Home ಮುಖಪುಟ ಸುದ್ದಿ ಇರಾನ್ ವಿರುದ್ಧ ಯುದ್ಧ ಟ್ರಂಪ್ ಪಶ್ಚಾತಾಪ

ಇರಾನ್ ವಿರುದ್ಧ ಯುದ್ಧ ಟ್ರಂಪ್ ಪಶ್ಚಾತಾಪ

ವಾಷಿಂಗ್ಟನ್, ಮೇ.೩೧ –ಇರಾನ್ ಜೊತೆಗಿನ ಮಿಲಿಟರಿ ಸಂಘರ್ಷದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಪರಸ್ಪರ ವಿರೋಧಾಭಾಸದ ಹೇಳಿಕೆಗಳನ್ನು ನೀಡಿದ್ದಾರೆ. ಅಮೆರಿಕವು ಇರಾನ್ ಸಂಘರ್ಷದಲ್ಲಿ “ಭಾಗಿಯಾಗಬಾರದಿತ್ತು” ಎಂದು ಒಪ್ಪಿಕೊಳ್ಳುತ್ತಲೇ, ಟೆಹ್ರಾನ್ ಅಣ್ವಸ್ತ್ರಗಳನ್ನು ಹೊಂದುವುದನ್ನು ತಡೆಯಲು ನಡೆಸಿದ ’ಆಪರೇಷನ್ ಎಪಿಕ್ ಫ್ಯೂರಿ’ ಮಿಲಿಟರಿ ದಾಳಿಗಳನ್ನು ಅವರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಫಾಕ್ಸ್ ನ್ಯೂಸ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಮಧ್ಯಪ್ರಾಚ್ಯದಲ್ಲಿ ಅಮೆರಿಕ ನಡೆಸಿದ ಹಿಂದಿನ ಯುದ್ಧಗಳು ಮತ್ತು ಇರಾಕ್ ಮೇಲಿನ ಆಕ್ರಮಣದ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದರು. ಆದರೆ, ತಕ್ಷಣವೇ ಇರಾನ್ ವಿರುದ್ಧದ ಅಮೆರಿಕದ ಮಿಲಿಟರಿ ಕ್ರಮವನ್ನು ಸಮರ್ಥಿಸಿಕೊಂಡ ಅವರು, ವಾಷಿಂಗ್ಟನ್‌ಗೆ ಹಸ್ತಕ್ಷೇಪ ಮಾಡುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ ಎಂದು ವಾದಿಸಿದರು.

ಇರಾನ್ ಯುದ್ಧದ ರಾಜತಾಂತ್ರಿಕ ಮಾತುಕತೆಗಳು ಮತ್ತು ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹೋರ್ಮುಜ್’ ಜಲಸಂಧಿ ಭವಿಷ್ಯದ ಕುರಿತು ಬಿಕ್ಕಟ್ಟು ಮುಂದುವರಿದಿರುವ ಬೆನ್ನಲ್ಲೇ ಟ್ರಂಪ್ ಅವರ ಈ ಮಹತ್ವದ ಹೇಳಿಕೆ ಹೊರಬಿದ್ದಿದೆ.

ಸಂದರ್ಶನದಲ್ಲಿ ಇರಾಕ್ ಯುದ್ಧದ ಕಹಿ ಅನುಭವವನ್ನು ನೆನಪಿಸಿಕೊಂಡ ಟ್ರಂಪ್, ಅದು ಅಮೆರಿಕ ಮಾಡಿದ ಬಹುದೊಡ್ಡ ರಾಜತಾಂತ್ರಿಕ ಮತ್ತು ತಂತ್ರಗಾರಿಕೆಯ ತಪ್ಪು ಎಂದರು.”ಇರಾಕ್‌ನಲ್ಲಿ ಏನಾಯಿತು ಎಂದು ಒಮ್ಮೆ ನೋಡಿ. ನಾವು ತುಂಬಾ ತಪ್ಪು ಮಾಡಿದೆವು. ಅದು ಅತ್ಯಂತ ಮೂರ್ಖತನದ ಕೆಲಸವಾಗಿತ್ತು. ನಾವು ಮೊದಲೇ ಅಲ್ಲಿಗೆ ಹೋಗಬಾರದಿತ್ತು” ಎಂದು ಟ್ರಂಪ್ ಹೇಳಿದರು.

