
ವಿಜಯಪುರ, ಜು. 7:
ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸುಕ್ಷೇತ್ರ ಬಸರಕೋಡ ಗ್ರಾಮದ ಪ್ರಸಿದ್ಧ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ದುಷ್ಕರ್ಮಿಗಳು ಭಾರಿ ಕಳ್ಳತನ ಎಸಗಿದ್ದು, ಅಂದಾಜು ?1.20 ಕೋಟಿ ಮೌಲ್ಯದ 60 ಕೆಜಿಗೂ ಅಧಿಕ ಬೆಳ್ಳಿ ಪೂಜಾ ಸಾಮಗ್ರಿಗಳನ್ನು ಕದ್ದೊಯ್ದಿರುವ ಘಟನೆ ಬೆಳಕಿಗೆ ಬಂದಿದೆ.
ದೇವಸ್ಥಾನದ ಸೇವಾಸ್ಥಾನದಲ್ಲಿದ್ದ ಸುಮಾರು 35 ಕೆಜಿ ತೂಕದ ಬೆಳ್ಳಿಯ ಮುಖಕವಚ, ದಿನನಿತ್ಯ ಪೂಜೆಗೆ ಬಳಸಲಾಗುತ್ತಿದ್ದ ಸುಮಾರು 10 ಕೆಜಿ ತೂಕದ ಬೆಳ್ಳಿ ಮೂರ್ತಿ ಸೇರಿದಂತೆ ಒಟ್ಟು 60 ಕೆಜಿಗೂ ಹೆಚ್ಚು ಪ್ರಮಾಣದ ಬೆಳ್ಳಿ ಪೂಜಾ ಸಾಮಗ್ರಿಗಳನ್ನು ಕಳ್ಳರು ಕಳವು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ಕಳ್ಳತನದಿಂದ ಬಸರಕೋಡ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಭಕ್ತರಲ್ಲಿ ತೀವ್ರ ಆತಂಕ ಮತ್ತು ಆಕ್ರೋಶ ವ್ಯಕ್ತವಾಗಿದೆ. ದೇವಸ್ಥಾನಕ್ಕೆ ಭಕ್ತರು ಅಪಾರ ಭಕ್ತಿಭಾವದಿಂದ ಸಮರ್ಪಿಸಿದ್ದ ಅಮೂಲ್ಯ ಬೆಳ್ಳಿ ಸಾಮಗ್ರಿಗಳು ಕಳವಾಗಿರುವುದು ಗ್ರಾಮಸ್ಥರಲ್ಲಿ ಬೇಸರ ಉಂಟುಮಾಡಿದೆ.
ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಪೆÇಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.



























