Home ಜಿಲ್ಲೆ ಬೆಂಗಳೂರು ಶಿಕ್ಷಕರ ಆಶಯದಂತೆ ಶಿಥಿಲಾವಸ್ಥೆಯಲ್ಲಿದ್ದ ಗುರುಭವನ ನವೀಕರಣ

ಶಿಕ್ಷಕರ ಆಶಯದಂತೆ ಶಿಥಿಲಾವಸ್ಥೆಯಲ್ಲಿದ್ದ ಗುರುಭವನ ನವೀಕರಣ

ರಾಮನಗರ,ನ.೮-ರಾಮನಗರದಲ್ಲಿ ಹಲವು ವರ್ಷಗಳಿಂದ ಶಿಥಿಲಾವಸ್ಥೆ ಯಲ್ಲಿದ್ದ ಗುರುಭವನವನ್ನು ನಗರಸಭೆಯ ೨೭ ಲಕ್ಷ ರೂಪಾಯಿ ಅನುದಾನದಲ್ಲಿ ನವೀಕರಿಸಲಾಗಿದ್ದು, ಇದರೊಂದಿಗೆ ಶಿಕ್ಷಕರ ಬಹುದಿನಗಳ ಆಶಯ ಈಡೇರಿದೆ ಎಂದು ನಗರಸಭಾಧ್ಯಕ್ಷ ಕೆ. ಶೇಷಾದ್ರಿ ಶಶಿ ತಿಳಿಸಿದ್ದಾರೆ.


ನವೀಕರಣಗೊಂಡ ಗುರುಭವನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಆರಂಭದಲ್ಲಿ ಈ ಭವನವು ನಗರಸಭೆ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಲಾಗಿತ್ತು. ಆದರೆ ಶಿಕ್ಷಕರ ಸಂಘಟನೆಯ ಪ್ರಮುಖರು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ, ಅಗತ್ಯ ಸೌಲಭ್ಯ ಕಲ್ಪಿಸಲು ಮುಂದಾಗಿದ್ದಾಗಿ ತಿಳಿಸಿದರು. ಮೇಲ್ಚಾವಣಿ ದುರಸ್ತಿ, ಫ್ಯಾನ್, ಕಿಟಕಿ, ಬಾಗಿಲು, ಕುಡಿಯುವ ನೀರಿನ ಸೌಲಭ್ಯ ಹಾಗೂ ಶೌಚಾಲಯಗಳ ನವೀಕರಣ ಕಾರ್ಯವನ್ನು ಕೈಗೊಳ್ಳಲಾಗಿದೆ. ಸಮಾಜದ ಭವಿಷ್ಯ ರೂಪಿಸುವ ಶಿಕ್ಷಕರಿಗೆ ಉತ್ತಮ ಸೌಲಭ್ಯಗಳು ದೊರೆಯಬೇಕು ಎಂಬ ಉದ್ದೇಶದಿಂದ ಈ ಅನುದಾನ ಬಳಸಲಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ತಮ್ಮ ಅಧಿಕಾರದ ಕೊನೆಯ ದಿನದಂದು ಗುರುಭವನವನ್ನು ಉದ್ಘಾಟಿಸುತ್ತಿರುವುದು ಶಿಕ್ಷಕರ ಸೇವೆ ಮಾಡಿದ ತೃಪ್ತಿ ನೀಡಿದೆ ಎಂದರು.


ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಚ್. ಹನುಮಯ್ಯ ಮಾತನಾಡಿ, ೧೯೯೩ರಲ್ಲಿ ಶಂಕುಸ್ಥಾಪನೆಗೊಂಡು ೨೦೦೫ರಲ್ಲಿ ಲೋಕಾರ್ಪಣೆಗೊಂಡಿದ್ದ ಈ ಗುರುಭವನವು ನಿರ್ವಹಣೆಯ ಕೊರತೆಯಿಂದ ಪಾಳುಬಿದ್ದ ಸ್ಥಿತಿಯಲ್ಲಿತ್ತು. ಪ್ರಸ್ತುತ ನಗರಸಭಾಧ್ಯಕ್ಷರು ಅನುದಾನ ನೀಡಿ ನವೀಕರಿಸುವ ಮೂಲಕ ಕಟ್ಟಡಕ್ಕೆ ನವಚೈತನ್ಯ ನೀಡಿದ್ದಾರೆ ಎಂದರು.


ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ, ಅಕ್ಷರ ದಾಸೋಹ ಪರಿವೀಕ್ಷಕ ಸಂತೋಷ್, ನಿವೃತ್ತ ಪ್ರಾಂಶುಪಾಲ ಜಿ. ಶಿವಣ್ಣ, ಪ್ರೌಢಶಾಲಾ ವಿಭಾಗದ ಅಧ್ಯಕ್ಷ ಪ್ರದೀಪ್ ಕುಮಾರ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.