Home ಸಿನೆಮಾ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿದ ‘ಕುಡುಕ ನನ್ಮಕ್ಳು’

ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿದ ‘ಕುಡುಕ ನನ್ಮಕ್ಳು’

ದಸರಾ–ದೀಪಾವಳಿಗೆ ಹಬ್ಬಕ್ಕೆ ಬಿಡುಗಡೆ ಗುರಿ

ನಿರ್ದೇಶಕ ಆಸ್ಕರ್ ಕೃಷ್ಣ ಅವರ ಎಂಟನೇ ನಿರ್ದೇಶನದ ಚಿತ್ರ ‘ಕುಡುಕ ನನ್ಮಕ್ಳು’ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 20 ದಿನಗಳ ಕಾಲ ನಡೆದ ಶೂಟಿಂಗ್ ಮುಕ್ತಾಯಗೊಂಡಿದ್ದು, ಶೀಘ್ರದಲ್ಲೇ ಎರಡನೇ ಹಂತದ ಚಿತ್ರೀಕರಣ ಆರಂಭಿಸಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ‘ತುಂಬಾ ಒಳ್ಳೆಯವರು’ ಎಂಬ ಅಡಿಬರಹದೊಂದಿಗೆ ಮೂಡಿಬರುತ್ತಿರುವ ಈ ಚಿತ್ರ ಹಾಸ್ಯದ ಜೊತೆಗೆ ಅರ್ಥಪೂರ್ಣ ಸಂದೇಶವನ್ನೂ ಹೊತ್ತಿದೆ.

ಕಲಾ ಭೂಮಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಅರುಣ್ ಎಲ್. ಶೆಟ್ಟಿ, ವೈಶಾಲಿ ಮುರಳೀಧರ್, ಪಲ್ಲವಿ ಅಗ್ನಿಹೋತ್ರಿ, ಬಾಬು ಎಸ್.ಎಚ್. (ತುಮಕೂರು), ರವಿ ನಾಯಕ್, ನಿಂಗರಾಜು ಬಿ., ಲೋಕೇಶ್ ಕೆ.ಎಸ್. ಹಾಗೂ ಸಿದ್ದಲಿಂಗಯ್ಯ ಜಂಟಿಯಾಗಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಮಜಾಭಾರತ ಮತ್ತು ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಪ್ರಭ, ವಿನೋದ್ ಗೊಬ್ಬರಗಾಲ, ಮಿಮಿಕ್ರಿ ಗೋಪಿ, ಸಚಿನ್ ಪುರೋಹಿತ್ ಹಾಗೂ ಚೈತ್ರಾ ಕೊಟ್ಟೂರು ಸೇರಿದಂತೆ ಹಲವು ಜನಪ್ರಿಯ ಹಾಸ್ಯ ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

25, 30, 35 ಮತ್ತು 40 ವರ್ಷದ ನಾಲ್ವರು ವ್ಯಕ್ತಿಗಳ ಬದುಕಿನ ಮೂಲಕ ಕುಡಿತದ ಪರಿಣಾಮಗಳನ್ನು ಚಿತ್ರಿಸುವ ಕಥಾಹಂದರವನ್ನು ಸಿನಿಮಾ ಹೊಂದಿದೆ. ವಿವಿಧ ವಯಸ್ಸಿನವರ ಚಿಂತನೆ, ನಡವಳಿಕೆ ಹಾಗೂ ಕುಡಿತದಿಂದ ಉಂಟಾಗುವ ದೈಹಿಕ, ಮಾನಸಿಕ, ಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಮನರಂಜನೆಯೊಂದಿಗೆ ತೆರೆದಿಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ.

ಚಿತ್ರಕ್ಕೆ ಮಂಜುಕವಿ ಸಂಗೀತ, ವಿನಯ್ ಗೌಡ ಛಾಯಾಗ್ರಹಣ, ಅಯುರ್ ಸಂಕಲನವಿದ್ದು, ಹಲವು ಜನಪ್ರಿಯ ರಿಯಾಲಿಟಿ ಶೋಗಳಿಗೆ ಸಂಭಾಷಣೆ ಬರೆದಿರುವ ವೆಂಕಟ್ ಈ ಚಿತ್ರಕ್ಕೂ ಡೈಲಾಗ್ ರಚಿಸಿದ್ದಾರೆ.

ಪ್ರಸ್ತುತ ಎರಡನೇ ಹಂತದ ಚಿತ್ರೀಕರಣದ ಸಿದ್ಧತೆಯಲ್ಲಿ ನಿರತರಾಗಿರುವ ಚಿತ್ರತಂಡ, ದಸರಾ ಅಥವಾ ದೀಪಾವಳಿ ಹಬ್ಬದ ಸಂದರ್ಭದಲ್ಲಿ ‘ಕುಡುಕ ನನ್ಮಕ್ಳು’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಯೋಜನೆ ರೂಪಿಸಿದೆ.