
ತುಮಕೂರು, ನ. ೨- ತಾಲ್ಲೂಕಿನ ಹೆಬ್ಬೂರು ಹೋಬಳಿಯ ನಾಗವಲ್ಲಿ ಗ್ರಾಮ ಪಂಚಾಯ್ತಿ ಆವರಣದಲ್ಲಿ ತೋಪಿನ ರಂಗನಾಥ ಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ ವತಿಯಿಂದ ಸತ್ಯ ಹರಿಶ್ಚಂದ್ರ ಎಂಬ ನಾಟಕ ಪ್ರದರ್ಶನವಾಯಿತು. ಸುತ್ತಮುತ್ತಲ ಗ್ರಾಮಸ್ಥರು ನಾಟಕ ವೀಕ್ಷಿಸಿ ಸಂಭ್ರಮಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ನಾಟಕಗಳು ಮನರಂಜನೆ ಜತೆಗೆ ಗ್ರಾಮಸ್ಥರಲ್ಲಿ ಭಾವೈಕ್ಯತೆ ಮೂಡಿಸುತ್ತವೆ. ಗ್ರಾಮೀಣ ಭಾಗದ ಜನರ ಕಲಾ ಪ್ರತಿಭೆ ಹೊರ ಬರಲು ರಂಗಭೂಮಿ ಪ್ರಮುಖ ವೇದಿಕೆಯಾಗಿದೆ ಎಂದರು.
ಹೆಬ್ಬೂರು ಜಿಲ್ಲಾ ಪಂಚಾಯ್ತಿ ಟಿಕೆಟ್ ಆಕಾಂಕ್ಷಿ, ಕಾಂಗ್ರೆಸ್ ಪಕ್ಷದ ಮುಖಂಡ ದೀಪು, ಈ ನಾಟಕ ತಂಡಕ್ಕೆ ೫೦ ಸಾವಿರ ರೂ. ದೇಣಿಗೆ ನೀಡಿ ಪ್ರೋತ್ಸಾಹಿಸಿದರು. ನಂತರ ಮಾತನಾಡಿದ ಅವರು, ಗ್ರಾಮಸ್ಥರು ಒಟ್ಟುಗೂಡಿ ನಾಟಕ ಆಡಿ ತಮ್ಮ ಕಲಾ ಪ್ರದರ್ಶನ ಮಾಡುವುದು ಉತ್ತಮ ಬೆಳವಣಿಗೆ. ಕನಿಷ್ಟ ವರ್ಷಕ್ಕೊಮ್ಮೆಯಾದರೂ ಗ್ರಾಮದ ಕಲಾಸಕ್ತರು ಒಟ್ಟುಗೂಡಿ ನಾಟಕ ಅಭ್ಯಾಸ ಮಾಡಿ ಅಭಿನಯಿಸಬೇಕು ಎಂದರು.
ರಂಗಕಲೆ ಈ ಮಣ್ಣಿನ ಕಲೆ. ನಶಿಸಿಹೋಗುತ್ತಿರುವ ನಾಟಕ ಕಲೆಯನ್ನು ಉಳಿಸಿ ಬೆಳೆಸಬೇಕು. ಸಮಾಜಕ್ಕೆ ಉತ್ತಮ ಸಂದೇಶ ನೀಡುವ, ಸಮಾಜ ಪರಿವರ್ತನೆಯ ನಾಟಕಗಳನ್ನು ಅಭಿನಯಿಸಬೇಕು. ಮುಂದಿನ ತಲೆಮಾರಿನವರಿಗೆ ನಾಟಕ ಕಲೆಯ ಆಸಕ್ತಿ ಬೆಳೆಸಬೇಕು. ಕಲಾವಿದರಿಗೆ ಈ ಸಮಾಜದಲ್ಲಿ ವಿಶೇಷವಾದ ಗೌರವವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ನಾಗವಲ್ಲಿ ರಾಮಣ್ಣ. ಲೀಲಾಮೂರ್ತಿ. ವಿಜಯಕುಮಾರ್. ಹನುಮಂತರಾಜು. ಕೊಡಿಮುದ್ದನಹಳ್ಳಿ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
























