
ತುಮಕೂರು, ಏ. ೧೪- ರಾಜ್ಯದ ಕಾರಾಗೃಹಗಳಲ್ಲಿ ಕೈದಿಗಳಿಗೆ ಗಾಂಜಾ ಮತ್ತು ಮೊಬೈಲ್ ಪೂರೈಕೆ ಸೇರಿದಂತೆ ಅಕ್ರಮ ಚಟುವಟಿಕೆಗಳನ್ನು ಹತ್ತಿಕ್ಕಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಇಂದಿಲ್ಲಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈಲುಗಳನ್ನು ಶುದ್ಧಿ ಮಾಡಬೇಕು, ಅಕ್ರಮ ಚಟುವಟಿಕೆಗಳಿಗೆ ಆಸ್ಪದವಾಗಬಾರದು ಎಂಬ ಉದ್ದೇಶದಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ಗಾಂಜಾ ಪೂರೈಕೆ, ಮೊಬೈಲ್ ಕೊಡುವುದು ಸೇರಿದಂತೆ ಅನೇಕ ವಿಚಾರಗಳು ಸರ್ಕಾರದ ಗಮನಕ್ಕೆ ಬಂದಿತ್ತು. ಆಗ ನಾವು ಇದನ್ನು ಹತ್ತಿಕ್ಕಲು ಡಿಜಿಯಾಗಿ ಅಲೋಕ್‌ಕುಮಾರ್ ರವರನ್ನು ನೇಮಕ ಮಾಡಿದೆವು. ಅಲೋಕ್‌ಕುಮಾರ್ ರವರು ಜವಾಬ್ದಾರಿ ತೆಗೆದುಕೊಂಡ ಮೇಲೆ ಈ ಎಲ್ಲಾ ವಿಚಾರಗಳು ಬೆಳಕಿಗೆ ಬರುತ್ತಿವೆ ಎಂದರು.
ಕೇಂದ್ರ ಸ್ಥಾನದಲ್ಲಿ ಕುಳಿತು ರಾಜ್ಯದ ಎಲ್ಲಾ ಕಾರಾಗೃಹಗಳನ್ನು ವೀಕ್ಷಣೆ ಮಾಡಲು ತಾಂತ್ರಿಕವಾಗಿ ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ. ಈ ಸಿಸಿ ಟಿವಿಗಳಲ್ಲಿ ಎಐ ಕ್ಯಾಮೆರಾಗಳನ್ನು ಹಾಕಿ, ಅಲ್ಲಿ ಮಾತನಾಡುವುದು ಕೇಂದ್ರ ಸ್ಥಾನದಲ್ಲಿ ಕೇಳಿಸುವಂತೆ ಹೊಸ ಬದಲಾವಣೆಯನ್ನು ತರಲಾಗಿದೆ ಎಂದರು.
ಗಾಂಜಾ, ಡ್ರಗ್ಸ್, ಚಾಕು ಚೂರಿ, ಮೊಬೈಲ್ ಎಲ್ಲವನ್ನು ನಿಲ್ಲಿಸುವಂತಹ ಪ್ರಯತ್ನ ಮಾಡಲಾಗುತ್ತಿದೆ. ಒಂದು ವೇಳೆ ಇದರಲ್ಲಿ ಸಿಬ್ಬಂದಿಗಳು ಭಾಗಿಯಾಗಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕೆಲವು ಸಂದರ್ಭದಲ್ಲಿ ವೃತ್ತಿಯಿಂದ ನಿವೃತ್ತಿ ಮಾಡುವ ಕೆಲಸವನ್ನು ಮಾಡಿದ್ದೇವೆ, ಮುಂದೆಯೂ ಮಾಡುತ್ತೇವೆ ಎಂದು ಅವರು ಹೇಳಿದರು.
