Home ಜಿಲ್ಲೆ ಕಲಬುರಗಿ ಲೋಕಾಯುಕ್ತರ ಬಲೆಗೆ ಬಿದ್ದ ತಹಶೀಲ್ದಾರ್‍ಗೆ 4 ವರ್ಷ ಜೈಲು

ಲೋಕಾಯುಕ್ತರ ಬಲೆಗೆ ಬಿದ್ದ ತಹಶೀಲ್ದಾರ್‍ಗೆ 4 ವರ್ಷ ಜೈಲು

ಕಲಬುರಗಿ, ಜು.10- ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದ ತಹಶೀಲ್ದಾರ್ ಹಾಗೂ ಮತ್ತೊಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯವು ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು ತಲಾ 20 ಸಾವಿರ ರೂ.ಗಳ ದಂತವನ್ನು ವಿಧಿಸಿ ಆದೇಶಿಸಿದೆ.
ಕಳೆದ 2017ರಲ್ಲಿ ಜಿಲ್ಲೆಯ ಅಫಜಲಪೂರದ ತಹಶಿಲ್ದಾರ್ ಆಗಿದ್ದ ಶಶಿಕಲಾ ಪಾದಗಟ್ಟಿ ಹಾಗೂ ಇವರ ಪರವಾಗಿ ಲಂಚದ ಹಣ ಪಡೆದಿದ್ದ ಶಿವಾನಂದ ಜಮಖಂಡಿ ಅವರು ಶಿಕ್ಷೆಗೆ ಒಳಗಾದ ಲಂಚ ಪ್ರಕರಣದ ದೋಷಿಗಳಾಗಿದ್ದಾರೆ. ಶಶಿಕಲಾ ಅವರು ಪ್ರಸ್ತುತ ಯಾದಗಿರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಪ್ರಕರಣದ ವಿವರ- ಅಫಜಲಪೂರ ತಾಲೂಕಿನ ಕರಜಗಿ ನಾಡ ಕಚೇರಿಯಲ್ಲಿ ಗುತ್ತಿಗೆ ಆಧಾರದ ಡೇಟಾ ಎಂಟ್ರಿ ಆಪರೇಟರ್ ಶಿವಲಿಂಗಯ್ಯ ಬಸಯ್ಯ ಮಠ ಅವರು, ಕೆಲಸ ಮಾಡಿಕೊಡಲು ಹಣ ಪಡೆಯುತ್ತಿರುವ ಬಗ್ಗೆ ಸಾರ್ವಜನಿಕರು ತಹಶಿಲ್ದಾರ ಶಶಿಕಲಾ ಅವರಿಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ತಮಗೆ ಸಹಾಯ ಮಾಡುವಂತೆ ಶಿವಲಿಂಗಯ್ಯ ಬೇಡಿಕೊಂಡಾಗ ಅದಕ್ಕೆ ಪ್ರತಿಯಾಗಿ 1 ಲಕ್ಷ ರೂ.ಗಳ ಲಂಚದ ಬೇಡಿಕೆ ಇಟ್ಟಿದ್ದರು. ಈ ಹಣವನ್ನು ಶಿವಾನಂದ ಜಮಖಂಡಿ ಅವರಿಗೆ ತಲುಪಿಸಬೇಕು ಇಲ್ಲದಿದ್ದಲ್ಲಿ ತಮ್ಮ ಹುದ್ದೆಯ ಜಾಗದಲ್ಲಿ ಬೇರೆಯವರಿಗೆ ನೇಮಿಸಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದರು.
ಈ ಕುರಿತು ಶಿವಲಿಂಗಯ್ಯ ಅವರು, ಲೋಕಾಯುಕ್ತ ಪೊಲೀಸರಿಗೆ ದೂರು ನಿಡಿದ್ದರು, ಅದರಂತೆ ಅಗಸ್ಟ 31, 2017ರಂದು ಶಿವಲಿಂಗಯ್ಯ ನೀಡಿದ ಲಂಚದ ಹಣವನ್ನು ಶಿವಾನಂದ ಜಮಖಂಡಿ ಅವರು, ತಹಶಿಲ್ದಾರ್ ಶಶಿಕಲಾ ಅವರಿಗೆ ತಲುಪಿಸುವಾಗ ಲೋಕಾಯುಕ್ತರು ದಾಳಿ ಮಾಡಿ ಅವರನ್ನು ಬಂಧಿಸಿ ಅವರ ವಿರುದ್ಧ ಡಿವೈಎಸ್‍ಪಿ ಸಂತೋಷ ಬನ್ನಟ್ಟಿ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ತನಿಖೆ ಕೈಗೊಂಡಿದ್ದ ಕೃಷ್ಣಪ್ಪ ಕಲ್ಲದೇವರ ಅವರು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಲ್.ಲಕ್ಷ್ಮೀನಾರಾಯಣ ಅವರು, ಆರೋಪಿಗಳಿಬ್ಬರಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕರಾದ ಅಶೋಕ ಎಸ್.ಚಾಂದಕವಠೆ ಅವರು ವಾದ ಮಂಡಿಸಿದ್ದರು.