Home ಜಿಲ್ಲೆ ಕಲಬುರಗಿ ಮಹಿಳಾ ಶಿಕ್ಷಣದಿಂದ ಸಾಧನೆ ಸಾಧ್ಯ, ಮಕ್ಕಳ ಹಕ್ಕುಗಳ ಅರಿವು ಅಗತ್ಯ: ಲತಾ ರವಿ ರಾಠೋಡ್

ಮಹಿಳಾ ಶಿಕ್ಷಣದಿಂದ ಸಾಧನೆ ಸಾಧ್ಯ, ಮಕ್ಕಳ ಹಕ್ಕುಗಳ ಅರಿವು ಅಗತ್ಯ: ಲತಾ ರವಿ ರಾಠೋಡ್

ಕಲಬುರಗಿ: ನಗರದ ಸೇಂಟ್ ಮೇರಿ ಚರ್ಚ್‍ನ ಮದರ್ ತೆರೇಸಾ ಸಭಾಂಗಣದಲ್ಲಿ ನ.2ರಂದು ಮಾರ್ಗದರ್ಶಿ ಸಂಸ್ಥೆಯ ವತಿಯಿಂದ ಜಿಲ್ಲಾಮಟ್ಟದ ಮಕ್ಕಳ ಹಕ್ಕುಗಳ ಸಂಸತ್-2026 ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಕಲಬುರಗಿ ಮಹಾನಗರ ಪಾಲಿಕೆ ಸದಸ್ಯೆ ಹಾಗೂ ಮಾಜಿ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಲತಾ ರವಿ ರಾಠೋಡ್ ಉದ್ಘಾಟಿಸಿ ಮಾತನಾಡಿ, ಮಹಿಳೆಯಾಗಿ ತಾವು ನಡೆದುಬಂದ ಹಾದಿ, ಶಿಕ್ಷಣ ಪಡೆಯಲು ಎದುರಿಸಿದ ಸವಾಲುಗಳು ಹಾಗೂ ಶಿಕ್ಷಣದಿಂದ ಜೀವನದಲ್ಲಿ ಸಾಧಿಸಬಹುದಾದ ಯಶಸ್ಸಿನ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು. ಹೆಣ್ಣುಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣ ಪಡೆದ ಮಹಿಳೆ ತನ್ನ ಬದುಕನ್ನು ರೂಪಿಸಿಕೊಳ್ಳುವುದರ ಜೊತೆಗೆ ಸಮಾಜದಲ್ಲಿಯೂ ಮಹತ್ವದ ಬದಲಾವಣೆ ತರಲು ಸಾಧ್ಯ ಎಂದು ಹೇಳಿ ವಿದ್ಯಾರ್ಥಿನಿಯರಲ್ಲಿ ಆತ್ಮಸ್ಥೈರ್ಯ ತುಂಬಿದರು.
ಕಾರ್ಯಕ್ರಮದ ಘನ ಉಪಸ್ಥಿತಿಯನ್ನು ಸೇಂಟ್ ಮೇರಿ ಚರ್ಚ್‍ನ ಪ್ರಾಂಶುಪಾಲರಾದ ಫಾದರ್ ಪ್ರವೀಣ್ ಜೋಸೆಫ್ ವಹಿಸಿದ್ದರು. ದೈವಾನುಗ್ರಹ ಮಾತೆ ಮಹಾದೇವಾಲಯದ ಮಹಾಗುರುಗಳು ಸಾನ್ನಿಧ್ಯ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಸೂರ್ಯಕಾಂತ್ ಜಮಖಂಡಿ ಮಾತನಾಡಿ, ಶಿಕ್ಷಣದ ಮಹತ್ವವನ್ನು ವಿವರಿಸಿದರು. ಯಾವುದೇ ಕಾರಣಕ್ಕೂ ಮಕ್ಕಳು ಶಾಲೆಯಿಂದ ಹೊರಗುಳಿಯಬಾರದು. ಶಿಕ್ಷಣವು ಮಕ್ಕಳ ಭವಿಷ್ಯ ರೂಪಿಸುವ ಅಮೂಲ್ಯ ಅಸ್ತ್ರವಾಗಿದ್ದು, ಪ್ರತಿಯೊಬ್ಬ ಮಗುವೂ ಶಿಕ್ಷಣದ ಹಕ್ಕನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವಿಶ್ವರಾಧ್ಯ ಇಚೇರಿ ಮಾತನಾಡಿ, ಮಕ್ಕಳಿಗೆ ಬದುಕುವ ಹಕ್ಕು, ಭಾಗವಹಿಸುವ ಹಕ್ಕು, ರಕ್ಷಣೆಯ ಹಕ್ಕು ಹಾಗೂ ವಿಕಾಸದ ಹಕ್ಕುಗಳಿದ್ದು, ಪ್ರತಿಯೊಂದು ಮಗುವಿನ ಹಕ್ಕುಗಳನ್ನು ಗೌರವಿಸಿ ರಕ್ಷಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಮಕ್ಕಳ ಹಕ್ಕುಗಳ ಕುರಿತು ಸವಿಸ್ತಾರವಾಗಿ ತಿಳಿಸಿದರು.