ಎರಡು-ಮೂರು ಬಾರಿ ಗೆದ್ದಿರುವ ಶಾಸಕರು ಸಚಿವ ಸ್ಥಾನ ಕೊಡುವಂತೆ ಹೈಕಮಾಂಡ್ ಭೇಟಿ ಮಾಡಿ ಮನವಿ ಮಾಡಿದ್ದಾರೆ. ಇದನ್ನು ತೀರ್ಮಾನ ಮಾಡುವವರು ಹೈಕಮಾಂಡ್. ಹಿರಿಯ ಶಾಸಕರು ಕೇಳಿರುವುದರಲ್ಲಿ ತಪ್ಪೇನಿಲ್ಲ ಎಂದರು.
ನಮ್ಮ ಪಕ್ಷದಲ್ಲಿ ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ಹೇಳಿದರು.
ನಮ್ಮ ಸರ್ಕಾರದಲ್ಲಿ ಮುಖ್ಯಮಂತ್ರಿಗಳು ಇದ್ದಾರೆ. ಮುಖ್ಯಮಂತ್ರಿ ಬದಲಾವಣೆಯಾಗಲೀ, ಸಂಪುಟ ಪುನಾರಚನೆ ಮಾಡುವುದಾಗಲೀ ಎಲ್ಲವನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಯನ್ನು ಹೈಕಮಾಂಡ್ ಗಮನಿಸುತ್ತಿದೆ ಎಂದರು.
ಅಂಬೇಡ್ಕರ್ ರವರು ಮಹಿಳೆಯರ ಹಕ್ಕುಗಳಿಗೋಸ್ಕರ ಅನೇಕ ಹೋರಾಟಗಳನ್ನು ಮಾಡಿದ್ದಾರೆ. ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಕೊಡಬೇಕು ಎಂದು ಹೇಳಿದಾಗ ವಿರೋಧ ವ್ಯಕ್ತವಾಗಿ ಅವರು ರಾಜೀನಾಮೆ ಕೊಡಬೇಕಾಯಿತು. ಕಳೆದ ೧೦-೧೫ ವರ್ಷಗಳ ಹಿಂದೆಯೇ ಕಾಂಗ್ರೆಸ್ ಪಕ್ಷ ಮಹಿಳೆಯರಿ ಮೀಸಲಾತಿ ನೀಡಬೇಕು ಎಂದು ಮಸೂದೆಯನ್ನು ಮಂಡಿಸಿತ್ತು ಎಂದರು.
ಪ್ರಧಾನ ಮಂತ್ರಿಗಳು ಸರ್ವಪಕ್ಷಗಳ ಸಭೆ ಕರೆದು ಅವರ ಅಭಿಪ್ರಾಯವನ್ನು ಸಂಗ್ರಹಿಸಿ ಮಹಿಳಾ ಮೀಸಲಾತಿ ಮಸೂದೆಯನ್ನು ತಂದರೆ ಒಳ್ಳೆಯದಾಗಲಿದೆ ಎಂದು ಅವರು ಹೇಳಿದರು.
ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಅವರು ಪತ್ರಿಕಾಗೋಷ್ಠಿ ನಡೆಸಿ ನನ್ನ ಮೇಲೆ ವೈಯುಕ್ತಿಕವಾಗಿ ಟೀಕೆ ಮಾಡಿದ್ದಾರೆ. ನಾನು ಸಮರ್ಥ ಅಥವಾ ಅಸಮರ್ಥ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ ಎಂದರು.
ತುಮಕೂರಿಗೆ ಬಂದು ಸರ್ಕಾರಿ ವೈದ್ಯಕೀಯ ಕಾಲೇಜಿನ ವಿಚಾರ ಮಾತನಾಡಿದ್ದಾರೆ. ಅವರಿಗೆ ತುಮಕೂರಿನಲ್ಲಿ ಏನೆಲ್ಲಾ ಅಭಿವೃದ್ಧಿಯಾಗಿದೆ ಮತ್ತು ಆಗುತ್ತಿದೆ ಎಂಬುದು ಅವರಿಗೆ ಗೊತ್ತಿಲ್ಲ ಎಂದು ಅವರು ಹೇಳಿದರು.
