
ಕೋಲಾರ, ಅ. ೨೭- ವಾಲ್ಮೀಕಿ ಎಂದೊಡನೆ ನಮಗೆ ನೆನಪಾಗುವುದೇ ರಾಮಾಯಣ. ಅವರ ಇತಿಹಾಸದ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಬೇಡರ ಕಣ್ಣಪ್ಪ, ಏಕಲವ್ಯ, ಚಿತ್ರದುರ್ಗದ ಕೊನೆಯ ಪಾಳೆಯಗಾರ ಮದಕರಿನಾಯಕ ಸೇರಿದಂತೆ ಅನೇಕ ಮಹನೀಯರು ಈ ಸಮುದಾಯದವರು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಹಾಯಕ ನಿರ್ದೇಶಕ ಟಿ.ಎಸ್. ರವಿಕುಮಾರ್ ತಿಳಿಸಿದರು.
ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಇಡೀ ಸಮಾಜವೇ ಗೌರವಿಸುವ, ಪೂಜಿಸುವ ರಾಮನ ನಿಜ ಕಥೆ ಬರೆದ ವಾಲ್ಮೀಕಿ ಕೇವಲ ಒಂದು ಜಾತಿ, ಸಮುದಾಯಕ್ಕೆ ಸೀಮಿತವಲ್ಲ, ರಾಮನಿಗೆ ಪೂಜೆ ಸಲ್ಲುವ ಕಡೆ ಹನುಮಂತನಿಗೆ ಹಾಗೂ ವಾಲ್ಮೀಕಿಗೆ ಪೂಜೆ ಸಲ್ಲುತ್ತದೆ, ಅಂತಹ ಆದಿಕವಿಯನ್ನು ಪಡೆದ ಭಾರತೀಯರು ಧನ್ಯರು ಎಂದರು.
ರಾಮಾಯಣ ಮಹಾಕಾವ್ಯ ಬರೆಯುವ ಮೂಲಕ ಸತತ ಪರಿಶ್ರಮವಿದ್ದಲ್ಲಿ ಸಾಧನೆ ಮಾಡಬಹುದು ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ವಿಶ್ವಕ್ಕೆ ರಾಮಾಯಣದಂತಹ ಮಹಾನ್ ಗ್ರಂಥವನ್ನು ನೀಡಿದ ವಾಲ್ಮೀಕಿ ಮಾನವಕುಲಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ವಾಲ್ಮೀಕಿಯಂತೆ ಬುದ್ಧ, ಬಸವಣ್ಣ, ಕನಕದಾಸರು, ಅಂಬೇಡ್ಕರ್ ಅವರು ಕೂಡ ಸಾಮಾಜಿಕ ಸಮಾನತೆಗಾಗಿ ಹೋರಾಟ ಮಾಡಿದ್ದಾರೆ, ಆದ್ದರಿಂದ ಇವರನ್ನು ಸದಾ ಸ್ಮರಿಸಬೇಕಿದೆ ಎಂದರು.
ಎಪಿಎಂಸಿ ಸಹಾಯಕ ಕಾರ್ಯದರ್ಶಿ ಎಂ. ಮುನಿರಾಜು ಮಾತನಾಡಿ, “ಮಾನವೀಯತೆಯೇ ಧರ್ಮ ಎಂಬುದನ್ನು ಪ್ರತಿಪಾದಿಸಿದ ದಾರ್ಶನಿಕ ಮಹರ್ಷಿ ವಾಲ್ಮೀಕಿ ಅವರ ಜೀವನಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿದು, ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಅವರ ಮಾರ್ಗದರ್ಶನದಲ್ಲಿ ನಡೆವಂತೆ ನಾವು ಅವರಿಗೆ ಗೌರವ ಕೊಟ್ಟಂತೆ ಆಗುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ಎಪಿಎಂಸಿ ಸಿ.ಎಂ. ಅರುಣ, ಮೂರ್ತಿ, ನಳಿನಿ, ಅನಿಲ್, ಸುಜಾತಮ್ಮ, ಚಾಲಕರಾದ ಲೋಕೇಶ್, ಶಂಕರ್, ಸಿಬ್ಬಂದಿ ಸತೀಶಕುಮಾರ್, ಶ್ರೀನಿವಾಸ, ಗೋಪಮ್ಮ, ಸುಹಾಸ್, ಗುರು, ದೀಪ್, ಪ್ರದೀಪ್, ಲೋಕೇಶ್ ಮತ್ತಿತರರಿದ್ದರು.


