ಮಾರ್ಗದರ್ಶಿ ಸಂಸ್ಥೆಯ ನಿರ್ದೇಶಕ ಆನಂದರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಸಂಸತ್‍ನ ಉದ್ದೇಶ, ಕಾರ್ಯವೈಖರಿ ಹಾಗೂ ಅದರ ಮಹತ್ವವನ್ನು ವಿವರಿಸಿದರು. ಜಿಲ್ಲಾಮಟ್ಟದ ಮಕ್ಕಳ ಹಕ್ಕುಗಳ ಸಂಸತ್-2026ರಲ್ಲಿ ಆಯ್ಕೆಯಾಗುವ ಮಕ್ಕಳಿಗೆ ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸುವ ಅವಕಾಶ ದೊರೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ತೀರ್ಪುಗಾರರಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಭರತೇಶೀಲವಂತ, ಬಸವರಾಜ್ ಎನ್., ಡಾನ್ ಬಾಸ್ಕೋ ಸಂಸ್ಥೆಯ ಸಹನಿರ್ದೇಶಕಿ ಗೀತಾ ಹಾಗೂ ಮಕ್ಕಳ ಸಹಾಯವಾಣಿಯ ಸಮಾಜಸೇವಕ ಸಂತೋಷ್ ಕುಮಾರ್ ಕಾರ್ಯನಿರ್ವಹಿಸಿದರು.
ಜಿಲ್ಲಾಮಟ್ಟದ ಮಕ್ಕಳ ಹಕ್ಕುಗಳ ಸಂಸತ್-2026ರಲ್ಲಿ ಭಾಗವಹಿಸಿ, ರಾಜ್ಯಮಟ್ಟದ ಮಕ್ಕಳ ಹಕ್ಕುಗಳ ಸಂಸತ್-2026ಕ್ಕೆ ಆಯ್ಕೆಯಾದ ಮೀಣಜಿಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕುಮಾರಿ ಮೀನಾಕ್ಷಿ ಹಾಗೂ ಕಲಬುರಗಿಯ ಸರ್ಕಾರಿ ಬಾಲಕಿಯರ ಬಾಲಮಂದಿರದ ಕುಮಾರಿ ಬಸಮ್ಮ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸರ್ಕಾರಿ ಬಾಲಕರ ಪರಿವೀಕ್ಷಣಾ ನಿಲಯದ ಅಧೀಕ್ಷಕರು ಹಾಗೂ ಪ್ರಭಾರಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಮಕ್ಕಳ ಸಹಾಯವಾಣಿಯ ಸಂಯೋಜಕ ಬಸವರಾಜ್ ತೆಂಗಳಿ, ಆಪ್ತ ಸಮಾಲೋಚಕ ಮಲ್ಲಯ್ಯ ಗುತ್ತೇದಾರ್, ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು, ಸರ್ಕಾರಿ ಬಾಲಕಿಯರ ಬಾಲಮಂದಿರದ ಮಕ್ಕಳು, ಶಿಕ್ಷಕ ವೃಂದದವರು ಹಾಗೂ ಮಾರ್ಗದರ್ಶಿ ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು.
ಮಾರ್ಗದರ್ಶಿ ಸಂಸ್ಥೆಯ ಸಂಯೋಜಕಿ ಶೀತಲ್ ಸ್ವಾಗತಿಸಿದರು. ಕುಮಾರಿ ಪ್ರಿಯಾಂಕ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.