
ಕಲಬುರಗಿ,ಜು.10: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ) ವತಿಯಿಂದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ 125ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ವಿಕಸಿತ ಭಾರತಕ್ಕಾಗಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ದೃಷ್ಟಿಕೋನ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಹೈದರಾಬಾದ್ನ ಹಿರಿಯ ಪತ್ರಕರ್ತ, ಲೇಖಕ ಹಾಗೂ ಸಾಮಾಜಿಕ ಕಾರ್ಯಕರ್ತ ಕೆ. ರಾಕ ಸುಧಾಕರ್ ರಾವ್ಅವರು ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರು ಶ್ರೇಷ್ಠ ಶಿಕ್ಷಣ ತಜ್ಞ, ಸಮರ್ಥ ಸಂಸದೀಯ ನಾಯಕ ಹಾಗೂ ರಾಷ್ಟ್ರೀಯ ಚಿಂತಕರಾಗಿದ್ದರು ಎಂದು ಬಣ್ಣಿಸಿದರು.
ದೇಶದ ಶಿಕ್ಷಣ, ಸಾಂವಿಧಾನಿಕ ಚಿಂತನೆ, ಕೈಗಾರಿಕಾ ಅಭಿವೃದ್ಧಿ ಹಾಗೂ ರಾಷ್ಟ್ರೀಯ ಏಕೀಕರಣಕ್ಕೆ ಅವರು ನೀಡಿದ ಕೊಡುಗೆಗಳು, ಯೋಜನೆಗಳು ಇಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಿವೆ ಎಂದು ಹೇಳಿದರು.
ಡಾ. ಮುಖರ್ಜಿ ಅವರು ತಮ್ಮ 33ನೇ ಚಿಕ್ಕ ವಯಸ್ಸಿನಲ್ಲೇ ಭಾರತದ ಅತ್ಯಂತ ಕಿರಿಯ ಉಪಕುಲಪತಿಗಳಲ್ಲಿ ಒಬ್ಬರಾಗಿದ್ದು, ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಸೇವೆ ಸಲ್ಲಿಸಿದ್ದರು, ದೇಶದ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ರಾಷ್ಟ್ರೀಯ ಹಿತಾಸಕ್ತಿಯ ವಿಷಯದಲ್ಲಿ ಅವರು ಯಾವುದೇ ರಾಜಿ ಮಾಡಿಕೊಳ್ಳದೆ ದೃಢವಾಗಿ ಹೋರಾಡಿದ್ದು ಇತಿಹಾಸದಲ್ಲಿ ದಾಖಲಾಗಿದೆ ಎಂದು ಅವರು ತಿಳಿಸಿದರು.
ದೇಶ ವಿಭಜನೆಯ ಸಂದರ್ಭದಲ್ಲಿ ಡಾ. ಮುಖರ್ಜಿ ಅವರ ಪಾತ್ರ, ರಾಷ್ಟ್ರೀಯ ಏಕೀಕರಣಕ್ಕಾಗಿ ಅವರ ಪ್ರತಿಪಾದನೆ, ಸ್ಥಳಾಂತರಗೊಂಡ ಸಮುದಾಯಗಳ ಬಗ್ಗೆ ಅವರು ತೋರಿದ ಕಾಳಜಿ ಹಾಗೂ ಸಾಂವಿಧಾನಿಕ ಮೌಲ್ಯಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಅವರ ಬದ್ಧತೆ ಗಮನಾರ್ಹವಾಗಿದೆ. ಅಖಂಡ ಭಾರತದ ಕುರಿತ ಅವರ ದೃಷ್ಟಿಕೋನವು ಇಂದಿನ ರಾಷ್ಟ್ರೀಯ ಚರ್ಚೆಗಳಲ್ಲಿಯೂ ಪ್ರತಿಧ್ವನಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮೊದಲ ಸಾಂವಿಧಾನಿಕ ತಿದ್ದುಪಡಿಯ ಸಂದರ್ಭದಲ್ಲಿ, ವಿಶೇಷವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಗೆ ಸಂಬಂಧಿಸಿದಂತೆ ಡಾ. ಮುಖರ್ಜಿ ವ್ಯಕ್ತಪಡಿಸಿದ್ದ ನಿಲುವನ್ನು ಉಲ್ಲೇಖಿಸಿದ ಅವರು, ದೃಢವಾದ ಪ್ರಜಾಸತ್ತಾತ್ಮಕ ಚರ್ಚೆ ಹಾಗೂ ಸಾಂವಿಧಾನಿಕ ಆಡಳಿತವು ಮೂಲಭೂತ ಹಕ್ಕುಗಳನ್ನು ಸಂರಕ್ಷಿಸುವುದರ ಜೊತೆಗೆ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಬಲಪಡಿಸಬೇಕು ಎಂಬುದು ಅವರ ನಂಬಿಕೆಯಾಗಿತ್ತು ಎಂದು ಹೇಳಿದರು.
