
ನವದೆಹಲಿ,ಜು.2: ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣ ಜಾಗತಿಕ ಮಟ್ಟದಲ್ಲಿ ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ. ಈ ಹಗರಣದಲ್ಲಿ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‍ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ `ನಿರ್ಲಕ್ಷ್ಯ’ ಇರಬಹುದಾದರೂ, ಎಸ್‍ಐಟಿ ತನಿಖೆಯ ವರದಿ ಬರುವ ಮುನ್ನ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ಮಹಾ ಲೂಟಿಯಲ್ಲಿ ವಿಎಚ್‍ಪಿಯ ಯಾವುದೇ ಪಾತ್ರವಿಲ್ಲ ಮತ್ತು ಸಂಘಟನೆಯ ವರ್ಚಸ್ಸಿಗೆ ಇದರಿಂದ ಯಾವುದೇ ಧಕ್ಕೆಯಾಗಿಲ್ಲ ಎಂದು ಪ್ರತಿಪಾದಿಸಿದರು.
ದೇಣಿಗೆ ಕಳ್ಳತನ ಪ್ರಕರಣದ ತನಿಖೆ ಕೇವಲ ಬಂಧಿತ ಎಂಟು ಜನರಿಗೆ ಮಾತ್ರ ಸೀಮಿತವಾಗಿಲ್ಲ. ಟ್ರಸ್ಟ್ ನೀಡಿರುವ ದೂರಿನಲ್ಲಿ ಸಮಗ್ರ ತನಿಖೆಗೆ ಆಗ್ರಹಿಸಲಾಗಿದೆ. ಇದರಲ್ಲಿ ಯಾರೇ ಭಾಗಿಯಾಗಿದ್ದರೂ, ಅವರು ಎಷ್ಟೇ ಪ್ರಭಾವಿ ಅಥವಾ ದೊಡ್ಡ ಮೀನಾಗಿದ್ದರೂ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಅಲೋಕ್ ಕುಮಾರ್ ಭರವಸೆ ನೀಡಿದ್ದಾರೆ. ಚಂಪತ್ ರಾಯ್ ಅವರ ಕಾರು ಚಾಲಕನೇ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಆತನನ್ನು ಈಗಾಗಲೇ ಬಂಧಿಸಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
“ಸುಪ್ರೀಂ ಕೋರ್ಟ್ ತೀರ್ಪು ಬಂದ ದಿನವೇ ಮಂದಿರ ನಿರ್ಮಾಣ ಮತ್ತು ಅದರ ನಿರ್ವಹಣೆಯಲ್ಲಿ ವಿಎಚ್‍ಪಿಗೆ ಯಾವುದೇ ಪಾತ್ರವಿರುವುದಿಲ್ಲ ಎಂದು ನಾನು ಸ್ಪಷ್ಟಪಡಿಸಿದ್ದೆ. ಚಂಪತ್ ರಾಯ್ ಅವರು ವಿಎಚ್‍ಪಿಯ ಅಂತಾರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರೂ, ಅವರನ್ನು ಟ್ರಸ್ಟ್‍ಗೆ ನಮ್ಮ ಸಂಘಟನೆ ನಾಮನಿರ್ದೇಶನ ಮಾಡಿರಲಿಲ್ಲ. ಹಾಗಾಗಿ ಈ ಘಟನೆಗೆ ವಿಎಚ್‍ಪಿ, ಆರ್‍ಎಸ್‍ಎಸ್ ಅಥವಾ ಪ್ರಧಾನಿ ಕಚೇರಿಯನ್ನು ಹೊಣೆ ಮಾಡುವುದು ಕೇವಲ ಮುಂಬರುವ ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡುತ್ತಿರುವ ರಾಜಕೀಯ ಸಂಚು” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣದ ಕುರಿತು ತಕ್ಷಣವೇ ಸಮಗ್ರ ಎಫ್‍ಐಆರ್ ದಾಖಲಾಗಬೇಕು.ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಚುರುಕಿನ ತನಿಖೆ ನಡೆಯಬೇಕು.ಫಾಸ್ಟ್ ಟ್ರ್ಯಾಕ್ (ಶೀಘ್ರ ಗತಿ) ನ್ಯಾಯಾಲಯದಲ್ಲಿ ದಿನನಿತ್ಯದ ವಿಚಾರಣೆ ನಡೆಯಬೇಕು.ಮುಂದಿನ 4 ರಿಂದ 5 ತಿಂಗಳೊಳಗೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು.
ರಾಜೀನಾಮೆ ನೀಡಿರುವ ಚಂಪತ್ ರಾಯ್ ಅವರನ್ನು ಸಂಘಟನೆಯಿಂದ ತಕ್ಷಣವೇ ವಜಾಗೊಳಿಸುವ ಸಾಧ್ಯತೆಯನ್ನು ತಳ್ಳಿಹಾಕಿದ ಅಲೋಕ್ ಕುಮಾರ್, “ರಾಯ್ ಅವರ ವಿರುದ್ಧ ನೇರ ಆರೋಪಗಳಿಲ್ಲ, ಅವರ ಚಾಲಕನ ಮೇಲೆ ಆರೋಪವಿದೆ. ರಾಯ್ ಅವರ ಮೇಲುಸ್ತುವಾರಿಯಲ್ಲಿ ನಿರ್ಲಕ್ಷ್ಯ ನಡೆದಿರಬಹುದು. ಆದರೆ, ಅಧಿಕೃತ ತನಿಖಾ ವರದಿ ಬರುವ ಮುನ್ನ ನಾವು ಯಾವುದೇ ತರಾತುರಿಯ ಶಿಸ್ತು ಕ್ರಮ ಜರುಗಿಸುವುದಿಲ್ಲ. ಕಾನೂನು ತನ್ನದೇ ಆದ ಹಾದಿಯಲ್ಲಿ ಸಾಗಲಿದೆ” ಎಂದು ತಿಳಿಸಿದ್ದಾರೆ.
























