
ಬೆಂಗಳೂರು.ಏ.೨.-ನಗರದ ಹೃದಯಭಾಗದಲ್ಲಿರುವ ಕೆ.ಆರ್. ಮಾರುಕಟ್ಟೆ ಸಮಗ್ರ ಅಭಿವೃದ್ಧಿಗೆ ವಾರದೊಳಗೆ ಕ್ರಿಯಾ ಯೋಜನೆ ರೂಪಿಸಿ, ಕಾಮಗಾರಿಗಳ ಪೂರ್ಣಗೊಳಿಸುವ ವೇಳಾಪಟ್ಟಿಯನ್ನು ಸಲ್ಲಿಸುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಸುಧಾರಣೆ, ಸಿ.ಸಿ ಕ್ಯಾಮೆರಾಗಳ ಅಳವಡಿಕೆ, ಒಳರಸ್ತೆಗಳಿಗೆ ಕಾಂಕ್ರೀಟ್ ಹಾಸುವುದು ಹಾಗೂ ಹೂವಿನ ಮಾರುಕಟ್ಟೆಗೆ ಸಮರ್ಪಕ ಸಂಪರ್ಕ ಕಲ್ಪಿಸುವಂತೆ ನಿರ್ದೇಶಿಸಿದರು.
ಮಾರುಕಟ್ಟೆಯ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಕುರಿತಾಗಿ ತಕ್ಷಣ ವರದಿ ನೀಡಬೇಕು. ಬಳಿಕ ತ್ವರಿತವಾಗಿ ಅಳವಡಿಕೆ ಕಾರ್ಯ ಆರಂಭಿಸಬೇಕು ಎಂದು ಸೂಚಿಸಿದರು. ಹದಗೆಟ್ಟಿರುವ ಒಳರಸ್ತೆಗಳನ್ನು ದುರಸ್ತಿ ಮಾಡಿ ಕಾಂಕ್ರೀಟ್ ಹಾಸುವ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ಸೂಚನೆ ನೀಡಿದರು.
ಹೂವಿನ ಮಾರುಕಟ್ಟೆಗೆ ಸರಿಯಾದ ಸಂಪರ್ಕದ ಕೊರತೆಯಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ವ್ಯಾಪಾರಸ್ಥರು ಮನವಿ ಮಾಡಿದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ಆಯುಕ್ತರು, ಸುರಕ್ಷತಾ ಕ್ರಮಗಳೊಂದಿಗೆ ಸುಗಮ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ನಿರ್ದೇಶಿಸಿದರು.
ತರಕಾರಿ, ಹಣ್ಣು ಮತ್ತು ಹೂ ಮಾರುಕಟ್ಟೆಗಳಲ್ಲಿ ತ್ಯಾಜ್ಯ ಸಂಗ್ರಹಣೆಗೆ ಟ್ರಾಲಿ ಮತ್ತು ಕ್ರೇಟ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಜೊತೆಗೆ ತ್ಯಾಜ್ಯ ಸಂಗ್ರಹಣೆಗೆ ಶೆಡ್‌ಗಳನ್ನು ನಿರ್ಮಿಸಿ, ಮಾರುಕಟ್ಟೆಯಲ್ಲಿ ಎಲ್ಲಿಯೂ ಕಸ ಚದರದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸ್ವಚ್ಛತೆಗೆ ವಿಶೇಷ ಅಭಿಯಾನ
ಮಾರುಕಟ್ಟೆಯಲ್ಲಿ ಅಶುಚಿತ್ವ ಕಂಡುಬಂದ ಹಿನ್ನೆಲೆ, ಜೆಟ್ ಸ್ಪ್ರೇ ಮತ್ತು ಯಾಂತ್ರಿಕ ಕ್ಲೀನಿಂಗ್ ಮೂಲಕ ಸಮಗ್ರ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಸೂಚಿಸಿದರು.
ಅತ್ಯಾಧುನಿಕ ಪಾರ್ಕಿಂಗ್ ವ್ಯವಸ್ಥೆ ಶೀಘ್ರಾರಂಭ
ಗ್ರಾಹಕರ ಅನುಕೂಲಕ್ಕಾಗಿ ತಳಮಹಡಿಯಲ್ಲಿ ೪೦೦ ದ್ವಿಚಕ್ರ ಮತ್ತು ೨೦೦ ಕಾರುಗಳ ಪಾರ್ಕಿಂಗ್ ವ್ಯವಸ್ಥೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಾರ್ವಜನಿಕ ಬಳಕೆಗೆ ತೆರೆದಿಡಲು ಸೂಚನೆ ನೀಡಲಾಗಿದೆ. ಇಲ್ಲಿ ೬೭ ಎಐ ಆಧಾರಿತ ಕ್ಯಾಮೆರಾ ಹಾಗೂ ೧೨ ಅಲಾರಂ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.
ಹದಗೆಟ್ಟಿರುವ ಫೆನ್ಸಿಂಗ್ ತೆರವು
ಪಾದಚಾರಿಗಳ ಸಂಚಾರಕ್ಕೆ ಹೊಸ ವಿನ್ಯಾಸ
ಮಳೆಗಾಲದ ನೀರಿನ ಹರಿವು ಸುಧಾರಣೆ
ಪಾರ್ಕಿಂಗ್ ಸಂಪರ್ಕ ಕಾಮಗಾರಿ ಒಂದು ವಾರದಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಿದರೆ.
ಕೆ.ಆರ್. ಮಾರುಕಟ್ಟೆಯನ್ನು ಆಧುನಿಕ, ಸ್ವಚ್ಛ ಹಾಗೂ ಸುರಕ್ಷಿತ ಮಾರುಕಟ್ಟೆಯಾಗಿ ರೂಪಿಸುವತ್ತ ನಗರಪಾಲಿಕೆ ಗಂಭೀರ ಹೆಜ್ಜೆ ಇಟ್ಟಿದೆ.


