ಒಂಬತ್ತು ತಿಂಗಳ ಹಿಂದೆ ನಾವು ಬಿ-೨ ಬಾಂಬರ್‌ಗಳ ಮೂಲಕ ಅವರ ಮೇಲೆ ದಾಳಿ ನಡೆಸದಿದ್ದರೆ, ಈ ಹೊತ್ತಿಗೆ ಇರಾನ್ ಅಣ್ವಸ್ತ್ರವನ್ನು ಹೊಂದಿರುತ್ತಿತ್ತು. ಆಗ ಕಥೆಯೇ ಬೇರೆಯಾಗುತ್ತಿತ್ತು” ಎಂದು ಮಿಲಿಟರಿ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡರು. ಇರಾನ್ ಅಣ್ವಸ್ತ್ರ ಹೊಂದುವುದು ಇಸ್ರೇಲ್ ಮಾತ್ರವಲ್ಲದೆ ಇಡೀ ಮಧ್ಯಪ್ರಾಚ್ಯಕ್ಕೆ ದೊಡ್ಡ ಬೆದರಿಕೆಯಾಗಿತ್ತು ಎಂದು ಅವರು ಪ್ರತಿಪಾದಿಸಿದರು.

ತಮ್ಮ ಮಿಲಿಟರಿ ಕಾರ್ಯಾಚರಣೆಯು ಇರಾನ್ ದೇಶವನ್ನು ಸಂಪೂರ್ಣವಾಗಿ ಧ್ವಂಸಗೊಳಿಸುವ ಉದ್ದೇಶ ಹೊಂದಿರಲಿಲ್ಲ, ಬದಲಿಗೆ ಅದು ಸೀಮಿತ ಮತ್ತು ನಿರ್ದಿಷ್ಟ ಗುರಿಯನ್ನು ಹೊಂದಿತ್ತು ಎಂದು ಟ್ರಂಪ್ ಬಿಂಬಿಸಿದ್ದಾರೆ. ಇರಾನ್‌ನ ಸಾಂಪ್ರದಾಯಿಕ ಮಿಲಿಟರಿಯನ್ನು ಗುರಿಯಾಗಿಸುವುದನ್ನು ಅಮೆರಿಕ ಉದ್ದೇಶಪೂರ್ವಕವಾಗಿ ತಪ್ಪಿಸಿದೆ ಮತ್ತು ಕೇವಲ ಅಲ್ಲಿನ ಉನ್ನತ ನಾಯಕತ್ವ ಹಾಗೂ ಕಮಾಂಡ್ ರಚನೆಯನ್ನು ಮಾತ್ರ ಹತ್ತಿಕ್ಕಿದೆ ಎಂದು ಅವರು ತಿಳಿಸಿದರು.”ಅಲ್ಲಿನ ಮಿಲಿಟರಿ ಸ್ವಲ್ಪ ಮಟ್ಟಿಗೆ ಮೃದು ಧೋರಣೆ ಹೊಂದಿದೆ ಎಂದು ನಾವು ಭಾವಿಸುವುದರಿಂದ, ನಾವು ಅವರ ಮಿಲಿಟರಿಯನ್ನು ಹಾಗೆಯೇ ಬಿಟ್ಟಿದ್ದೇವೆ. ಆದರೆ ನಾವು ಅವರ ಬೇರೆ ಬೇರೆ ಹಂತದ ನಾಯಕತ್ವವನ್ನು ಮಟ್ಟಹಾಕಿದ್ದೇವೆ” ಎಂದು ಟ್ರಂಪ್ ವಿವರಿಸಿದರು.

ಹಿಂದಿನ ಯುದ್ಧಗಳಲ್ಲಿ ದೇಶಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದಾಗ, ಆ ದೇಶಗಳು ಮತ್ತೆ ಚೇತರಿಸಿಕೊಳ್ಳಲು ೪೦ ವರ್ಷಗಳೇ ಬೇಕಾಗುತ್ತವೆ. ಅಂತಹ ತಪ್ಪುಗಳನ್ನು ನಾವು ಮಾಡಬಾರದು ಎಂದು ಅವರು ಹೇಳಿದರು. ಈ ಮೂಲಕ ತಮ್ಮ ಇರಾನ್ ಕಾರ್ಯಾಚರಣೆಯು ಕೇವಲ ಬೆದರಿಕೆಗಳನ್ನು ನಿವಾರಿಸುವ ಸೀಮಿತ ಕಾರ್ಯಾಚರಣೆಯಾಗಿದೆಯೇ ಹೊರತು ಇರಾಕ್ ಮಾದರಿಯ ಪೂರ್ಣ ಪ್ರಮಾಣದ ಯುದ್ಧವಲ್ಲ ಎಂದು ಅವರು ಸ್ಪಷ್ಟಪಡಿಸಲು ಬಯಸಿದ್ದಾರೆ. ಆದಾಗ್ಯೂ, ಟ್ರಂಪ್ ಅವರ ಈ ನಡೆ ರಾಜತಾಂತ್ರಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.