
ಸಂಜೆ ವಾಣಿ ವಾರ್ತೆ |
ಜಮಖಂಡಿ:ಕಬ್ಬಿಗೆ ಪ್ರತಿ ಟನ್ಗೆ ೫,೫೦೦ ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ನಡೆದ ರೈತರ ಹೋರಾಟಕ್ಕೆ ಇನ್ನೂ ಸ್ಪಷ್ಟ ಅಂತಿಮ ನಿರ್ಧಾರ ಸಿಗದ ಹಿನ್ನೆಲೆಯಲ್ಲಿ, ಜಮಖಂಡಿ ತಾಲೂಕಿನ ಕಂಕನವಾಡಿ ಕ್ರಾಸ್ನಲ್ಲಿ ರೈತರು ಕಬ್ಬು ತುಂಬಿಕೊAಡು ಸಾಗುತ್ತಿದ್ದ ಟ್ರ್ಯಾಕ್ಟರ್ಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಕಾರ್ಖಾನೆ ಮಾಲೀಕರ ಧೋರಣೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರೈತರು, ನ್ಯಾಯಯುತ ದರ ನಿಗದಿಯಾಗುವವರೆಗೆ ಕಬ್ಬು ಕಟಾವು ಮಾಡಬಾರದು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಸದಾಶಿವ ಕವಟಗಿ, ಜಮಖಂಡಿ ತಾಲೂಕಾಡಳಿತ ಸೌಧದ ಎದುರು ಸತತ ೧೧ ದಿನಗಳ ಕಾಲ ನಡೆದ ರೈತರ ಹೋರಾಟವು ಕೇವಲ ಒಂದು ಜಿಲ್ಲೆಯ ಹೋರಾಟವಾಗಿರಲಿಲ್ಲ. ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ರೈತರು ಒಗ್ಗಟ್ಟಿನಿಂದ ಪ್ರತಿ ಟನ್ ಕಬ್ಬಿಗೆ ೫,೫೦೦ ಬೆಲೆ ನೀಡುವಂತೆ ಆಗ್ರಹಿಸಿದ್ದರು. ಆದರೆ ರೈತರ ಪ್ರಮುಖ ಬೇಡಿಕೆ ಇನ್ನೂ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾರ್ಖಾನೆ ಮಾಲೀಕರು ಮೊದಲ ಕಂತಾಗಿ ಪ್ರತಿ ಟನ್ಗೆ ?೩,೬೦೦ ನೀಡುವುದಾಗಿ ಒಪ್ಪಿಕೊಂಡಿದ್ದರು. ಕಾರ್ಖಾನೆಗಳನ್ನು ಆರಂಭಿಸಿದ ನಂತರ ಸರ್ಕಾರದ ನಿರ್ಧಾರಕ್ಕೆ ಅನುಗುಣವಾಗಿ ಮುಂದಿನ ಹಣ ಪಾವತಿಸುವ ಭರವಸೆ ನೀಡಿದ್ದರು. ಈ ಒಪ್ಪಂದದ ಆಧಾರದ ಮೇಲೆ ರೈತರು ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಒಪ್ಪಿಕೊಂಡಿದ್ದರು ಎಂದು ತಿಳಿಸಿದರು.
ಆದರೆ ಇದೀಗ ಕಾರ್ಖಾನೆ ಮಾಲೀಕರು ೩,೫೦೦ ಮುಂಗಡವಾಗಿ ನೀಡಿ, ಕಾರ್ಖಾನೆ ಬಂದ್ ಮಾಡುವ ಸಂದರ್ಭದಲ್ಲಿ ಉಳಿದ ೧೦೦ ನೀಡುವುದಾಗಿ ಹೊಸ ಪ್ರಸ್ತಾವನೆ ಮುಂದಿಟ್ಟಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾಡಳಿತದ ಸಮ್ಮುಖದಲ್ಲಿ ೩,೬೦೦ ನೀಡುವುದಾಗಿ ಒಪ್ಪಿಕೊಂಡಿದ್ದ ಕಾರ್ಖಾನೆ ಮಾಲೀಕರು ಈಗ ಮಾತು ಬದಲಿಸುತ್ತಿರುವುದು ಸರಿಯಲ್ಲ ಎಂದು ಕವಟಗಿ ಕಿಡಿಕಾರಿದರು.
ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳಿಗೂ ಏಕರೂಪದ ದರ ಅನ್ವಯವಾಗಬೇಕು. ಈ ಹಿಂದೆ ನಡೆದ ಸಭೆಯ ಒಪ್ಪಂದದAತೆ ಪ್ರತಿ ಟನ್ಗೆ ೩,೬೦೦ ಮುಂಗಡ ಹಣವನ್ನು ತಕ್ಷಣ ಪಾವತಿಸಬೇಕು. ಈ ಕುರಿತು ಕಾರ್ಖಾನೆ ಮಾಲೀಕರು ಲಿಖಿತ ಮುಚ್ಚಳಿಕೆ ನೀಡಬೇಕು. ಇಲ್ಲದಿದ್ದರೆ ರೈತರು ಕಾರ್ಖಾನೆ ಆರಂಭಿಸಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಕಂಕನವಾಡಿ ಕ್ರಾಸ್ನಲ್ಲಿ ನೂರಾರು ಕಬ್ಬು ತುಂಬಿದ ಟ್ರ್ಯಾಕ್ಟರ್ಗಳು ಸಾಲುಗಟ್ಟಿ ನಿಂತಿದ್ದು, ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತು. ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆದರೂ ರೈತರು ತಮ್ಮ ನಿಲುವಿನಿಂದ ಹಿಂದೆ ಸರಿಯಲಿಲ್ಲ.
‘ರೈತರು ಕಬ್ಬು ಕಡಿಯಬೇಡಿ!’
ಮೂರು ತಿಂಗಳ ಕಾಲ ಹೋರಾಟ ನಡೆಸಿ ಬೀದಿಗಿಳಿದ ರೈತರಿಗೆ ನ್ಯಾಯಯುತ ಬೆಲೆ ಸಿಗಬೇಕಿದೆ. ಈ ಹಿಂದೆ ನೀಡಿದ ಭರವಸೆಯಂತೆ ೩,೬೦೦ ಮುಂಗಡ ಹಣ ನೀಡುವ ಬಗ್ಗೆ ಕಾರ್ಖಾನೆ ಮಾಲೀಕರು ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು. ರೈತರ ಒಪ್ಪಿಗೆ ಹಾಗೂ ಲಿಖಿತ ಒಪ್ಪಂದವಾಗುವವರೆಗೆ ಯಾರೂ ಕಬ್ಬು ಕಟಾವು ಮಾಡಬಾರದು ಮತ್ತು ಕಾರ್ಖಾನೆ ಆರಂಭಿಸಲು ಸಹಕರಿಸಬಾರದು ಎಂದು ಸದಾಶಿವ ಕವಟಗಿ ರೈತ ಸಮುದಾಯಕ್ಕೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಗುರಯ್ಯ ಪೂಜಾರಿ, ಕರೆಪ್ಪ ಸುರಗಾವಿ, ಕಲ್ಲಪ್ಪ ಬಿರಾದಾರ, ಪೈಗಂಬರ ಮೋಮಿನ, ಅಶೋಕ ಕುಳಲಿ, ಮದಗೊಂಡ ಗೋಠೆ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.




