ತುಮಕೂರಿನಲ್ಲಿ ಕಳೆದ ವರ್ಷ ಪ್ರಥಮ ಬಾರಿಗೆ ಸುಮಾರು ೧೪ ಅಡಿ ಎತ್ತರದ ೧ ಸಾವಿರ ಟನ್ ತೂಕದ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಯನ್ನು ಚರಿತ್ರಾರ್ಹವಾಗಿ ಸ್ಥಾಪನೆ ಮಾಡುವುದರ ಮೂಲಕ ಆಚರಣೆ ಮಾಡಲಾಗಿತ್ತು. ಅದೇ ರೀತಿ ಇಂದು ಸಹ ಅಷ್ಟೇ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದೇವೆ ಎಂದರು.
ದೇಶದ ಪ್ರಜಾಪ್ರಭುತ್ವ ಸ್ಥಾಪನೆಯಾಗಿ ಈವರೆಗೆ ಉಳಿಯಬೇಕಾದರೆ ಅಂಬೇಡ್ಕರ್ ರವರ ಅಡಿಪಾಯವೇ ಕಾರಣ ಎಂದು ಅವರು ಹೇಳಿದರು.
ನೊಂದವರು, ಧ್ವನಿ ಇಲ್ಲದೇ ಇರುವವರು, ಶೋಷಿತರು ಎಲ್ಲರಿಗೂ ಸಮಾನತೆಯನ್ನು ಕೊಡುವ ದೃಷ್ಠಿಯಿಂದ ತಮ್ಮ ಸ್ವಂತ ಅನುಭವವನ್ನು ಕೂಡಾ ಅವರು ನೆನಪಿಸಿಕೊಂಡು ಸಂವಿಧಾನ ರಚನೆ ಮಾಡಿಕೊಟ್ಟಿದ್ದಾರೆ. ಪ್ರತಿಯೊಬ್ಬ ಭಾರತೀಯನಿಗೂ ಕೂಡ ಹಕ್ಕುಗಳ ಜತೆಗೆ ಕರ್ತವ್ಯಗಳನ್ನು ಕೂಡ ನೆನಪು ಮಾಡಿಕೊಟ್ಟಿದ್ದಾರೆ. ಈ ವಿಶೇಷತೆ ಪ್ರಪಂಚದ ಯಾವುದೇ ರಾಷ್ಟ್ರಗಳಲ್ಲಿ ಇರಲು ಸಾಧ್ಯವಿಲ್ಲ ಎಂದರು.
ಮಾಜಿ ಉಪಪ್ರಧಾನಿ ಜಗಜೀವನರಾಮ್ ರವರು ಭಾರತ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ನಮ್ಮ ದೇಶ ಸುಭದ್ರವಾಗಿರಬೇಕು ಎಂಬ ಉದ್ದೇಶದಿಂದ ರಕ್ಷಣಾ ಸಚಿವರಾಗಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಕೃಷಿ ಸಚಿವರಾಗಿ ಆಹಾರ ಕ್ರಾಂತಿಯನ್ನು ಮಾಡಿದ್ದಾರೆ. ಈ ಇಬ್ಬರು ಮಹಾನ್ ನಾಯಕರ ಆದರ್ಶಗಳು, ತತ್ವ ಸಿದ್ದಾಂತಗಳು ಮುಂದಿನ ಪೀಳಿಗೆಗೆ ಸಿಗಲಿ ಎಂದು ಆಶಿಸಿದರು.
ಮುಂದಿನ ಪೀಳಿಗೆಗೆ ಮಹಾನ್ ಚೇತನರ ತತ್ವಾದರ್ಶಗಳು ತಿಳಿಸಬೇಕು ಎಂಬ ಉದ್ದೇಶದಿಂದ ಜಯಂತಿಗಳನ್ನು ಆಚರಣೆ ಮಾಡಲಾಗುತ್ತಿದೆ ಎಂದರು.






















