
ನವದೆಹಲಿ.ಜು. ೭- ದೇಶಾದ್ಯಂತ ನೈಋತ್ಯ ಮುಂಗಾರು ಮಾರುತಗಳು ತೀವ್ರಗೊಂಡಿದ್ದು, ಹಲವು ರಾಜ್ಯಗಳಲ್ಲಿ ಭಾರಿ ಅವಾಂತರ ಸೃಷ್ಟಿಸಿವೆ. ಮಹಾರಾಷ್ಟ್ರ ಮತ್ತು ಹಿಮಾಚಲ ಪ್ರದೇಶದಲ್ಲಿ ಪ್ರಾಣಹಾನಿಯಾಗಿದ್ದು, ಜಮ್ಮು-ಕಾಶ್ಮೀರದಲ್ಲಿ ಹಠಾತ್ ಪ್ರವಾಹ ಹಾಗೂ ಭೂಕುಸಿತ ಉಂಟಾಗಿದೆ. ಮುಂಬೈ ಸೇರಿದಂತೆ ಪ್ರಮುಖ ನಗರಗಳ ಸಾರಿಗೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಮಹಾರಾಷ್ಟ್ರದಲ್ಲಿ ವಿಕೋಪ: ಪುಣೆಯಲ್ಲಿ ಕಳೆದ ೨೪ ಗಂಟೆಗಳಲ್ಲಿ ಮೂವರು ಸಾವನ್ನಪ್ಪಿದ್ದು, ರಾಜ್ಯದಲ್ಲಿ ಮಳೆ ಸಂಬಂಧಿತ ಸಾವಿನ ಸಂಖ್ಯೆ ೧೩ಕ್ಕೆ ಏರಿಕೆಯಾಗಿದೆ.ಮುಂಬೈಗೆ ರೆಡ್ ಅಲರ್ಟ್: ಮುಂಬೈ, ಠಾಣೆ ಮತ್ತು ರಾಯಗಢ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಅತ್ಯಂತ ಭಾರಿ ಮಳೆಯ ಮುನ್ಸೂಚನೆ ನೀಡಿ ’ರೆಡ್ ಅಲರ್ಟ್’ ಘೋಷಿಸಿದೆ.
ಹೆದ್ದಾರಿ, ರೈಲು ಸಂಚಾರ ಸ್ಥಗಿತ: ಮುಂಬೈ-ಪುಣೆ ಎಕ್ಸ್ಪ್ರೆಸ್ವೇಯ ಹೊಸದಾಗಿ ಉದ್ಘಾಟನೆಗೊಂಡಿದ್ದ ‘ಮಿಸ್ಸಿಂಗ್ ಲಿಂಕ್’ ಭಾಗದಲ್ಲಿ ಕಾಂಕ್ರೀಟ್ ಪಿಲ್ಲರ್ ಕುಸಿದು ಬಿದ್ದಿದ್ದರಿಂದ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ. ಭೋರ್ ಘಾಟ್ ಬಳಿ ಭೂಕುಸಿತ ಉಂಟಾದ ಕಾರಣ ಮುಂಬೈ-ಪುಣೆ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಮುಂಬೈ ಜಲಾವೃತ
ಧಾರಾಕಾರ ಮಳೆಗೆ ವಾಣಿಜ್ಯ ನಗರಿ ಮುಂಬೈ ಜಲಾವೃತಗೊಂಡಿದೆ. ಪಶ್ಚಿಮ ರೈಲ್ವೆಯ ೪೦ಕ್ಕೂ ಹೆಚ್ಚು ಸೇವೆಗಳು ಬಾಧಿತವಾಗಿದ್ದು, ಹಲವು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ಪರಿಸ್ಥಿತಿಯ ಗಂಭೀರತೆಯಿಂದಾಗಿ ಮಹಾರಾಷ್ಟ್ರ ವಿಧಾನಸಭೆಯ ಉಭಯ ಸದನಗಳನ್ನು ಮುಂದೂಡಲಾಯಿತು. ಪುಣೆಯ ಮಾವಳ್ ಮತ್ತು ಖೇಡ್ ತಾಲೂಕುಗಳಲ್ಲಿ ಪ್ರತ್ಯೇಕ ಮಳೆ ದುರಂತಗಳು ಸಂಭವಿಸಿವೆ. ಇತ್ತ ನಾಸಿಕ್ ಜಿಲ್ಲೆಯ ತ್ರಯಂಬಕೇಶ್ವರ ಮತ್ತು ಇಗತ್ಪುರಿಯಲ್ಲಿ ’ಮೇಘಸ್ಫೋಟ’ ಸದೃಶ್ಯ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಶಾಲಾ-ಕಾಲೇಜು ಹಾಗೂ ಪ್ರಮುಖ ದೇವಾಲಯಗಳನ್ನು ಮುಚ್ಚಲು ಆದೇಶಿಸಲಾಗಿದೆ.
ಹಿಮಾಚಲ ಪ್ರದೇಶದಲ್ಲಿ ರಾತ್ರಿಯಿಡೀ ಸುರಿದ ಮಳೆಗೆ ೧೪ ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಚಂಬಾ ಮತ್ತು ಕುಲ್ಲು ಜಿಲ್ಲೆಗಳಲ್ಲಿ ಹಠಾತ್ ಪ್ರವಾಹದಿಂದಾಗಿ ಹೆದ್ದಾರಿಗಳು ಬಂದ್ ಆಗಿವೆ. ಜಮ್ಮು-ಕಾಶ್ಮೀರದ ಕಿಸ್ತ್ವಾರ್ ಜಿಲ್ಲೆಯ ೫೪೦ ಮೆಗಾವ್ಯಾಟ್ನ ಕ್ವಾರ್ ಜಲವಿದ್ಯುತ್ ಯೋಜನೆ ನಡೆಯುತ್ತಿರುವ ಸ್ಥಳದಲ್ಲಿ ಭಾರಿ ಮಣ್ಣಿನ ಕುಸಿತ ಉಂಟಾಗಿದ್ದು, ಹಲವಾರು ನಿರ್ಮಾಣ ಯಂತ್ರೋಪಕರಣಗಳು ಮತ್ತು ಟ್ರಕ್ಗಳು ಮಣ್ಣಿನಡಿಯಲ್ಲಿ ಹೂತುಹೋಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಒಡಿಶಾದಲ್ಲಿ ಸತತ ಮೂರನೇ ದಿನವೂ ಮಳೆ ಮುಂದುವರಿದಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ರಾಜಸ್ಥಾನದ ಸೀಕರ್ ಜಿಲ್ಲೆಯಲ್ಲಿ ಗರಿಷ್ಠ ೭೫ ಮಿಮೀ ಮಳೆಯಾಗಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಮಳೆಯಾಗುವ ಸಾಧ್ಯತೆಯಿದೆ.
ದೇಶದ ಹಲವು ಭಾಗಗಳು ಮಳೆಯಿಂದ ತತ್ತರಿಸುತ್ತಿದ್ದರೆ, ರಾಜಧಾನಿ ದೆಹಲಿ ಮಾತ್ರ ಒಣಹವೆಯಿಂದ ಕೂಡಿದೆ. ಆದರೆ, ಇಲ್ಲಿನ ತೇವಾಂಶದ ತೀವ್ರತೆಯಿಂದಾಗಿ ’ಅನುಭವಕ್ಕೆ ಬರುವ ತಾಪಮಾನ’ ಬರೋಬ್ಬರಿ ೫೦ ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಜನಜೀವನ ಕಷ್ಟಕರವಾಗಿದೆ.






























