿ ಭೂಮಿಗೆ ನೀರುಣಿಸಲು ಹಾಗೂ ಕುಡಿಯುವ ನೀರಿನ ಅಭಾವ ನೀಗಿಸುವ ನಿಟ್ಟಿನಲ್ಲಿ ವಿಜ್ಞಾನಿಗಳ ಸಲಹೆಯಂತೆ ಕೃತಕ ಮಳೆ ತರಿಸಲು ಮೋಡ ಬಿತ್ತನೆ ಮಾಡಲು ಕಳೆದ ವಟರವμÉ್ಟ ನಿರ್ಧಾರ ತೆಹೆದುಕೊಳ್ಳಲಾಗಿದೆ. ಎಲ್ಲೆಲ್ಲಿ ಮೋಡ ಇರುತ್ತೆ ಅಲ್ಲಿ ಮೋಡ ಬಿತ್ತನೆ ಮಾಡಲಾಗುವುದು ಎಂದರು.

ಇನ್ನು 2000 ಕ್ಕಿಂತ ಹೆಚ್ಚಿನ ಯುಪಿಐ (UPI) ವಹಿವಾಟಿಗೆ ತೆರಿಗೆ ವಿಧಿಸುವ ಕೇಂದ್ರದ ಪ್ರಸ್ತಾಪವು ಸಣ್ಣ ವ್ಯಾಪಾರಿಗಳು ಹಾಗೂ ಬಡವರ ಮೇಲಿನ ಪಿಕ್ ಪಾಕೆಟ್ ನೀತಿಯಾಗಿದೆ. ಬದುಕಿನ ಜಟಕಾ ಬಂಡಿ ಸಾಗಿಸಲು ಸಣ್ಣ ಪುಟ್ಟ ವ್ಯಾಪಾರ ಮಾಡುವವರಿಗೆ ಹಾಗೂ ವಿಶೇಷವಾಗಿ ಬಡ, ಮಧ್ಯಮ ವರ್ಗಕ್ಕೆ ದೊಡ್ಡ ಹೊಡೆತ ಇದಾಗಿದ್ದು, ತಕ್ಷಣವೇ ಕೇಂದ್ರ ಸರ್ಕಾರ ಇದನ್ನು ಹಿಂಪಡೆಯಬೇಕು ಎಂದು ಸಿ.ಎಂ.ಒತ್ತಾಯಿಸಿದರು.

ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಎಂ.ವೈ.ಪಾಟೀಲ, ಅಲ್ಲಮಪ್ರಭು ಪಾಟೀಲ, ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರ, ಡಿ.ಸಿ. ಇಕ್ರಂ ಶರೀಫ್ ಇದ್ದರು.