
ಮಾಲೂರು,ನ.೮- ಮಾಲೂರು ಶಾಸಕ ಕೆ.ವೈ. ನಂಜೇಗೌಡ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ.) ದಾಖಲಿಸಿದ್ದ ಪ್ರಕರಣವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರದ್ದುಪಡಿಸಿರುವುದು ನ್ಯಾಯಕ್ಕೆ ಸಂದ ಜಯವಾಗಿದೆ ಎಂದು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ವಿಜಯನರಸಿಂಹ ಹೇಳಿದ್ದಾರೆ.
ನಗರದ ಮಾರುತಿ ಬಡಾವಣೆ ಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾಲೂರು ಹಾಗೂ ಮಾಸ್ತಿ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ೨೦೨೪ರಲ್ಲಿ ಬಿಜೆಪಿ ಸರ್ಕಾರವು ಇ.ಡಿ.ಯನ್ನು ದುರುಪಯೋಗಪಡಿಸಿಕೊಂಡು ಶಾಸಕ ಕೆ.ವೈ. ನಂಜೇಗೌಡ ಅವರ ನಿವಾಸದ ಮೇಲೆ ದಾಳಿ ನಡೆಸಿ ಮಾನಸಿಕ ಕಿರುಕುಳ ನೀಡಿತ್ತು. ನಂತರ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಸಂವಿಧಾನಾತ್ಮಕವಾಗಿ ಈ ಪ್ರಕರಣದ ತನಿಖೆ ನಡೆಸುವ ಅಧಿಕಾರ ಇ.ಡಿ.ಗೆ ಇಲ್ಲವೆಂದು ಪ್ರಶ್ನಿಸಿ ಶಾಸಕರು ಹೈಕೋರ್ಟ್ ಮೊರೆ ಹೋಗಿದ್ದರು ಎಂದು ತಿಳಿಸಿದರು.
ಕೋಮುಲ್ ನೇಮಕಾತಿ ಪ್ರಕರಣದ ವಿಚಾರಣೆಗೆ ಇ.ಡಿ.ಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿ, ಶಾಸಕರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಿದೆ. ನ್ಯಾಯಮೂರ್ತಿ ಅರುಣ್ ಅವರ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದ್ದು, ನ್ಯಾಯಾಂಗದ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ ಎಂದು ಹೇಳಿದರು. ೨೦೨೪ರ ಸೆಪ್ಟೆಂಬರ್ ೧೨ ರಂದು ಶಾಸಕ ನಂಜೇಗೌಡ ಅವರ ನಿವಾಸ ಹಾಗೂ ಕೋಮುಲ್ ಕಚೇರಿ ಒಳಗಿನ ಮೇಲೆ ಇ.ಡಿ. ದಾಳಿ ನಡೆಸಿತ್ತು. ಕೋಮುಲ್ನ ೭೬ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಹಾಗೂ ನಿರ್ದೇಶಕರು ಕೋಟ್ಯಂತರ ರೂಪಾಯಿ ಲಂಚ ಪಡೆದಿದ್ದಾರೆ ಎಂಬ ಆರೋಪದ ಹಿನ್ನೆಲೆ ತನಿಖೆ ಆರಂಭಿಸಲಾಗಿತ್ತು. ಈ ಪ್ರಕರಣವನ್ನು ರದ್ದುಪಡಿಸುವಂತೆ ಶಾಸಕರು ನ್ಯಾಯಾಲಯದ ಮೊರೆ ಹೋಗಿದ್ದರು.
ಶಾಸಕರು ಕಾನೂನುಬದ್ಧವಾಗಿ ನ್ಯಾಯಾಂಗದ ಹಾದಿಯಲ್ಲಿ ಹೋರಾಟ ನಡೆಸಿ ಮರು ಮತ ಎಣಿಕೆಯಲ್ಲಿಯೂ ತಮ್ಮ ಗೆಲುವು ಸಾಧಿಸಿದ್ದಾರೆ. ಇದರಿಂದ ಕ್ಷೇತ್ರದ ಜನರಲ್ಲಿ ಉಂಟಾಗಿದ್ದ ಗೊಂದಲಗಳಿಗೆ ತೆರೆ ಬಿದ್ದಂತಾಗಿದೆ ಎಂದು ವಿಜಯ ನರಸಿಂಹ ಹೇಳಿದರು.
ಮಾಲೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ. ಕೃಷ್ಣಪ್ಪ ಮಾತನಾಡಿ, ಶಾಸಕರ ವಿರುದ್ಧ ದಾಖಲಿಸಲಾಗಿದ್ದ ಇ.ಡಿ. ಪ್ರಕರಣವನ್ನು ನ್ಯಾಯಾಲಯ ರದ್ದುಪಡಿಸಿರುವುದು ಪ್ರತಿಪಕ್ಷಗಳಿಗೆ ನಡುಕ ಉಂಟುಮಾಡಿದೆ, ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುತ್ತಿರುವ ಶಾಸಕರ ವಿರುದ್ಧ ವಿರೋಧ ಪಕ್ಷದವರು ರೂಪಿಸಿದ್ದ ಸಂಚು ಫಲಿಸಲಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಒಗ್ಗಟ್ಟಿನಿಂದ ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಕೆ.ವೈ. ನಂಜೇಗೌಡ ನೀಡಿರುವ ಕೊಡುಗೆ ಅಪಾರವಾಗಿದ್ದು, ಜನಪರ ಆಡಳಿತದಿಂದ ಕ್ಷೇತ್ರದ ಜನರಲ್ಲಿ ಹೆಮ್ಮೆ ಮೂಡಿದೆ. ಜನರಲ್ಲಿ ಗೊಂದಲ ಸೃಷ್ಟಿಸಲು ರಾಜಕೀಯ ಉದ್ದೇಶದಿಂದ ಪ್ರಕರಣಗಳನ್ನು ದಾಖಲಿಸುವುದು ಸರಿಯಲ್ಲ ಎಂದೂ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಸೋಮಶೇಖರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಆಂಜಿನಪ್ಪ, ಉಪಾಧ್ಯಕ್ಷ ಅಶ್ವತ್ರೆಡ್ಡಿ, ಸಹಕಾರಿ ಯೂನಿಯನ್ ನಿರ್ದೇಶಕ ಗೋವರ್ಧನ್ ರೆಡ್ಡಿ, ದರಕಾಸ್ತು ಸಮಿತಿ ಅಧ್ಯಕ್ಷ ಎಸ್.ಸಿ.ನಾರಾಯಣಸ್ವಾಮಿ, ಮುಖಂಡರಾದ ಚಾಕನಹಳ್ಳಿ ನಾಗರಾಜ್, ಪದ್ಮಪ್ಪ, ವಕೀಲ ರಮೇಶ್ ಬಾಬು, ಮಾಸ್ತಿ ಬ್ಲಾಕ್ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ವಸಂತ್, ಮಂಜುನಾಥ್ ರೆಡ್ಡಿ, ಅಬ್ಬಯ್ಯಪ್ಪ, ನಾರಾಯಣರೆಡ್ಡಿ, ನಾಗರಾಜ್ರೆಡ್ಡಿ, ಪ್ರವೀಣ್, ಚಿಟ್ಟಿ ಮಂಜು, ಸೇರಿದಂತೆ ಹಲವರು ಉಪಸ್ಥಿತರಿದ್ದರು.























