Home ಜಿಲ್ಲೆ ಕಲಬುರಗಿ ಅಪ್ರಾಪ್ತೆ ಜೊತೆ ಬಾಲ್ಯವಿವಾಹ ಮಾಡಿಕೊಂಡು ಲೈಂಗಿಕ ದೌರ್ಜನ್ಯಆರೋಪಿಗೆ 20 ವರ್ಷ ಜೈಲು ಶಿಕ್ಷೆ, 50 ಸಾವಿರ...

ಅಪ್ರಾಪ್ತೆ ಜೊತೆ ಬಾಲ್ಯವಿವಾಹ ಮಾಡಿಕೊಂಡು ಲೈಂಗಿಕ ದೌರ್ಜನ್ಯಆರೋಪಿಗೆ 20 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ.ದಂಡ

ಕಲಬುರಗಿ,ಜು.2-ಅಪ್ರಾಪ್ತ ವಯಸ್ಸಿನ ಬಾಲಕಿಯೊಂದಿಗೆ ಬಾಲ್ಯ ವಿವಾಹ ಮಾಡಿಕೊಂಡು ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗೆ ಇಲ್ಲಿನ ಅಪರ ಜಿಲ್ಲಾ ಮತ್ತು ಸತ್ರ (ವಿಶೇಷ ಪೊಕ್ಸೋ) ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂ.ದಂಡ ವಿಧಿಸಿದೆ.
ಬಾಬು ತಂದೆ ಚಾಂದಸಾಬ ಮುಲ್ಲಾ (27) ಶಿಕ್ಷೆಗೆ ಗುರಿಯಾದ ಆರೋಪಿ.
ಈತ 5.3.2023ರಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಮದುವೆಯಾಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, 2023ನೇ ಡಿಸೆಂಬರ್ ತಿಂಗಳಲ್ಲಿ ಬಾಲಕಿ ಗರ್ಭಿಣಿಯಾಗಿ 18.9.2024 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಬಾಲಕಿ ಗರ್ಭಾವಸ್ಥೆಯಲ್ಲಿದ್ದಾಗ ತಾಯಿ ಕಾರ್ಡ್ ತೆಗೆಯುವ ಉದ್ದೇಶದಿಂದ ಅವಳ ಜನನಕ್ಕೆ ಸಂಬಂಧಿಸಿದ ದಾಖಲಾತಿಯಾದ ಆಧಾರ್ ಕಾರ್ಡ್‍ನ್ನು ಸ್ಥಳೀಯ ಆಶಾ ಕಾರ್ಯಕರ್ತೆಯ ಮುಖಾಂತರ ಪೋರ್mಲ್‍ನಲ್ಲಿ ಭರ್ತಿ ಮಾಡಿ ತಾಯಿ ಕಾರ್ಡ್ ಪಡೆದುಕೊಂಡಾಗ ಬಾಲಕಿ ಅಪ್ರಾಪ್ತೆ ಎಂಬ ವಿಷಯ ಬೆಳಕಿಗೆ ಬಂದು ದೂರು ನೀಡಲಾಗಿತ್ತು. ಆರೋಪಿಯು ಅಪ್ರಾಪ್ತೆ ಜೊತೆ ಬಾಲ್ಯ ವಿವಾಹ ಮಾಡಿಕೊಂಡು ಲೈಂಗಿಕ ದೌರ್ಜನ್ಯವೆಸಗಿದ್ದು, ತನಿಖೆ ಮತ್ತು ಸಾಕ್ಷಾಧಾರಗಳಿಂದ ದೃಡಪಟ್ಟಿತ್ತು.
ಆಳಂದ ಸಿಪಿಐ ಪ್ರಕಾಶ ಆರ್.ಯಾತನೂರ, ಪಿಎಸ್‍ಐ ಸಿದ್ದರಾಮ ಅವರು ತನಿಖೆ ನಡೆಸಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿಯಲ್ಲಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸತ್ರ (ವಿಶೇಷ ಪೊಕ್ಸೋ) ನ್ಯಾಯಾಲಯದ ನ್ಯಾಯಾಧೀಶ ಎಸ್.ಎಲ್.ಚವ್ಹಾಣ್ ಅವರು, ಆರೋಪಿ ಬಾಬುಗೆ 20 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಾಂತವೀರ ಬಿ.ತುಪ್ಪದ ಅವರು ವಾದ ಮಂಡಿಸಿದ್ದರು.