Home Lead News ಟೌನ್‌ಶಿಪ್ ಹೋರಾಟ ತಾರಕಕ್ಕೆ

ಟೌನ್‌ಶಿಪ್ ಹೋರಾಟ ತಾರಕಕ್ಕೆ

ರಾಮನಗರ, ಜು. ೧೪- ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಮಹಿಳೆಯರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಂಡಿದೆ. ನಿನ್ನೆ ಟೌನ್‌ಶಿಪ್ ಯೋಜನೆ ಸಂಬಂಧ ಬಿಡದಿಯ ಮಂಡಲ ಹಳ್ಳಿಯಲ್ಲಿ ಭೂಸಮೀಕ್ಷೆಗಾಗಿ ಬಂದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಬೆನ್ನಲ್ಲೇ ಇಂದು ಮಹಿಳೆಯರು ವಿಷದ ಬಾಟಲಿ ಪ್ರದರ್ಶಿಸಿ ಉಗ್ರ ಪ್ರತಿಭಟನೆ ನಡೆಸಿದರು.


ಹೋಬಳಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಗೆ (ಜಿಬಿಐಟಿ) ಕುರಿತಂತೆ ಬೈರಮಂಗಲದಲ್ಲಿ ಬಿಡದಿ ಟೌನ್‌ಶಿಪ್ ಯೋಜನೆ ಕುರಿತಂತೆ ಪರ ಮತ್ತು ವಿರುದ್ಧ ನಡೆಯುತ್ತಿರುವ ಹೋರಾಟಗಳು ತಾರಕಕ್ಕೇರಿದೆ.


ಯೋಜನೆ ವಿರುದ್ಧ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿರುವ ರೈತರು ಜಂಟಿ ಪ್ರಮಾಣಿಕರಣ (ಜೆಎಂಸಿ) ವಿರೋಧಿಸಿ ಇಂದು ಮಹಿಳಾ ರೈತರು ಕೈಯಲ್ಲಿ ವಿಷದ ಬಾಟಲಿಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಇವರ ಕೂಗಳತೆ ದೂರದಲ್ಲಿ ಯೋಜನೆ ಪರವಾಗಿ ಧರಣಿ ನಡೆಸುತ್ತಿರುವ ರೈತರು ಜೆಎಂಸಿಗೆ ಆಗ್ರಹಿಸಿ ರಸ್ತೆತಡೆ ನಡೆಸಿದರು.


ಒಂದೆಡೆ ಟೌನ್‌ಶಿಪ್ ವಿರುದ್ಧದ ಘೋಷಣೆ ಮೊಳಗಿದರೆ ಮತ್ತೊಂದಡೆ ಟೌನ್‌ಶಿಪ್ ಪರ ಘೋಷಣೆ ಕೇಳಿ ಬಂದಿವೆ. ಸುದ್ಧಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಬಿಡದಿ ಠಾಣೆ ಇನ್ಸ್‌ಪೆಕ್ಟರ್ ವಿಜಯ್ ಕುಮಾರ್ ರಸ್ತೆತಡೆ ನಡೆಸದಂತೆ ರೈತರ ಮನವೊಲಿಸಲು ಮುಂದಾದರು. ಆದರೆ ಈ ಮನವೊಲಿಕೆಗೆ ಬಗ್ಗದ ಪ್ರತಿಭಟನಾನಿರತ ರೈತರು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷಾಧಿಕಾರಿ ಭೇಟಿ ನೀಡಬೇಕು. ತಕ್ಷಣ ಜಮೀನುಗಳಲ್ಲಿ ಜೆಎಂಸಿ ಆರಂಭಿಸಬೇಕು ಎಂದು ಒತ್ತಾಯಿಸಿದರು.


