Home Lead News ಕೆಪಿಎಸ್‌ಸಿ ಅಧ್ಯಕ್ಷರ ಅಮಾನತು

ಕೆಪಿಎಸ್‌ಸಿ ಅಧ್ಯಕ್ಷರ ಅಮಾನತು

ಪ್ರಭುದೇವ್ ಹಂಗಾಮಿ ಅಧ್ಯಕ್ಷ

ಬೆಂಗಳೂರು, ಜು.೧೩- ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿ ರಾಜ್ಯಪಾಲರು ಆದೇಶ ಹೊರಡಿಸಿ, ಆರೋಪಗಳ ಕುರಿತು ಸುಪ್ರೀಂಕೋರ್ಟ್ ತನಿಖೆ ನಡೆಸುವಂತೆ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿದ್ದಾರೆ.


ಪುತ್ರಿಗೆ ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ಅಧಿಕಾರ ದುರುಪಯೋಗಪಡಿಸಿಕೊಂಡು ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರದಲ್ಲಿ ಸುಳ್ಳು ಆದಾಯ ನಮೂದಿಸಲು ಸಹಕರಿಸಿದ ಆರೋಪ ಎದುರಿಸುತ್ತಿರುವ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಅಮಾನತು ಮಾಡಿ ಹಿರಿಯ ಸದಸ್ಯ ಟಿ. ಪ್ರಭುದೇವ್ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ, ರಾಜ್ಯಪಾಲರು ಅಧಿಸೂಚನೆ ಹೊರಡಿಸಿದ್ದಾರೆ.


ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಅವರ ವಿರುದ್ಧ ಸ್ವಜನ ಪಕ್ಷಪಾತ, ಮಾಹಿತಿಯನ್ನು ಬಹಿರಂಗಪಡಿಸದೇ ಇರುವುದು ಇತ್ಯಾದಿ ದೂರುಗಳು ಬಂದಿದ್ದು, ಅವರ ಪುತ್ರಿಯನ್ನು ಅಧಿಕಾರ ದುರುಪಯೋಗಪಡಿಸಿಕೊಂಡು ಕಾನೂನುಬಾಹಿರವಾಗಿ ಕೈಗಾರಿಕಾ ವಿಸ್ತರಣಾ ಅಧಿಕಾರಿ ಹುದ್ದೆಗಳಿಗೆ ಆಯ್ಕೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. ಅವರ ನೇರ ಅವಲಂಬಿತರು ಕೆಪಿಎಸ್‌ಸಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾಗ ಅಧ್ಯಕ್ಷರು ತಾವು ಈ ನೇಮಕಾತಿ ಪ್ರಕ್ರಿಯೆಯಿಂದ ದೂರವಿರಲು ಅಥವಾ ಹಿತಾಸಕ್ತಿ ಸಂಘರ್ಷವನ್ನು ಔಪಚಾರಿಕವಾಗಿ ಘೋಷಿಸಲು ವಿಫಲರಾಗಿದ್ದಾರೆ ಎಂದು ಸ್ಪಷ್ಟವಾಗಿ ಕಂಡು ಬಂದಿದೆ ಎಂದು ರಾಜ್ಯಪಾಲರ ಕಚೇರಿ ಪ್ರಕಟಣೆ ತಿಳಿಸಿದೆ.


ಇದಲ್ಲದೆ ಕುಟುಂಬದ ವಾರ್ಷಿಕ ಆದಾಯವನ್ನು ಕೇವಲ ೪೦ ಸಾವಿರ ಎಂದು ಘೋಷಿಸಿ ಪ್ರಮಾಣ ಪತ್ರ ಪಡೆದಿದ್ದು, ವಾಸ್ತವ ಆದಾಯವನ್ನು ಮರೆಮಾಚಿ ಒಬಿಸಿ ಮೀಸಲಾತಿ ಮತ್ತು ಕೆನೆ ಪದರ ಲಾಭ ಪಡೆಯಲು ಯತ್ನಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.


