Home ಮುಖಪುಟ ಸುದ್ದಿ ಈಜಲು ತೆರಳಿದ್ದ ಐವರು ಜಲಸಮಾಧಿ

ಈಜಲು ತೆರಳಿದ್ದ ಐವರು ಜಲಸಮಾಧಿ

ರಾಯಚೂರು,ಮೇ.೩೧- ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲಾಗಿರುವ ಹೃದಯ ವಿದ್ರಾವಕ ಘಟನೆ ಮಂತ್ರಾಲಯ ಬಳಿಯ ತುಂಗಭದ್ರಾ ನದಿಯಲ್ಲಿ ನಡೆದಿದೆ. ಹೈದರಾಬಾದ್ ಮೂಲದ ಯುವಕ ಚಂದ್ರ(೫), ಸತೀಶ್(೩೫), ಮಂತ್ರಾಲಯ ಗ್ರಾಮದ ರಾಘವೇಂದ್ರ(೨೫), ಧನುಷ್(೨೩) ಉರವಕೊಂಡದ ಸಂಧ್ಯಾ(೨೨) ಮೃತಪಟ್ಟವರು. ಮತ್ತೋರ್ವ ಯುವತಿ ಅಪರ್ಣಾ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಮಂತ್ರಾಲಯದ ಸಂಬಂಧಿಕರ ಮನೆಯಲ್ಲಿನ ಸತ್ಯನಾರಾಯಣ ಪೂಜೆಗೆಂದು ಬಂದಿದ್ದವರು, ಕಾರ್ಯಕ್ರಮದ ಬಳಿಕ ಈಜಲೆಂದು ತುಂಗಭದ್ರಾ ನದಿಗೆ ತೆರಳಿದ್ದರು. ಈ ವೇಳೆ ನದಿಯ ನೀರಿನ ಆ ತಿಳಿಯದೆ ಈಜಲು ಹೋಗಿ ಐವರು ಸಮಾಧಿಯಾಗಿದ್ದಾರೆ.


ಮೃತರ ಪೈಕಿ ರಾಘವೇಂದ್ರ, ಸಂಧ್ಯಾ ಮೃತದೇಹ ಪತ್ತೆಯಾಗಿದ್ದು, ಉಳಿದ ಮೂವರು ಶವಗಳನ್ನು ಸ್ಥಳೀಯ ಮೀನುಗಾರರು ಹುಡುಕಾಟ ನಡೆಸಿ ಹೊರತೆಗಿದಿದ್ದಾರೆ.
ಎಮ್ಮಿಗನೂರು ಡಿವೈಎಸ್‌ಪಿ ಭಾರ್ಗವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂತ್ರಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಪ್ಪೆ ಚಿಪ್ಪು ಹೆಕ್ಕಲು ಹೋಗಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಸಮೀಪ ಮೊನ್ನೆಯಷ್ಟೇ ೧೧ ಮಂದಿ ಪ್ರಾಣ ಕಳೆದುಕೊಂಡಿದ್ದರು. ಕಪ್ಪೆ ಚಿಪ್ಪು ಸಂಗ್ರಹಿಸುತ್ತಿದ್ದ ವೇಳೆ ಏಕಾಏಕಿ ನದಿಯಲ್ಲಿ ನೀರು ಹೆಚ್ಚಾದ ಪರಿಣಾಮ ಮಹಿಳೆಯರೂ ಸೇರಿ ಹಲವರು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ದುರಂತ ಸಂಭವಿಸಿತ್ತು. ಧಾರವಾಡ ತಾಲೂಕಿನ ಸಿಂಗನಹಳ್ಳಿ ಗ್ರಾಮದ ಬಳಿ ಇರುವ ಕೆರೆಯಲ್ಲಿ ಈಜಲು ಹೋದ ಮೂವರು ಬಾಲಕರು ನೀರಲ್ಲಿ ಮುಳುಗಿ ನಿನ್ನೆಯಷ್ಟೇ ಪ್ರಾಣ ಬಿಟ್ಟಿದ್ದರು. ಈ ಘಟನೆಗಳು ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ದುರಂತ ಸಂಭವಿಸಿದೆ.


ಟ್ರ್ಯಾಕ್ಟರ್ ಪಲ್ಟಿ:


ಕಿರಿದಾದ ರಸ್ತೆಯಿಂದಾಗಿ ಟ್ರ್ಯಾಕ್ಟರ್ ಪಲ್ಟಿ ಹೊಡೆದು ಮೇಲೆ ಬಿದ್ದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಯರಗೇರಾ ಬಳಿಯ
ಬಿಜನಗೇರಾ ಗ್ರಾಮದಲ್ಲಿ ನಡೆದಿದೆ.


ಈರಣ್ಣ ಗೌಡ (೨೫) ಮೃತಪಟ್ಟವರು, ಜಮೀನಿನಲ್ಲಿ ಮಡಿಕೆ ಹೊಡೆದು ಮನೆಗೆ ಮರಳುತ್ತಿದ್ದ ವೇಳೆ ಕಿರಿದಾದ ರಸ್ತೆಯಿಂದ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಪಲ್ಟಿಯಾಗಿ ತಗ್ಗು ಪ್ರದೇಶಕ್ಕೆ ಉರುಳಿದ್ದು, ಸುಮಾರು ೨೫ ಅಡಿ ಆಳಕ್ಕೆ ಬಿದ್ದಿದೆ.


ಘಟನೆಯಲ್ಲಿ ಟ್ರ್ಯಾಕ್ಟರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದರೂ ಮತ್ತೋರ್ವ ಯುವಕ ಸಾವನ್ನಪ್ಪಿದ್ದಾನೆ. ಯರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.