
ಕಲಬುರಗಿ: ಮೇ.23:ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಆರಂಭವಾಗುತ್ತಿರುವ ಹಿನ್ನೆಲೆ ಜಿಲ್ಲೆಯ ರೈತರಿಗೆ ರಸಗೊಬ್ಬರ ಕೊರತೆ ಉಂಟಾಗದಂತೆ ಜಿಲ್ಲಾಡಳಿತ ತಕ್ಷಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಚಂದ್ರಕಾಂತ ಪಿ. ಓಗೆ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ಕಳೆದ ನಾಲ್ಕೈದು ವರ್ಷಗಳಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಜಿಲ್ಲೆಯ ರೈತರು ತೀವ್ರ ಸಂಕಷ್ಟ ಅನುಭವಿಸಿದ್ದು,ಬೆಳೆದ ಬೆಳೆ ಕೈಗೆಟುಕದೇ ರೈತರು ಆರ್ಥಿಕವಾಗಿ ಸಂಪೂರ್ಣ ಕುಸಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ರೈತರಿಗೆ ಸಮರ್ಪಕ ರಸಗೊಬ್ಬರ ಪೂರೈಕೆ ಮಾಡದಿದ್ದರೆ ಜಿಲ್ಲಾಡಳಿತದ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕಳೆದ ವರ್ಷ ಜಿಲ್ಲೆಯ ಹಲವು ಭಾಗಗಳಲ್ಲಿ ರೈತರು ರಸಗೊಬ್ಬರಕ್ಕಾಗಿ ಅಂಗಡಿಗಳ ಮುಂದೆ ಹಗಲು- ರಾತ್ರಿ ಸಾಲಿನಲ್ಲಿ ನಿಂತು ಪರದಾಡಿದ ಘಟನೆಗಳು ನಡೆದಿದ್ದವು. ಕೆಲ ರಸಗೊಬ್ಬರ ವ್ಯಾಪಾರಸ್ಥರು ಯೂರಿಯಾ ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ಕಾಳಬಜಾರ್ ನಡೆಸಿ ರೈತರನ್ನು ಸಂಕಷ್ಟಕ್ಕೆ ದೂಡಿದ್ದರು. ಈ ಬಾರಿ ಅಂತಹ ಘಟನೆಗಳು ಮರು ಕಳಿಸದಂತೆ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಅವರು ಒತ್ತಾಯಿಸಿದರು.
ಮುಂಗಾರು ಹಂಗಾಮಿಗೆ ಅಗತ್ಯವಿರುವ ಯೂರಿಯಾ, ಡಿಎಪಿ ಸೇರಿದಂತೆ ಎಲ್ಲ ವಿಧದ ರಸಗೊಬ್ಬರಗಳನ್ನು ಜಿಲ್ಲೆಯ ಎಲ್ಲ ಸಹಕಾರ ಸಂಘಗಳು ಹಾಗೂ ಖಾಸಗಿ ಅಂಗಡಿಗಳಲ್ಲಿ ಸಮರ್ಪಕವಾಗಿ ಮತ್ತು ನಿರಂತರವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ಒಂದು ಎಫ್‍ಐಡಿ ಖಾತೆಯ 1 ಎಕರೆ ಭೂಮಿಗೆ ಒಂದು ತಿಂಗಳಿಗೆ ಒಂದೇ ಯೂರಿಯಾ ಚೀಲ ಎಂಬ ನಿಯಮದಿಂದ ರೈತರಿಗೆ ಅನ್ಯಾಯವಾಗುತ್ತಿದ್ದು, ಈ ನಿಯಮವನ್ನು ಕೂಡಲೇ ರದ್ದುಪಡಿಸಿ ರೈತರ ಅವಶ್ಯಕತೆಗೆ ಅನುಗುಣವಾಗಿ ಗೊಬ್ಬರ ವಿತರಣೆ ಮಾಡುವಂತೆ ಅವರು ಮನವಿ ಮಾಡಿಕೊಂಡರು.






