ಸರ್ಕಾರದ ಆದೇಶದ ಪ್ರಕಾರ ಅವರ ಮಕ್ಕಳಿಗೆ ಒಬಿಸಿ ಮೀಸಲಾತಿ ಅನ್ವಯಿಸದಿದ್ದರೂ ಮಾಹಿತಿ ಮರೆಮಾಚಿ ಮೀಸಲಾತಿಯ ಪ್ರಯೋಜನ ಪಡೆಯಲು ಪ್ರಯತ್ನಿಸುತ್ತಿರುವ ಆರೋಪವೂ ದಾಖಲಾಗಿದೆ.


ಆದಾಯ, ಆಸ್ತಿ ವಿವರಗಳು ಸೇರಿದಂತೆ ಲಭ್ಯ ದಾಖಲೆಗಳು ಆರೋಪಗಳಿಗೆ ಪ್ರಾಥಮಿಕ ಬಲ ನೀಡುತ್ತಿದ್ದು, ಈ ಆರೋಪಗಳು ದುರ್ನಡೆತೆಗೆ ಸಮನಾಗಿದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ.


ನಿಸ್ಪಕ್ಷಪಾತ ತನಿಖೆ ನಡೆಸುವ ಉದ್ದೇಶದಿಂದ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದಿಂದ ಶಿವಶಂಕರಪ್ಪ ಅವರನ್ನು ಅಮಾನತು ಮಾಡಲಾಗಿದೆ ಎಂದು ರಾಜ್ಯಪಾಲರ ಆದೇಶದಲ್ಲಿ ತಿಳಿಸಲಾಗಿದೆ.


ರಾಷ್ಟ್ರಪತಿಗಳ ಮುಂದಿನ ಆದೇಶದವರೆಗೂ ಅಮಾನತು ಜಾರಿಯಲ್ಲಿರುವುದರಿಂದ ಈ ಅವಧಿಯಲ್ಲಿ ಕೆಪಿಎಸ್‌ಸಿ ಹಿರಿಯ ಸದಸ್ಯರು ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.


ಆಯೋಗದ ವಿಶ್ವಾಸಾರ್ಹತೆ ಹಾಗೂ ನೇಮಕಾತಿ ಪ್ರತ್ರಿಯೆ ಪಾರದರ್ಶಕತೆಯ ಕಾಪಾಡುವ ನಿಟ್ಟಿನಿಲ್ಲಿ ರಾಜ್ಯಪಾಲು ಆದೇಶದಲ್ಲಿ ತಿಳಿಸಿದ್ದಾರೆ.
ಹಂಗಾಮಿ ಅಧ್ಯಕ್ಷರಾಗಿ ಹಿರಿಯ ಸದಸ್ಯ ಪ್ರಭುದೇವ ಅವರನ್ನು ನೇಮಕ ಮಾಡಲಾಗಿದೆ.


