ಮೂಲನಿವಾಸಿ ಮಹಾಪುರುಷರ ಸಮಾನತೆ-ಸಾಮಾಜಿಕ ನ್ಯಾಯದ ಸಂದೇಶ ಪಾಲನೆಗೆ ಉಸ್ತುರಿ ಶ್ರೀ ಕರೆ

ಆಳಂದ:ಮಾ.೨: ಭಾರತೀಯ ಮೂಲನಿವಾಸಿ ಮಹಾಪುರುಷ ಸಮಾನತೆ-ಸಾಮಾಜಿಕ ನ್ಯಾಯದ ಸಂದೇಶಗಳು ಅಳವಡಿಸಿಕೊಂಡು ಜಾತಿ, ವರ್ಗ, ಲಿಂಗ ಭೇದ ಮರೆತು ಮಾನವೀಯತೆಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಶಕ್ತ ಸಮಾಜ ನಿರ್ಮಾಣ ಸಾಧ್ಯವಿದೆ. ಎಂದು ಉಸ್ತುರಿ ಧುತ್ತರಗಾಂವ ಮಠದ ಶ್ರೀ ವಿಶ್ವನಾಥ ಕೋರಣೇಶ್ವರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ದೇಗಾಂವ ಗ್ರಾಮದಲ್ಲಿ ಭೀಮಸೇನೆ ಆಶ್ರಯದಲ್ಲಿ ರಮಾಬಾಯಿ ಜಯಂತಿ ಹಾಗೂ ಕರ್ನಾಟಕ ಭೀಮಸೇನೆ ಗ್ರಾಮ ಶಾಖೆ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ರಮಾಬಾಯಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಶೋಷಿತರ ಧ್ವನಿಯಾಗಿ, ಶಿಕ್ಷಣ ಮತ್ತು ಸಾಮಾಜಿಕ ಜಾಗೃತಿಗೆ ಜೀವನ ಸಮರ್ಪಿಸಿದ ಮಹಾನ್ ವ್ಯಕ್ತಿತ್ವ. ಅವರ ಆದರ್ಶಗಳು ಇಂದಿನ ಸಮಾಜಕ್ಕೂ ದಿಕ್ಕು ತೋರಿಸುತ್ತವೆ. ಬುದ್ಧ, ಬಸವ ಡಾ. ಬಿ.ಆರ್.ಅಂಬೇಡ್ಕರ ಸೇರಿದಂತೆ ಮೂಲನಿವಾಸಿ ಮಹಾಪುರುಷ ಆದರ್ಶಗಳನ್ನು ಆಚರಣೆ ತರಬೇಕು ಎಂದು ಅವರು ಸಲಹೆ ನೀಡಿದರು.
ಗ್ರಾಮಶಾಖೆ ಉದ್ಘಾಟನೆ ನೆರವೇರಿಸಿದ ಜಿಲ್ಲಾ ದಲಿತ ಮುಖಂಡ ಸಂತೋಷ ಹಾದಿಮನಿ ಮಾತನಾಡಿ, “ಭೀಮಸೇನೆ ಸಂಘಟನೆ ಸಮಾಜದ ಅಂಚಿನಲ್ಲಿರುವವರ ಹಕ್ಕುಗಳಿಗಾಗಿ ಹೋರಾಟ ನಡೆಸುವ ವೇದಿಕೆಯಾಗಿದೆ. ಗ್ರಾಮ ಮಟ್ಟದಲ್ಲಿ ಶಾಖೆಗಳ ಸ್ಥಾಪನೆ ಮೂಲಕ ಸಂಘಟನೆ ಬಲಗೊಳ್ಳುತ್ತಿದ್ದು, ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ತತ್ವಗಳಡಿ ಯುವಜನತೆಯನ್ನು ಮುನ್ನಡೆಸುವ ಕಾರ್ಯ ನಡೆಯಲಿ ಎಂದು ತಿಳಿಸಿದರು.
ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬಾಬುರಾವ್ ಅರುಣೋದಯ ಜಯಂತಿ ಉದ್ಘಾಟಿಸಿ ಮಾತನಾಡಿ, “ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ಶಿಕ್ಷಣ ಹಾಗೂ ಸಂಘಟನೆಯೇ ಮೂಲ. ಗ್ರಾಮೀಣ ಮಟ್ಟದಲ್ಲಿ ಜಾಗೃತಿ ಮೂಡಿಸಿ, ಅಭಿವೃದ್ಧಿಯ ಹಾದಿಯಲ್ಲಿ ಸಾಗಲು ಎಲ್ಲರೂ ಕೈಜೋಡಿಸಬೇಕು” ಎಂದರು.
ಭೀಮಸೇನೆ ಜಿಲ್ಲಾಧ್ಯಕ್ಷ ಸಂಜಯ ಬೋಸ್ಲೆ ಮಾತನಾಡಿ, “ಸಂಘಟಿತ ಶಕ್ತಿ ಮಾತ್ರ ಶೋಷಣೆಯ ವಿರುದ್ಧ ಧ್ವನಿಯಾಗಬಲ್ಲದು. ಪ್ರತಿಯೊಬ್ಬರೂ ಸಂವಿಧಾನದ ಮೌಲ್ಯಗಳನ್ನು ಅರಿತು, ಸಮಾನ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು” ಎಂದು ಕರೆ ನೀಡಿದರು.
ಭೀಮಸೇನೆ ತಾಲೂಕ ಯುವ ಅಧ್ಯಕ್ಷ ನೀತಿನ ಡೊಲೆ ಅಧ್ಯಕ್ಷತೆ ವಹಿಸಿ ಮಾತನಾಡಿ, “ಯುವಶಕ್ತಿ ಸಮಾಜ ಪರಿವರ್ತನೆಯ ಪ್ರಮುಖ ಚಾಲಕ. ರಮಾಬಾಯಿ ಅವರ ಜೀವನದಿಂದ ಪ್ರೇರಣೆ ಪಡೆದು ಸೇವೆ, ತ್ಯಾಗ ಮತ್ತು ಹೋರಾಟದ ಹಾದಿಯನ್ನು ಯುವಕರು ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಜ್ವಲ ಡೊಲೆ, ಉಪನ್ಯಾಸಕ ಜಿತೆಂದ್ರ ತಳವಾರ ತಮ್ಮ ವಿಚಾರಗಳನ್ನು ಹಂಚಿಕೊAಡರು. ನಾಗರ ಸಿಂಗೆ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.
ಮಹಿಳಾ ಘಟಕದ ಗಜಾಬಾಯಿ ಆರ್ಯ, ಸುನಂದ ಸಿಂಗೆ, ಬಂಡೆಮ್ಮ, ಚಂದ್ರಕಲಾ ನಡಗೇರಿ ಸೇರಿದಂತೆ ಹಲವಾರು ಮಹಿಳೆಯರು ಸಕ್ರಿಯವಾಗಿ ಪಾಲ್ಗೊಂಡು, ಸಮಾಜ ಪರಿವರ್ತನೆಯಲ್ಲಿ ಮಹಿಳೆಯರ ಪಾತ್ರದ ಮಹತ್ವವನ್ನು ಒತ್ತಿ ಹೇಳಿದರು. ಸಂತೋಷ, ಪ್ರಕಾಶ ತೋಳೆ, ಶಿವುಪ್ರಸನ್ನ ಜೈಭೀಮ ಸುಳ್ಳದ, ಮಹೇಶ ಪೋತೆ, ರವಿ ಗಾಯಕವಾಡ, ಶೇಖರ ಎನ್, ಸಂತೋಷಕುಮಾರ ಪಾಟೀಲ, ಮಲ್ಲಿಕಾರ್ಜುನ ಮೇಲಿನಕೇರಿ, ಕೈಲಾಸ್, ಸಾಗರ, ಸೋಮು ಶೆಟಗಾರ, ಗ್ರಾಮ ಶಾಖೆ ಅಧ್ಯಕ್ಷ ಕಿರಣ ಮೇಲಿನಕೇರಿ ಸೇರಿದಂತೆ ಅನೇಕ ಗಣ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು. ಪ್ರಣಯ ಡೊಲೆ ನಿರೂಪಿಸಿದರು.