Home ಸಿನೆಮಾ ನಿರ್ದೇಶಕನಿಂದ ನಾಯಕನಾದ ಮನೋಜ್ ಪಿ. ನಡಲುಮನೆ

ನಿರ್ದೇಶಕನಿಂದ ನಾಯಕನಾದ ಮನೋಜ್ ಪಿ. ನಡಲುಮನೆ

‘ಲವ್ ಥಿಯರಿ’ಗೆ ಮುಹೂರ್ತ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಮನೋಜ್ ಪಿ. ನಡಲುಮನೆ ಇದೀಗ ನಾಯಕನಾಗಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಜಯರಾಮ್ ದೇವಸಮುದ್ರ ನಿರ್ಮಾಣದ ‘ಲವ್ ಥಿಯರಿ’ ಚಿತ್ರದ ಮೂಲಕ ಅವರು ಮೊದಲ ಬಾರಿಗೆ ನಾಯಕನಾಗಿ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದು, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆದಿದೆ.

ಸುರಮ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುತ್ತಿರುವ ಜಯರಾಮ್ ದೇವಸಮುದ್ರ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಹಿಂದೆ ‘ಆನ’, ‘ಮೇರಿ’ ಹಾಗೂ ‘ನೀ ನಂಗೆ ಅಲ್ಲವಾ’ ಚಿತ್ರಗಳನ್ನು ನಿರ್ದೇಶಿಸಿರುವ ಮನೋಜ್, ಈ ಚಿತ್ರಕ್ಕೂ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿರುವುದರ ಜೊತೆಗೆ ನಾಯಕನಾಗಿಯೂ ಅಭಿನಯಿಸುತ್ತಿದ್ದಾರೆ.

‘ಲವ್ ಥಿಯರಿ’ ಕೇವಲ ಪ್ರೇಮಕಥೆಯಲ್ಲ. ರೊಮ್ಯಾಂಟಿಕ್ ಕಾಮಿಡಿಯೊಂದಿಗೆ ಮಾನವ ಸಂಬಂಧಗಳ ಮೌಲ್ಯವನ್ನು ಹೇಳುವ ವಿಭಿನ್ನ ಕಥಾಹಂದರವನ್ನು ಒಳಗೊಂಡಿದೆ. “ನಟನಾಗಬೇಕೆಂಬ ಆಸೆ ಬಹಳ ದಿನಗಳಿಂದ ಇತ್ತು. ಆ ಕನಸಿಗೆ ನಿರ್ಮಾಪಕ ಜಯರಾಮ್ ದೇವಸಮುದ್ರ ಅವರು ಬೆಂಬಲ ನೀಡಿದ್ದಾರೆ. ಅವರ ವಿಶ್ವಾಸಕ್ಕೆ ಚಿರಋಣಿ. ಪ್ರೇಕ್ಷಕರು ನನ್ನ ಹೊಸ ಪ್ರಯತ್ನವನ್ನು ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆ” ಎಂದು ಮನೋಜ್ ಪಿ. ನಡಲುಮನೆ ಹೇಳಿದ್ದಾರೆ.

ಚಿತ್ರಕ್ಕೆ ಉದಯ್ ಲೀಲಾ ಛಾಯಾಗ್ರಹಣ, ಸೂರಜ್ ಜೋಯಿಸ್ ಸಂಗೀತ ನಿರ್ದೇಶನ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಸಂಕಲನಕಾರ ನಾಗೇಂದ್ರ ಉಜ್ಜನಿ ಸಂಕಲನ ಮಾಡಲಿದ್ದಾರೆ. ಮುಂದಿನ ತಿಂಗಳಿಂದ ಬೆಂಗಳೂರು ಮತ್ತು ಕೊಡಗು ಸುತ್ತಮುತ್ತ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಉಳಿದ ಕಲಾವಿದರ ಹಾಗೂ ತಾಂತ್ರಿಕ ತಂಡದ ವಿವರಗಳನ್ನು ಚಿತ್ರತಂಡ ಶೀಘ್ರದಲ್ಲೇ ಪ್ರಕಟಿಸಲಿದೆ.