ಏನಿದು ವಿವಾದ


ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿನ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ ಶಿವಶಂಕರಪ್ಪ ಅವರ ಪುತ್ರಿ ಸುಮಾ ಎಸ್. ಸಾಹುಕಾರ್ ಅವರು ಜಾತಿ/ಆದಾಯ ಪ್ರಮಾಣದ ಪತ್ರದಲ್ಲಿ ಕುಟುಂಬದ ವಾರ್ಷಿಕ ಆದಾಯ ೪೦ ಸಾವಿರ ರೂ. ಎಂದು ತೋರಿಸಿ ೩ಬಿ ಮೀಸಲಾತಿಗೆ ಅರ್ಜಿ ಸಲ್ಲಿಸಿದ್ದ ಮೂಲ ದಾಖಲೆಗಳ ಪರಿಶೀಲನೆ ವೇಳೆಯಲ್ಲಿ ಈ ವಿಷಯ ಆಯೋಗದ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಜೂನ್ ೧೯ ರಂದು ನಡೆದ ಆಯೋಗದ ಸಭೆಗೆ ಈ ವಿಷಯದ ಟಿಪ್ಟಣಿಯನ್ನು ಕಾರ್ಯದರ್ಶಿ ಕೆ. ಜ್ಯೋತಿ ಮಂಡಿಸಿದ್ದರು. ಅಂದಿನ ಸಭೆಗೆ ಟಿಪ್ಪಣಿ ನೀಡಿದ ಶಿವಶಂಕರಪ್ಪ ಎಸ್. ಸಾಹುಕಾರ್ ಅವರು ಮಗಳ ವಿಷಯ ಕಾರ್ಯಸೂಚಿಯಲ್ಲಿರುವುದರಿಂದ ಸಭೆಯಿಂದ ಹೊರಗುಳಿಯುವುದಾಗಿ ತಿಳಿಸಿದ್ದರು. ಹೀಗಾಗಿ ಹಿರಿಯ ಸದಸ್ಯ ಪ್ರಭುದೇವ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು.


ಕಾರ್ಯದರ್ಶಿ ಅವರ ಟಿಪ್ಪಣಿಗಳ ಅಂಶ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದು ಆಯೋಗದ ಘನತೆಯನ್ನು ಕಾಪಾಡುವ ಉದ್ದೇಶದಿಂದ ಮತ್ತು ಮುಂದೆ ನಿಸ್ಪಕ್ಷಪಾತ ತನಿಖೆ ಆಗಬೇಕಾಗಿರುವುದರಿಂದ ಅಧ್ಯಕ್ಷರು ತಕ್ಷಣ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಬೇಕು. ಯಾವುದೇ ಅಡೆತಡೆ ಇಲ್ಲದೆ ಸುಗಮವಾಗಿ ನೇಮಕಾತಿ ಪ್ರಕ್ರಿಯೆಗಳನ್ನು ಹಿರಿಯ ಸದಸ್ಯರ ನೇತೃತ್ವದಲ್ಲಿ ನಡೆಸಬೇಕು. ಈ ವಿಷಯವು ಗಂಭೀರವಾಗಿರುವುದರಿಂದ ಸರ್ಕಾರದ ಗಮನಕ್ಕೆ ತರುವುದು ಸೂಕ್ತವಾಗಿದೆ. ಹೀಗಾಗಿ ಆಯೋಗದ ಕಾರ್ಯದರ್ಶಿಯವರು ಒಂದು ವಿವರವಾದ ವರದಿಯನ್ನು ಸರ್ಕಾರಕ್ಕೆ ತಕ್ಷಣವೇ ನೀಡಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಗಿತ್ತು.


ಅಲ್ಲದೆ ಅಭ್ಯರ್ಥಿ ಸುಮಾ ಸಲ್ಲಿಸಿರುವ ೩ಬಿ ಮೀಸಲಾತಿ ತಿರಸ್ಕರಿಸಿ ಅಭ್ಯರ್ಥಿ ಮತ್ತು ಸುಳ್ಳು ಆದಾಯ ಪ್ರಮಾಣ ಪತ್ರ ಪಡೆಯಲು ಸಹಕರಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದೆಮೆ ದಾಖಲಿಸಬೇಕು, ಅಭ್ಯರ್ಥಿಯನ್ನು ಅನರ್ಹಗೊಳಿಸಬೇಕು ಆಯೋಗದಿಂದ ನಡೆಸುವ ಯಾವುದೇ ನೇಮಕಾತಿಯಲ್ಲಿ ಭಾಗವಹಿಸದಂತೆ ಶಾಶ್ವತವಾಗಿ ನಿರ್ಬಂಧಿಸಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಗಿತ್ತು.


