
ಬೆಳಗಾವಿ, ಅ. ೨೬- ಕಬ್ಬು ಬೆಳೆಗಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಳಗಾವಿಯ ಸುವರ್ಣಸೌಧದಲ್ಲಿಂದು ಸರಣಿ ಸಭೆಗಳನ್ನು ನಡೆಸಿದರು.
ಪ್ರತಿ ಟನ್ ಕಬ್ಬಿಗೆ ೧ ಸಾವಿರ ರೂಪಾಯಿ ಹೆಚ್ಚುವರಿ ದರ ಬೇಡಿಕೆ ಸೇರಿದಂತೆ ಕಬ್ಬು ಬೆಳೆಗಾರರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕಳೆದ ವಾರ ರಾಜ್ಯದ ವಿವಿಧೆಡೆ ಪ್ರತಿಭಟನೆ ರಸ್ತೆ ತಡೆ, ಪಾದಯಾತ್ರೆಗಳನ್ನು ನಡೆಸಿದ್ದರು.
ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಳಗಾವಿಯ ಸುವರ್ಣಸೌಧದದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ನಡೆಸುವುದಾಗಿ ಹೇಳಿದ್ದರು.
ಮುಖ್ಯಮಂತ್ರಿಗಳ ಭರವಸೆ ಮೇರೆಗೆ ಕಬ್ಬು ಬೆಳೆಗಾರರು ತಾತ್ಕಾಲಿಕವಾಗಿ ತಮ್ಮ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದ್ದರು.
ರೈತರಿಗೆ ನೀಡಿದ್ದ ಭರವಸೆಯಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಸುವರ್ಣಸೌಧದಲ್ಲಿ ಸರಣಿ ಸಭೆಗಳನ್ನು ನಡೆಸಿ, ರೈತರ ಬೇಡಿಕೆಗಳ ಈಡೇರಿಕೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಿದರು.
ನಿನ್ನೆ ಕಿತ್ತೂರು ಉತ್ಸವದಲ್ಲಿ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಅಲ್ಲಿಯೇ ಉಳಿದುಕೊಂಡಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಬೆಳಿಗ್ಗೆ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಬೆಳಗಾವಿ ನಾಗನೂರು ಮಠಕ್ಕೆ ಭೇಟಿ ನೀಡಿದ ನಂತರ ಸುವರ್ಣ ಸೌಧಕ್ಕೆ ಆಗಮಿಸಿ, ಸಭೆ ನಡೆಸಿದರು.
ಮೊದಲಿಗೆ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆ
ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಡಿ.ಕೆ. ಶಿವಕುಮಾರ್ ಮೊದಲಿಗೆ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆಸಿ, ಚರ್ಚೆ ನಡೆಸಿದರು. ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆ ಸಂಬಂಧ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಬಗ್ಗೆ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆಸಿ ಚರ್ಚಿಸಿದರು.
ರೈತ ಮುಖಂಡರ ಜೊತೆ ಚರ್ಚೆ
ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಭೆ ನಡೆಸಿದ ನಂತರ ರೈತ ಮುಖಂಡರ ಜೊತೆಯೂ ಪ್ರತ್ಯೇಕ ಸಭೆ ನಡೆಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರೈತರ ಅಹವಾಲುಗಳನ್ನು ಆಲಿಸಿ, ರೈತರ ಹಿತ ಕಾಯುವ ಭರವಸೆ ನೀಡಿದರು.
ಇದಾದ ಬಳಿಕ ಕಬ್ಬು ಬೆಳೆಯುವ ಪ್ರದೇಶಗಳ ಜನಪ್ರತಿನಿಧಿಗಳ ಜೊತೆಯೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚರ್ಚಿಸಿದರು.
ಸಿಎಂ ಹೇಳಿಕೆ
ಕಬ್ಬು ಬೆಳೆಗಾರರ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರೈತರ ಹಿತ ಮುಖ್ಯ. ಹಾಗಾಗಿ ಇಂದು ರೈತರ ಜೊತೆ ಸಕ್ಕರೆ ಕಾರ್ಖಾನೆ ಜೊತೆ ಹಾಗೂ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ, ಎಲ್ಲರ ಅಭಿಪ್ರಾಯಗಳನ್ನು ಆಲಿಸಿ, ಒಂದು ಸೂಕ್ತ ತೀರ್ವಾನ ಕೈಗೊಳ್ಳುವುದಾಗಿ ಹೇಳಿದರು.
ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರವನ್ನು ವಿಶ್ವಾಸ ತೆಗೆದುಕೊಳ್ಳಲೇ ಬೇಕು. ಕೇಂದ್ರದ್ದೇ ಹೆಚ್ಚು ಜವಾಬ್ದಾರಿ ನಮ್ಮದೇನಿದ್ದರೂ ಶೇ. ೧೦ ರಷ್ಟೇ ಜವಾಬ್ದಾರಿ. ಹಾಗಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದರು.
























