
ಬೆಂಗಳೂರು:ಮೇ. ೨೨- ಸಿಲಿಕಾನ್ ಸಿಟಿಯಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯಿಂದ ನಗರವೇ ಅಸ್ತವ್ಯಸ್ತಗೊಂಡಿದೆ. ಒಂದೇ ಗಂಟೆ ಸುರಿದ ಮಹಾಮಳೆಗೆ ರಸ್ತೆಗಳಲ್ಲಿ ನೀರು ತುಂಬಿ, ಹಲವೆಡೆ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಪರಿಸ್ಥಿತಿ ನಿರ್ಮಾಣವಾಯಿತು. ರಸ್ತೆಗಳು ನದಿಗಳಂತಾಗಿ, ಅಂಡರ್‌ಪಾಸ್‌ಗಳು ಜಲಾವೃತಗೊಂಡು ಜನಜೀವನ ತತ್ತರಿಸಿತು.
ನಗರದ ವಿವಿಧ ಭಾಗಗಳಲ್ಲಿ ೪೦ಕ್ಕೂ ಹೆಚ್ಚು ಬೃಹತ್ ಮರಗಳು ಧರೆಗೆ ಉರುಳಿದ್ದು, ೧೦೦ಕ್ಕೂ ಹೆಚ್ಚು ರೆಂಬೆ-ಕೊಂಬೆಗಳು ಮುರಿದಿವೆ. ಮರಗಳು ಕಾರು, ಬೈಕ್ ಹಾಗೂ ವಿದ್ಯುತ್ ಕಂಬಗಳ ಮೇಲೆ ಬಿದ್ದ ಪರಿಣಾಮ ವಾಹನಗಳಿಗೆ ಭಾರೀ ಹಾನಿಯಾಗಿದ್ದು, ಅನೇಕ ಪ್ರದೇಶಗಳಲ್ಲಿ ರಾತ್ರಿ ಪೂರ್ತಿ ವಿದ್ಯುತ್ ವ್ಯತ್ಯಯ ಉಂಟಾಯಿತು.
ಜಯನಗರ, ಬಸವನಗುಡಿ, ರಾಜಾಜಿನಗರ, ವಿಜಯನಗರ, ಆರ್.ಟಿ.ನಗರ, ಶೇಷಾದ್ರಿಪುರಂ, ಚಾಮರಾಜಪೇಟೆ, ಜೆಪಿ ನಗರ, ಸದಾಶಿವನಗರ ಸೇರಿದಂತೆ ೫೦ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಮರಗಳು ಬಿದ್ದು ಸಂಚಾರಕ್ಕೆ ಅಡ್ಡಿಯಾಯಿತು. ಕೆಲವೆಡೆ ಮರ ತೆರವು ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಸಾರ್ವಜನಿಕರು ಜಿಬಿಎ ಹಾಗೂ ನಗರ ಪಾಲಿಕೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೆಜೆಸ್ಟಿಕ್, ಮಲ್ಲೇಶ್ವರಂ, ಮೈಸೂರು ರಸ್ತೆ, ಲಾಲ್‌ಬಾಗ್, ಕಬ್ಬನ್ ಪಾರ್ಕ್, ಕೆ.ಆರ್.ಮಾರ್ಕೆಟ್, ವಿಧಾನಸೌಧ, ವಸಂತನಗರ, ಮಾಗಡಿ ರಸ್ತೆ, ಬಸವೇಶ್ವರನಗರ ಸೇರಿದಂತೆ ಹಲವೆಡೆ ಆಲಿಕಲ್ಲು ಸಹಿತ ಭಾರೀ ಮಳೆಯಾಯಿತು. ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು.
ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಮರ ಬಿದ್ದು ರಸ್ತೆ ಬಂದ್ ಆಗಿದ್ದು, ಪರ್ಯಾಯವಾಗಿ ಸರ್ವಿಸ್ ರಸ್ತೆ ಬಳಕೆ ಮಾಡಲಾಯಿತು. ಸ್ಥಳಕ್ಕೆ ಆಗಮಿಸಿದ ಜಿಬಿಎ ಸಿಬ್ಬಂದಿ ಮರ ತೆರವು ಕಾರ್ಯ ನಡೆಸಿದರು.
