
ಬೆಂಗಳೂರು, ಜು. ೭- ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಹೆರೋಹಳ್ಳಿ ಗ್ರಾಮದ ಸರ್ವೆ ನಂಬರ್ ೩೭/೧P ಮತ್ತು ೪೦/೧ ರಲ್ಲಿನ ಜಮೀನನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಮಾಗಡಿ ರಸ್ತೆಯಿಂದ ಸರ್ ಎಂ ವಿಶ್ವೇಶ್ವರಯ್ಯ ಬಡಾವಣೆಗೆ ಸಂಪರ್ಕಿಸಲು ೪೫.೦೦ ಮೀ ಅಗಲದ ರಸ್ತೆ ನಿರ್ಮಾಣಕ್ಕಾಗಿ ಭೂಸ್ವಾದೀನ ಪಡಿಸಿಕೊಂಡಿದ್ದು ಈಗಾಗಲೇ ರಸ್ತೆ ಕಾಮಗಾರಿಯು ಬಹುತೇಕ ಮುಕ್ತಾಯವಾಗಿದ್ದು, ಮಾಗಡಿ ರಸ್ತೆ ಜಂಕ್ಷನ್ ಬಳಿ ಸುಮಾರು ೨೮ ಗುಂಟೆ ಪ್ರದೇಶದಲ್ಲಿ ಅನಧಿಕೃತವಾಗಿ ಶೆಡ್ ಗಳನ್ನು ತೆರವುಗೊಳಿಸಿ ರಸ್ತೆ ಸಂಪರ್ಕವನ್ನು ಮುಂದುವರೆಸಲು ಪ್ರಾಧಿಕಾರದ ಸುಪರ್ದಿಗೆ ಪಡೆಯಲಾಯಿತು.
ಮುಂದುವರೆದು ಸದರಿ ಸಂಪರ್ಕ ರಸ್ತೆಯ ಕಾಮಗಾರಿಯು ಸುಮಾರು ೧೦ವರ್ಷಗಳಿಂದ ಸ್ಥಗಿತವಾಗಿದ್ದ ಕಾಮಗಾರಿಗೆ ಮಾನ್ಯ ಆಯುಕ್ತರು ರವರ ಆದೇಶ ಮೇರೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪಶ್ಚಿಮ ವಲಯದ ಅಭಿಯಂತರ ವಿಭಾಗ ಹಾಗೂ ವಿಶೇಷ ಜಾಗೃತ ದಳದ ಮುಖ್ಯಸ್ಥರಾದ ಮಾನ್ಯ ಪೋಲಿಸ್ ಅಧಿಕ್ಷಕರಾದ ಶ್ರೀ ಕೆ ಎನ್ ನಾಗರಾಜ್ ರವರ ಮಾರ್ಗದರ್ಶನದಲ್ಲಿ ಹಾಗೂ ಪೊಲೀಸ್ ಉಪ ಅಧಿಕ್ಷಕರಾದ ಶ್ರೀ ಹನುಮಂತರಾಯ ರವರ ತಂಡದೊಂದಿಗೆ ಸ್ಥಳೀಯ ಪೊಲೀಸ್ ತಂಡದ ಸಹಭಾಗಿತ್ವದೊಂದಿಗೆ ಸುಮಾರು ೬೦.೦೦ ಕೋಟಿ ಬೆಲೆಬಾಳುವ ಪ್ರದೇಶವನ್ನು ಮರು ವಶಕ್ಕೆ ಪಡೆಯಲಾಯಿತು.






























