Home ಸುದ್ದಿ ರಾಷ್ಟ್ರೀಯ ಮೊದಲು ಆದರ್ಶ ತಾಯಿ, ನಂತರ ಐಎಎಸ್ ಅಧಿಕಾರಿಯಾಗಿ: ಆನಂದಿ ಬೆನ್

ಮೊದಲು ಆದರ್ಶ ತಾಯಿ, ನಂತರ ಐಎಎಸ್ ಅಧಿಕಾರಿಯಾಗಿ: ಆನಂದಿ ಬೆನ್

ಕಾನ್ಪುರ,ಜು.10: ಮಹಿಳೆಯರು ಐಎಎಸ್ ಅಧಿಕಾರಿಗಳಾಗುವ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು, ಉತ್ತಮ ಹಾಗೂ `ಆದರ್ಶ ತಾಯಿ’ಯಾಗಲು ಶ್ರಮಿಸಬೇಕು” ಎಂದು ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಹೇಳಿದ್ದಾರೆ. ವೃತ್ತಿಪರ ಯಶಸ್ಸು ಎಂದಿಗೂ ಕೌಟುಂಬಿಕ ಜವಾಬ್ದಾರಿಗಳ ವೆಚ್ಚದಲ್ಲಿ ಬರಬಾರದು ಎಂದು ಅವರು ಪ್ರತಿಪಾದಿಸಿದ್ದಾರೆ.


ಇಲ್ಲಿನ ಪ್ರಸಿದ್ಧ ವಿಶ್ವವಿದ್ಯಾಲಯವೊಂದರ 41ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣವು ಕೇವಲ ಶೈಕ್ಷಣಿಕ ಸಾಧನೆಗೆ ಮಾತ್ರ ಸೀಮಿತವಾಗಬಾರದು, ಅದು ಸಂಸ್ಕಾರ ಮತ್ತು ಕೌಟುಂಬಿಕ ಮೌಲ್ಯಗಳನ್ನು ಒಳಗೊಂಡಿರಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಯುವತಿಯರು ಮದುವೆಯಾದ ನಂತರವೂ ತಮ್ಮ ಶಿಕ್ಷಣ ಮತ್ತು ವೃತ್ತಿಜೀವನವನ್ನು ಅರ್ಧಕ್ಕೆ ನಿಲ್ಲಿಸಬಾರದು. ಹೆಣ್ಣುಮಕ್ಕಳು ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ದೇಶದ ಪ್ರಗತಿಗಾಗಿ ಬಳಸಿಕೊಳ್ಳಬೇಕು ಎಂದು ಆನಂದಿಬೆನ್ ಪಟೇಲ್ ಆಶಯ ವ್ಯಕ್ತಪಡಿಸಿದರು. ಇದೇ ವೇಳೆ, “ನೀವು ಐಎಎಸ್ ಅಧಿಕಾರಿಯೇ ಆಗಿ ಅಥವಾ ಶಿಕ್ಷಕಿಯೇ ಆಗಿ, ಮೊದಲು ಆದರ್ಶ ತಾಯಿಯಾಗುವುದನ್ನು ಕಲಿಯಿರಿ. ಮನೆಯಲ್ಲಿ ಸಿದ್ಧಪಡಿಸುವ ಅಡುಗೆಯನ್ನು ಪ್ರತಿಯೊಬ್ಬರೂ ಕರಗತ ಮಾಡಿಕೊಳ್ಳಬೇಕು” ಎಂದು ಅವರು ಕಿವಿಮಾತು ಹೇಳಿದರು.


ಮಕ್ಕಳು ಶಾಲೆ ಅಥವಾ ಕಾಲೇಜುಗಳಿಗೆ ಸೇರಿದ ನಂತರವೂ ಪೆÇೀಷಕರು ಅವರ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಡಬೇಕು. ಪೆÇೀಷಕರ ಸಣ್ಣ ನಿರ್ಲಕ್ಷ್ಯವೂ ಮಕ್ಕಳ ಭವಿಷ್ಯವನ್ನು ಹಾಳುಗೆಡವಬಹುದು ಎಂದು ಅವರು ಎಚ್ಚರಿಸಿದರು. ಇತ್ತೀಚಿನ ದಿನಗಳಲ್ಲಿ ಯೂನಿವರ್ಸಿಟಿ ಹಾಸ್ಟೆಲ್‍ಗಳ ಸುತ್ತಮುತ್ತ ಮಾದಕ ದ್ರವ್ಯ ಜಾಲಗಳು ಸಕ್ರಿಯವಾಗಿವೆ. ಆಹಾರ ವಿತರಣಾ ಕಂಟೈನರ್‍ಗಳ ಮೂಲಕ ಡ್ರಗ್ಸ್ ಪೂರೈಕೆಯಾಗುತ್ತಿದ್ದ ಜಾಲವನ್ನು ಇತ್ತೀಚೆಗೆ ಪತ್ತೆಹಚ್ಚಿ ಧ್ವಂಸಗೊಳಿಸಲಾಗಿದೆ ಎಂದು ಅವರು ಆತಂಕಕಾರಿ ವಿಷಯವನ್ನು ಹಂಚಿಕೊಂಡರು.


ಸಮಾಜದಲ್ಲಿ ಪದವಿ ಮತ್ತು ಅಂಕಗಳು ಹೆಚ್ಚಾಗುತ್ತಿದ್ದರೂ, ಕೌಟುಂಬಿಕ ದೌರ್ಜನ್ಯ ಮತ್ತು ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚುತ್ತಿವೆ. ಇದು ನೈತಿಕ ಮೌಲ್ಯಗಳ ಕುಸಿತವನ್ನು ತೋರಿಸುತ್ತದೆ. ಕೇವಲ ಅಂಕ ಗಳಿಸುವುದು ಶಿಕ್ಷಣವಲ್ಲ, ನೈತಿಕ ಮೌಲ್ಯಗಳು ಅಷ್ಟೇ ಮುಖ್ಯ ಎಂದು ಅವರು ಪ್ರತಿಪಾದಿಸಿದರು. ಇತ್ತೀಚೆಗೆ ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಾಜ್ಯಪಾಲರು, ಯುವತಿಯರು ವಿವಾಹಕ್ಕೂ ಮುನ್ನ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಸಲಹೆ ನೀಡಿದ್ದರು.