
ಕಲಬುರಗಿ,ನ.7-ಸೈಬರ್ ವಂಚಕರು ಇಬ್ಬರು ವ್ಯಕ್ತಿಗಳ ಮೊಬೈಲ್ ಹ್ಯಾಕ್ ಮಾಡಿ ಅವರ ಬ್ಯಾಂಕ್ ಖಾತೆಯಿಂದ 2.82 ಲಕ್ಷ ರೂ.ವರ್ಗಾವಣೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮೂಲತ: ಯಾದಗಿರಿ ಜಿಲ್ಲೆಯವರಾದ ಸೇಡಂ ರಸ್ತೆಯ ವಿರೇಶ ನಗರದಲ್ಲಿರುವ ತಮ್ಮ ಸಹೋದರಿಯ ಮನೆಯಲ್ಲಿ ವಾಸವಿರುವ ಶರಣಬಸಪ್ಪ ಕಾಡಾನೊರ ಎಂಬುವವರ ಮೊಬೈಲ್ ಹ್ಯಾಕ್ ಆಗಿದ್ದು, ಸುಮಾರು ಒಂದು ಗಂಟೆಯವರೆಗೆ ಮೊಬೈಲ್ ಬಳಸಲು ಬಾರದೆ ರೀತಿಯಾಗಿದೆ. ನಂತರ ಮೊಬೈಲ್ ಆನ್ ಆದ ಮೇಲೆ ಅವರ ಒಂದು ಬ್ಯಾಂಕ್ ಖಾತೆಯಿಂದ 47 ಸಾವಿರ ಮತ್ತು ಇನ್ನೊಂದು ಬ್ಯಾಂಕ್ ಖಾತೆಯಿಂದ 99 ಸಾವಿರ ರೂಪಾಯಿ ಸೇರಿ 1.46 ಲಕ್ಷ ರೂ.ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ.
ಇನ್ನೊಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬರ ವ್ಯಾಟ್ಸಪ್ಗೆ ಸೈಬರ್ ವಂಚಕ ಎಪಿಕೆ ಲಿಂಕ್ ಕಳುಹಿಸಿದ್ದು, ಅವರು ಆ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಮೊಬೈಲ್ ಹ್ಯಾಕ್ ಅಗಿದೆ. ಸೈಬರ್ ವಂಚಕರು ಇವರ ಬ್ಯಾಂಕ್ ಖಾತೆಯಿಂದ 1,36,500 ರೂ.ವರ್ಗಾವಣೆ ಮಾಡಿಕೊಂಡಿದ್ದಾರೆ.
ಈ ಎರಡೂ ಪ್ರಕರಣಗಳ ಬಗ್ಗೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ತನಿಖೆ ನಡೆದಿದೆ.





