ರಾಷ್ಟ್ರೀಯ ಏಕೀಕರಣದ ಕುರಿತು ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದ ಸಾಂವಿಧಾನಿಕ ಸ್ಥಾನಮಾನದ ಹಿನ್ನೆಲೆಯಲ್ಲಿ ಡಾ. ಮುಖರ್ಜಿ ಪ್ರತಿಪಾದಿಸಿದ್ದ “ಒಂದು ರಾಷ್ಟ್ರ, ಒಂದು ಸಂವಿಧಾನ, ಒಂದು ಧ್ವಜ” ಎಂಬ ಘೋಷಣೆಯನ್ನು ಸ್ಮರಿಸಿದರು. 370ನೇ ವಿಧಿಯ ರದ್ದತಿಯನ್ನು ಡಾ. ಮುಖರ್ಜಿ ಅವರು ಹಲವು ದಶಕಗಳ ಹಿಂದೆ ಪ್ರತಿಪಾದಿಸಿದ್ದ ದೃಷ್ಟಿಕೋನದ ಸಾಕಾರವೆಂದು ಅನೇಕರು ಪರಿಗಣಿಸುತ್ತಾರೆ ಎಂದು ತಿಳಿಸಿದರು.
ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಸಾರ್ವಜನಿಕ ಜೀವನ, ವಿಚಾರಧಾರೆ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಅವರು ನೀಡಿದ ಕೊಡುಗೆಗಳ ಕುರಿತು ಇಂದಿನ ಉನ್ನತ ಶಿಕ್ಷಣದ ಸಂಸ್ಥೆಗಳಾದ ವಿಶ್ವವಿದ್ಯಾಲಯಗಳು ಕಟ್ಟುನಿಟ್ಟಾದ, ಪುರಾವೆ ಆಧಾರಿತ ಸಂಶೋಧನೆ ಕೈಗೊಳ್ಳಬೇಕೆಂದು ಅವರು ಕರೆ ನೀಡಿದರು. ಇಂತಹ ಶೈಕ್ಷಣಿಕ ಸಂಶೋಧನೆಗಳು ಭಾರತದ ಸ್ವಾತಂತ್ರ್ಯದ ಹೋರಾಟ, ಸಾಂವಿಧಾನಿಕ ವಿಕಸನ ಹಾಗೂ ರಾಷ್ಟ್ರ ನಿರ್ಮಾಣದ ಕುರಿತು ವಿದ್ಯಾರ್ಥಿಗಳಲ್ಲಿ ಆಳವಾದ ಅರಿವು ಮೂಡಿಸುವುದರ ಜೊತೆಗೆ, ರಾಷ್ಟ್ರದ ಇತಿಹಾಸದೊಂದಿಗೆ ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಲಿವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು, ರಾಷ್ಟ್ರೀಯ ನಾಯಕರ ಜೀವನ ಮತ್ತು ಕೊಡುಗೆಗಳ ಕುರಿತು ಮಾಹಿತಿಯುಕ್ತ ಹಾಗೂ ವಸ್ತುನಿಷ್ಠ ಶೈಕ್ಷಣಿಕ ಚರ್ಚೆಗಳನ್ನು ಉತ್ತೇಜಿಸುವ ಜವಾಬ್ದಾರಿ ವಿಶ್ವವಿದ್ಯಾಲಯಗಳ ಮೇಲಿದೆ ಎಂದು ಹೇಳಿದರು. ಪ್ರತಿಯೊಬ್ಬರೂ ಮಹಾನ್ ವ್ಯಕ್ತಿಗಳಂತೆ ಹೋರಾಟ ನಡೆಸಬೇಕೆಂಬ ಅಗತ್ಯವಿಲ್ಲ; ಆದರೆ ಅವರು ತೋರಿದ ಆದರ್ಶ ಮಾರ್ಗವನ್ನು ಅನುಸರಿಸಿ ದೇಶದ ಅಭಿವೃದ್ಧಿ ಹಾಗೂ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.
ವಿಶ್ವವಿದ್ಯಾಲಯದ ಕುಲಸಚಿ ಪೆÇ್ರ. ಆರ್. ಆರ್. ಬಿರಾದಾರ್ ಅವರು ಮಾತನಾಡಿ, ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ದೃಷ್ಟಿಕೋನವು ವಿಕಸಿತ ಭಾರತದ ಆಶಯದೊಂದಿಗೆ ಹೊಂದಿಕೆಯಾಗುತ್ತದೆ ಎಂದರು. ನವೀನ ಶಿಕ್ಷಣ, ಸಂಶೋಧನೆ, ನಾವೀನ್ಯತೆ ಹಾಗೂ ರಾಷ್ಟ್ರೀಯ ಸೇವೆಯ ಮೂಲಕ ಅಭಿವೃದ್ಧಿ ಹೊಂದಿದ ಭಾರತದ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಸಕ್ರಿಯವಾಗಿ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಪೆÇ್ರ. ಚನ್ನವೀರ್ ಆರ್. ಎಂ. ಸ್ವಾಗತಿಸಿದರು. ಪೆÇ್ರ. ಬಸವರಾಜ್ ಎಂ. ಕುಬಕಡ್ಡಿ ವಂದನಾರ್ಪಣೆ ಸಲ್ಲಿಸಿದರು. ಡಾ. ಶ್ಯಾಮಲಾ ಅವರು ಕಾರ್ಯಕ್ರಮ ನಿರೂಪಿಸಿದರು. ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲಾ ವಿಭಾಗದ ವಿದ್ಯಾರ್ಥಿಗಳು ವಂದೇ ಮಾತರಂ ಹಾಗೂ ರಾಷ್ಟ್ರಗೀತೆಯನ್ನು ಹಾಡಿದರು.





