ನಿನ್ನೆ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ ವಿರೋಧಿಸಿ, ಜಂಟಿ ಸಮೀಕ್ಷೆ ನಡೆಸಲು ಬಂದಿದ್ದ ಅಧಿಕಾರಿ ಜಿಬಿಡಿಎ ಅಧಿಕಾರಿಗಳ ಮೇಲೆ ರೈತ ಮಹಿಳೆಯರು ಪೊರಕೆಯಿಂದ ದಾಳಿ ನಡೆಸಿ, ಆಕ್ರೋಶ ಹೊರಹಾಕಿದರು. ಉದ್ರಿಕ್ತಗುಂಪು ಕಲ್ಲುತೂರಾಟ ನಡೆಸಿ, ಎರಡು ವಾಹನಗಳನ್ನು ಜಖಂಗೊಳಿಸಿತ್ತು. ಘಟನೆಯಲ್ಲಿ ಮೂವರು ಪೊಲೀಸರು ಸೇರಿದಂತೆ ರೈತನೋರ್ವ ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನಾ ರೈತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಯೋಜನೆ ಕೈ ಬಿಡಿ ಡಿಕೆಶಿಗೆ ಎಚ್‌ಡಿಡಿ ಪತ್ರ


ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನುಷ್ಠಾನಗೊಳಿಸಲು ಉದ್ದೇಶಿಸಿರುವ ’ಗ್ರೇಟರ್ ಬೆಂಗಳೂರು ಬಿಡದಿ ಸಮಗ್ರ ಉಪನಗರ ಯೋಜನೆ’ಯನ್ನು ತಕ್ಷಣವೇ ಕೈಬಿಡಬೇಕೆಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.


ಯೋಜನೆಗಾಗಿ ರಾಮನಗರ ಮತ್ತು ಹಾರೋಹಳ್ಳಿ ತಾಲೂಕಿನ ಒಟ್ಟು ೯ ಹಳ್ಳಿಗಳ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ರೈತರ ಹಿತದೃಷ್ಟಿಯಿಂದ ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.


ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಗಾಗಿ ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಬೈರಮಂಗಲ, ಬನಗಿರಿ, ಹೊಸೂರು,

ಕೆ.ಜಿ.ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ಅರಳಾಳುಸಂದ್ರ, ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ಹಾಗೂ ಹಾರೋಹಳ್ಳಿ ತಾಲೂಕಿನ ವಡೇರಹಳ್ಳಿ (ಭಾಗಶಃ) ಗ್ರಾಮಗಳ ಒಟ್ಟು ೭,೪೮೧ ಎಕರೆ ೨೧.೦೮ ಗುಂಟೆ ಕೃಷಿ ಜಮೀನನ್ನು ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ೧೮,೧೩೩ ಕೋಟಿ ರೂ.ಗಳ ಅಂದಾಜು ವೆಚ್ಚದ ಈ ಯೋಜನೆಗೆ ಈಗಾಗಲೇ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆಯಡಿ ಅನುಮೋದನೆ ನೀಡಲಾಗಿದ್ದು, ಇದನ್ನು ವಿರೋಧಿಸಿ ಸ್ಥಳೀಯ ರೈತರು ನಿರಂತರ ಹೋರಾಟ ನಡೆಸುತ್ತಿದ್ದಾರೆ ಎಂದು ದೇವೇಗೌಡರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.


“ಬೆಂಗಳೂರು ನಗರ ನಿವಾಸಿಗಳಿಗೆ ವಸತಿ ಕಲ್ಪಿಸುವ ಹೆಸರಿನಲ್ಲಿ ಈ ಯೋಜನೆ ಮಾಡಲಾಗುತ್ತಿದೆ. ಆದರೆ, ಈಗಾಗಲೇ ಸರ್ಕಾರ ಅಭಿವೃದ್ಧಿಪಡಿಸಿರುವ ಡಾ. ಶಿವರಾಮ ಕಾರಂತ ಲೇಔಟ್ ಹಾಗೂ ನಾಡಪ್ರಭು ಕೆಂಪೇಗೌಡ ಲೇಔಟ್‌ಗಳಲ್ಲಿ ಸಾವಿರಾರು ನಿವೇಶನಗಳು ಹಂಚಿಕೆಯಾಗದೆ ಖಾಲಿ ಬಿದ್ದಿವೆ. ಇದರ ಜೊತೆಗೆ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್-೨ (ಪಿಆರ್ ಆರ್-೨) ಗೆ ಹೊಂದಿಕೊಂಡಂತೆ ಇನ್ನೂ ೬ ಹೊಸ ಬಡಾವಣೆಗಳನ್ನು ರಚಿಸಲಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಮತ್ತೊಂದು ಉಪನಗರದ ಹೆಸರಿನಲ್ಲಿ ರೈತರ ಕೃಷಿ ಭೂಮಿಯನ್ನು ಕಿತ್ತುಕೊಳ್ಳುವುದು ನ್ಯಾಯವಲ್ಲ” ಎಂದು ಮಾಜಿ ಪ್ರಧಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.


