Home ಜಿಲ್ಲೆ ವಿಕಲಚೇತನರ ಕುಂದುಕೊರತೆ ಸಭೆ

ವಿಕಲಚೇತನರ ಕುಂದುಕೊರತೆ ಸಭೆ

ಗುಳೇದಗುಡ್ಡ,ಮೇ೩೦: ಸರಕಾರದ ಆದೇಶದಂತೆ ಎಲ್ಲ ಇಲಾಖೆಗಳಲ್ಲಿ ನಿಗದಿಪಡಿಸಿದ ಒಟ್ಟು ಅನುದಾನದಲ್ಲಿ ಶೇ.೫ ರಷ್ಟು ಅನುದಾನವನ್ನು ಕಡ್ಡಾಯವಾಗಿ ಖರ್ಚು ಮಾಡಿ, ಅಗತ್ಯ ಮಾಹಿತಿಯೊಂದಿಗೆ ಮುಂದಿನ ಸಭೆಗೆ ಹಾಜರಾಗಬೇಕು ಎಂದು ತಹಶೀಲದಾರ ಎಸ್.ಫ್. ಬೊಮ್ಮಣ್ಣವರ ಅಧಿಕಾರಿಗಳಿಗೆ ಸೂಚಿಸಿದರು.


ಅವರು ಪಟ್ಟಣದ ತಹಶೀಲ್ದಾರರ ಕಚೇರಿಯಲ್ಲಿ ನಡೆದ ತಾಲೂಕಾಮಟ್ಟದ ವಿಕಲಚೇತನರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುವುದು. ಅಗತ್ಯ ಮಾಹಿತಿಇಲ್ಲದೇ ಕಾಟಾಚಾರಕ್ಕೆ ಸಭೆ ಹಾಜರಾಗಬೇಡಿ ಎಂದು ಎಚ್ಚರಿಸಿದರು.


ವಿಕಲಚೇತನರು ತಮ್ಮ ಸಮಸ್ಯೆಗಳಿದ್ದಲ್ಲಿ ಲಿಖಿತವಾಗಿ ಅಥವಾ ನೇರವಾಗಿ ಸಂಪರ್ಕಿಸಬೇಕು. ಇದುವರೆಗೆ ಮೂರು ತಿಂಗಳ ವಿಕಲಚೇತನರ ಪೋಷಣಾ ಭತ್ಯೆ ಅನುದಾನ ಜಮಾ ಆಗಿಲ್ಲ. ಸರಕಾರದ ಹಂತದಿAದ ಜಮಾ ಮಾಡುತ್ತಾರೆ. ಕೃಷಿ, ಪಶುಸಂಗೋಪನೆ, ಹೆಸ್ಕಾಂ ಇಲಾಖೆಯವರು ಫಲಾನುಭವಿ ಆಯ್ಕೆ ಮಾಡುವಾಗ ನಿಯಮಾನುಸಾರ ವಿಕಲಚೇತನರಿಗೆ ನೀಡಬೇಕು. ಬಸ್ ನಿಲ್ದಾಣದಲ್ಲಿ ವಿಶೇಷ ಶೌಚಾಲಯ ನಿರ್ಮಾಣ ಮಾಡಬೇಕು. ಬಸ್‌ನಲ್ಲಿ ವಾಸಸ್ಥಳದಿಂದ ೧೦೦ ಕಿ.ಮೀ. ಪ್ರಯಾಣಿಸಲು ಅವಕಾಶ ಇದ್ದು, ಮಾನವೀಯತೆಯಿಂದ ವರ್ತಿಸಲು, ನಿಗದಿಪಡಿಸಿದ ಆಸನ ಕೂಡಲು ಅವಕಾಶ ಮಾಡಿಕೊಡಬೇಕು ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.


ವಾರದಲ್ಲಿ ಒಂದು ದಿನ ಗುಳೇದಗುಡ್ಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಯುಡಿಐಡಿ ಮೆಡಿಕಲ್ ಕ್ಯಾಂಪ್ ನಡೆಸಲು ಕ್ರಮವಹಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಕರವೇ ತಾಲೂಕಾಧ್ಯಕ್ಷ ರವಿ ಅಂಗಡಿ, ತಾಲೂಕಾ ವಿಕಲಚೇತನರ ಸಂಘದ ಅಧ್ಯಕ್ಷ ಹುಚ್ಚೇಶ ಯಂಡಿಗೇರಿ, ತಾಲೂಕಾ ವಿವಿದೊದ್ದೇಶ ಕಾರ್ಯಕರ್ತ ಮಹಾಂತೇಶ ಪಾಟೀಲ, ಸಂತೋಷ ಯರಗುಂಟಿ ಸೇರಿದಂತೆ ಬಿಸಿಎಂ, ಮೀನುಗಾರಿಕೆ, ಶಿಕ್ಷಣ, ಕೃಷಿ, ಪಶುಪಾಲನೆ, ಪುರಸಭೆ, ಸಿಡಿಪಿಒ ಕಚೇರಿಯ ಅಧಿಕಾರಿಗಳು ಹಾಜರಿದ್ದರು.