Home ಜಿಲ್ಲೆ ಭೂಮಿಯನ್ನು ಉಳಿಸಿಕೊಳ್ಳಲು ರೈತರೆಲ್ಲರು ಸಂಘಟಿತರಾಗಬೇಕು

ಭೂಮಿಯನ್ನು ಉಳಿಸಿಕೊಳ್ಳಲು ರೈತರೆಲ್ಲರು ಸಂಘಟಿತರಾಗಬೇಕು

ಸೈದಾಪುರ:ಏ.೭:ಇಂದಿನ ಸರ್ಕಾರಗಳು ಬಂಡವಾಳ ಶಾಹಿಗಳಗಳ ಪರವಾಗಿದ್ದು ರೈತರ ಭೂಮಿಯನ್ನು ಕೊಳ್ಳೆ ಹೊಡೆಯಲು ಸಿದ್ಧರಾಗಿದ್ದಾರೆ. ಆದ್ದರಿಂದ ಅನ್ನ ನೀಡುವ ನಮ್ಮ ಭೂಮಿಯನ್ನು ಉಳಿಸಿಕೊಳ್ಳಲು ರೈತರೆಲ್ಲರು ಸಂಘಟಿತರಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಸಿರು ಸೇನೆ ರಾಜ್ಯಾಧ್ಯಕ್ಷ ಮಾಧವರೆಡ್ಡಿ ಅಭಿಪ್ರಾಯಪಟ್ಟರು.
ಸಮೀಪದ ಕಡೇಚೂರು-ಬಾಡಿಯಾಳ ಕೈಗಾರಿಕ ಪ್ರದೇಶದಿಂದ ರೈತರು, ಜನಸಾಮಾನ್ಯರಿಗೆ ಉಂಟಾಗುತ್ತಿರುವ ತೊಂದರೆಗಳ ಕುರಿತು ಈ ಹಿಂದೆ ಜನಸಂಗ್ರಾಮ ಪರಿಷತ್ತು ಮತ್ತು ರಾಜ್ಯ ರೈತ ಸಂಘವು ಸರಕಾರಕ್ಕೆ ದೂರು ನೀಡಿತ್ತು. ಅದನ್ನು ಪರಿಶೀಲನೆ ಮಾಡಿ ಶೆಟ್ಟಿಹಳ್ಳಿ ಗ್ರಾಮದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದರು. ಆಧುನಿಕವಾಗಿ ಜಗತ್ತು ಎಷ್ಟೇ ಮುಂದುವರೆದರೂ ಕೂಡ ಹೊಟ್ಟೆಗೆ ಅನ್ನ ನೀಡುವುದು ಮಾತ್ರ ಭೂಮಿ. ಸರ್ಕಾರ ರೈತರಿಂದ ಭೂಮಿಯನ್ನು ತೆಗೆದುಕೊಳ್ಳುವಾಗ ಅನೇಕ ಸುಳ್ಳು ಭರವಸೆಗಳನ್ನು, ಆಸೆ ಆಮಿಸೆಗಳನ್ನು ತೋರಿಸುತ್ತದೆ. ಆದರೆ ಅವುಗಳು ಎಂದಿಗೂ ಕೂಡ ಸಾಕಾರಗೊಳಿಸುವುದಿಲ್ಲ. ಕೊಟ್ಟ ಮಾತಿನಂತೆ ಯಾವುದೇ ಸರ್ಕಾರಗಳು ನಡೆದುಕೊಳ್ಳುವುದಿಲ್ಲ. ಆದ್ದರಿಂದ ಮುಗ್ಧ ರೈತರು ಹಣಕ್ಕಾಗಿ ನಿಮ್ಮ ಭೂಮಿಯನ್ನು ಮಾರಾಟ ಮಾಡಲು ಮುಂದಾಗಬೇಡಿ. ಇದರಿಂದ ಕಷ್ಟ-ನಷ್ಟ ಅನುಭವಿಸುವವರು ನಾವೇ ಹೊರೆತು ಸರ್ಕಾರಗಳಲ್ಲ ಎಂಬುದು ನಾವು ಮೊದಲು ಅರಿತುಕೊಳ್ಳಬೇಕು ಎಂದರು.
ಹಿರಿಯ ನ್ಯಾಯವಾದಿ ಚಾಗನೂರ್ ಮಲ್ಲಿಕಾರ್ಜುನರೆಡ್ಡಿ ಮಾತನಾಡಿ, ಸರ್ಕಾರ ಈ ಭಾಗದ ರೈತರಿಂದ ಭೂಮಿಯನ್ನು ಪಡೆದುಕೊಂಡು ಕೆಮಿಕಲ್ ಕಂಪನಿಗಳ ಸ್ಥಾಪನೆಗೆ ಅವಕಾಶ ನೀಡಿ ಇಲ್ಲಿನ ಪರಿಸರದ ಜೊತೆ ಜಲಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ. ಆದ್ದರಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ ಎಂದು ಭರವಸೆ ನೀಡಿದರು.
ವಿರೇಶ ಸಜ್ಜನ್, ಕಾಶಿನಾಥ ಮಡಿವಾಳ್, ಯಂಕಪ್ಪ ಮಂತ್ರಿ, ಮಹಾದೇವಪ್ಪ ಹೊನ್ನಕೇರಾ, ಮಲ್ಲಿಕಾರ್ಜುನ ತೆಗ್ಗಿನಮನೆ, ಭೀಮಶಪ್ಪ ಗುಡ್ಲೆ, ಬಸಪ್ಪ ಮಡಿವಾಳ್, ಭೀಮಪ್ಪ ಪಾಪನೋರ್, ಮಾಳಪ್ಪ ದದ್ದಲ್, ಅಂಜನೇಯ ಹೊಸಮನಿ, ಮಹೇಶ, ಚಾಂದ್ ಬಾಡಿಯಾಳ್, ಪ್ರಕಾಶ ಗೂಡುರು, ಸೇರಿದಂತೆ ಇತರರಿದ್ದರು.