“ಈಗಾಗಲೇ ಬಿಡದಿ ಮತ್ತು ಹಾರೋಹಳ್ಳಿಯಲ್ಲಿ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಕೆಐಎಡಿಬಿ ಮೂಲಕ ವಶಪಡಿಸಿಕೊಂಡು ಕೈಗಾರಿಕೆಗಳಿಗೆ ನೀಡಲಾಗಿದೆ. ಈಗ ಮತ್ತೆ ಬೃಹತ್ ಪ್ರಮಾಣದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೆ ಸ್ಥಳೀಯ ರೈತರು ಬೀದಿಪಾಲಾಗಲಿದ್ದಾರೆ. ಆದ್ದರಿಂದ ಸಾರ್ವಜನಿಕರು ಹಾಗೂ ರೈತರ ಹಿತದೃಷ್ಟಿಯಿಂದ ಬಿಡದಿ ಉಪನಗರ ಯೋಜನೆಯನ್ನು ತಕ್ಷಣವೇ ಕೈಬಿಡಬೇಕು” ಎಂದು ಹೆಚ್.ಡಿ. ದೇವೇಗೌಡರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

ಎಫ್‌ಐಆರ್ ವಾಪಸ್ಸಿಗೆ ನಿಖಿಲ್ ಆಗ್ರಹ


ಬಿಡದಿ ಟೌನ್‌ಶಿಪ್ ಹೋರಾಟಗಾರರ ಮೇಲೆ ಸರ್ಕಾರ ದಾಖಲಿಸಿರುವ ಎಫ್ ಐಆರ್ ರದ್ದುಪಡಿಸಬೇಕೆಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರ್ ಸ್ವಾಮಿ ಆಗ್ರಹಿಸಿದ್ದಾರೆ.


ಅಮಾಯಕ ರೈತರ ಮೇಲೆ ಎಫ್ ಐಆರ್ ದಾಖಲಿಸಿರುವ ಕಾಂಗ್ರೆಸ್ ಸರ್ಕಾರದ ದೌರ್ಜನ್ಯವನ್ನು ಎಕ್ಸ್ ಖಾತೆಯಲ್ಲಿ ತೀವ್ರವಾಗಿ ಖಂಡಿಸಿದ್ದಾರೆ. ಯಾವುದೇ ಮಾಹಿತಿಯಿಲ್ಲದೆ ರೈತರ ಭೂಮಿಗೆ ನುಗ್ಗಿ ಜಂಟಿ ಮಾಪನ ಮಾಡಲು ಅಧಿಕಾರಿಗಳು ಮುಂದಾಗಿದ್ದರು. ಅದನ್ನು ಪ್ರಶ್ನಿಸಿದ ರೈತರ ಹೋರಾಟವನ್ನು ಹತ್ತಿಕ್ಕಲು ಜನವಿರೋಧಿ ಸರ್ಕಾರ ಎಫ್ ಐಆರ್ ಅಸ್ತ್ರ ಬಳಸಿ ಬೆದರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಕಾಂಗ್ರೆಸ್ ಸರ್ಕಾರದ ದಬ್ಬಾಳಿಕೆಗೆ ರೈತರು ಹೆದರುವ ಅಗತ್ಯವಿಲ್ಲ. ನ್ಯಾಯ ಯುತ ಹೋರಾಟಕ್ಕೆ ಅಗತ್ಯವಿರುವ ಕಾನೂನು ನೆರವು ಹಾಗೂ ಬೆಂಬಲ ನೀಡಲು ನಾವೆಲ್ಲರೂ ನಿಮ್ಮ ಜೊತೆ ಇರಲು ಸಿದ್ಧರಿದ್ದೇವೆ. ಎರಡು ದಿನದಲ್ಲಿ ರೈತರ ಮೇಲೆ ದಾಖಲಿಸಿರುವ ಸುಳ್ಳು ಎಫ್ ಐಆರ್ ರದ್ದುಪಡಿಸಿ ವಶಕ್ಕೆ ಪಡೆದಿರುವ ಅಮಾಯಕ ರೈತರನ್ನು ತಕ್ಷಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಜನವಿರೋಧಿ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.