
ಜಮಖಂಡಿ:.ಮೇ.02 ನಗರದ ಕೆಟ್ಟ ಕೆರೆ ಹಾಗೂ ನಿಲಗೀರಿ ನಿಂಗಪ್ಪ ದೇವಸ್ಥಾನದ ಅರಣ್ಯ ಪ್ರದೇಶದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ ಸುಮಾರು 20 ಏಕರೆಗೂ ಅಧಿಕ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿದೆ.
ಅಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲೇ ವ್ಯಾಪಕವಾಗಿ ಹರಡಿ ಅರಣ್ಯದ ಬಹು ಭಾಗವನ್ನು ಆವರಿಸಿತು. ಸ್ಥಳೀಯರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿ ಬೆಂಕಿ ನಂದಿಸಲು ಹರಸಾಹಸಪಟ್ಟರು.
ಉಪ ವಲಯ ಅರಣ್ಯಾಧಿಕಾರಿ ವಿನೋದ ಜೈನಾಪುರ ಅವರ ನೇತೃತ್ವದಲ್ಲಿ ಗಸ್ತು ಅರಣ್ಯ ಪಾಲಕ ಸಿದ್ದು ಕುಳಲಿ, ಸದಾಶಿವ ಮಾಂಗ, ನಿಂಗಪ್ಪ ಸಿದ್ದಾಪುರ, ಪುಂಡಲಿಕ ಪೂಜಾರಿ, ಸಿದ್ದಲಿಂಗ ಮಾದರ, ಲಕ್ಷ್ಮಣ ತಳವಾರ, ಕಿರಣ ಮಾದರ, ಸತೀಶ ಹಲಗಲಿ, ಬಸವರಾಜ ನ್ಯಾಮಗೌಡ ಸೇರಿದಂತೆ ಅನೇಕರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿ ಕೊನೆಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಯಶಸ್ವಿಯಾದರು.
ಅಗ್ನಿ ಅವಘಡದ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಬಿಸಿಲಿನ ತಾಪಮಾನ ಹೆಚ್ಚಳ ಹಾಗೂ ಒಣಗಿದ ಗಿಡಗಂಟುಗಳಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಘಟನೆಯಿಂದ ಅರಣ್ಯ ಸಂಪತ್ತಿಗೆ ಭಾರೀ ನಷ್ಟ ಉಂಟಾಗಿದ್ದು, ಪರಿಸರದ ಮೇಲೆ ಪರಿಣಾಮ ಬೀರಿದೆ.






