ಸಭೆಯ ಬಳಿಕ ಆಯೋಗದ ಸದಸ್ಯರು ಲೋಕಭವನಕ್ಕೆ ತೆರಳಿ ರಾಜ್ಯಪಾಲರಿಗೆ ದೂರು ನೀಡಿದ್ದರು. ಆ ಬೆನ್ನಲ್ಲೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕಾರ್ಯದರ್ಶಿಗಳನ್ನು ಕರೆಸಿಕೊಂಡು ಮಾಹಿತಿ ಪಡೆದುಕೊಂಡಿದ್ದು ಸಾಹುಕಾರ್ ಸಹ ರಾಜ್ಯಪಾಲರನ್ನು ಭೇಟಿ ಮಾಡಿ ವಿವರಣೆ ನೀಡಿದ್ದರು.


ಇದೆಲ್ಲದರ ಮಧ್ಯೆ ತಾನು ರಾಜೀನಾಮೆ ನೀಡಬೇಕು ಎಂಬ ಆಯೋಗದ ಸದಸ್ಯರ ಸಭೆಯಲ್ಲಿ ಕೈಗೊಂಡ ನಿರ್ಣಯ ಪ್ರಶ್ನಿಸಿ ಶಿವಶಂಕರಪ್ಪ ಸಾಹಾಕಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್‌ನ ನ್ಯಾ. ಸೂರುಜ್ ಗೋವಿಂದರಾಜ್ ಅವರು ರಿಟ್ ಅರ್ಜಿಯ ವಿಚಾರಣೆ ನಡೆಸಿ ಕೆಪಿಎಸ್‌ಸಿ ಸಭೆಯ ನಿರ್ಣಯಕ್ಕೆ ತಡೆ ನೀಡಿದ್ದರು.
ಅಲ್ಲದೆ ಅಂದಿನ ಆಯೋಗದ ಸಭೆಯಲ್ಲಿ ಭಾಗಿಯಾಗಿದ್ದ ಸದಸ್ಯರಾದ ಬಿ. ಪ್ರಭುದೇವ್, ಶಾಂತ ಹೊಸಮನಿ, ಹೆಚ್.ಎಸ್. ನರೇಂದ್ರ, ಡಿ.ಬಿ. ಗೀತಾ, ಶಂಕುತಲಾ ಎಸ್,. ದುಂಡಿಗರ್, ಆರ್. ಕಾವಲಮ್ಮ, ಎಂ.ವಿ. ರಾಮಕೃಷ್ಣ ಪ್ರಸಾದ್, ಶಿವನಗೌಡ, ವಿ. ದೇವಪ್ಪ, ಹೆಚ್.ಎಸ್. ಭೋಜಾನಾಯಕ್ ಹಾಗೂ ಆಯೋಗದ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ ಮಾಡಿ ನ್ಯಾಯಾಲಯ ವಿಚಾರಣೆಯನ್ನು ಆಗಸ್ಟ್ ೧೧ ಕ್ಕೆ ಮುಂದೂಡಿತ್ತು.


ಕೆಪಿಎಸ್‌ಸಿ ಸಭೆಯ ನಿರ್ಣಯಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡುತ್ತಿದ್ದಂತೆಯೇ ಕೈಗಾರಿಕಾ ವಿಸ್ತರಣಾಧಿಕಾರಿಗಳ ಹುದ್ದೆಯ ಅಭ್ಯರ್ಥಿ ಸುಮಾ ಎಸ್. ಸಾಹುಕಾರ್ ಅವರು ಸುಳ್ಳು ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಕೆ. ಜ್ಯೋತಿ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.


ಈಗ ರಾಜ್ಯಪಾಲರು ಕೆಪಿಸಿಎಸ್‌ಸಿ ಅಧ್ಯಕ್ಷರನ್ನು ಅಮಾನತು ಮಾಡಿ ಸುಪ್ರೀಂಕೋರ್ಟ್ ತನಿಖೆಗೆ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿದ್ದಾರೆ.