ಇನ್ನೊಂದೆಡೆ ಮಹಾಲಕ್ಷ್ಮಿ ಲೇಔಟ್‌ನ ಪೈಪ್‌ಲೈನ್ ರಸ್ತೆಯಲ್ಲಿ ಬೃಹತ್ ಮರ ಮೂರು ಕಾರುಗಳ ಮೇಲೆ ಬಿದ್ದು ಸಂಪೂರ್ಣ ಜಖಂಗೊಂಡಿವೆ. ಮರ ತೆರವು ಕಾರ್ಯ ವಿಳಂಬವಾಗಿರುವುದಕ್ಕೂ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವೆಡೆ ಅರ್ಧದಷ್ಟು ಮಾತ್ರ ಮರ ತೆರವು ಮಾಡಿ ಫುಟ್‌ಪಾತ್‌ಗಳಲ್ಲಿ ಬಿಟ್ಟು ಹೋಗಿರುವ ಆರೋಪವೂ ಕೇಳಿಬಂದಿದೆ.
ಮಳೆಯಿಂದ ಜಿಬಿಎ ವ್ಯಾಪ್ತಿಯ ಆರು ಕಂಟ್ರೋಲ್ ರೂಮ್‌ಗಳಿಗೆ ೬೦೦ಕ್ಕೂ ಹೆಚ್ಚು ದೂರುಗಳು ಬಂದಿವೆ. ಮನೆಗಳಿಗೆ ನೀರು ನುಗ್ಗುವುದು, ವಿದ್ಯುತ್ ವ್ಯತ್ಯಯ, ಮರ ಬಿದ್ದು ರಸ್ತೆ ಬಂದ್ ಆಗಿರುವುದು ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದಾರೆ. ದೂರುಗಳ ಇತ್ಯರ್ಥಕ್ಕೆ ಸಿಬ್ಬಂದಿ ಹಾಗೂ ಯಂತ್ರೋಪಕರಣಗಳ ಕೊರತೆ ಸ್ಪಷ್ಟವಾಗಿ ಗೋಚರಿಸಿತು.
ಪ್ರತಿ ಮಳೆಯಲ್ಲೂ ಇದೇ ಸಮಸ್ಯೆ ಮರುಕಳಿಸುತ್ತಿದ್ದರೂ ಶಾಶ್ವತ ಪರಿಹಾರ ಕಾಣದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮಳೆ ಬಂದರೆ ತಂಪು ನೀಡಬೇಕಾದ ನಗರದಲ್ಲಿ ಇದೀಗ ಭಯದ ವಾತಾವರಣ ನಿರ್ಮಾಣವಾಗಿದೆ.
೪ ದಿನ ಭಾರೀ ಮಳೆ

ನಿನ್ನೆ ಸಂಜೆ ಬೆಂಗಳೂರು ನಗರದಲ್ಲಿ ಬಂದಂತಹ ಜೋರು ಗಾಳಿ, ಮಳೆಗೆ ಮರ, ವಿದ್ಯುತ್ ಕಂಬಗಳು ಧರೆ ಹಾಗೂ ವಾಹನದ ಬಿದ್ದಿರುವ ಘಟನೆ ಹೊಸ ತಿಪ್ಪಸಂದ್ರ ಬಡಾವಣೆಯ ಬಿ. ಡಿ. ಎ. ಲೇಔಟ್ ನ ೨ನೇ ಮುಖ್ಯ ರಸ್ತೆ ಯಲ್ಲಿ ನಡೆದಿದೆ ಮತ್ತು ಇಡೀ ರಾತ್ರಿಯಿಂದ ಹಿಡಿದು ಇಧುವರೆಗೂ ಇಲ್ಲಿ ಪವರೇ (ಠಿoತಿeಡಿ) ಇಲ್ಲ.
ಇದೀಗ ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಬೆಂಗಳೂರು ನಗರ ಸೇರಿದಂತೆ ಎಂಟು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದ್ದು, ೧೯ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ರಾಯಚೂರು, ಯಾದಗಿರಿ, ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಬಿರುಗಾಳಿ, ಗುಡುಗು-ಮಿಂಚು ಸಹಿತ ಭಾರೀ ಮಳೆಯ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದ್ದು, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುವ ಭೀತಿ ಎದುರಾಗಿದೆ.
ಹವಾಮಾನ ಇಲಾಖೆ ಸಾರ್ವಜನಿಕರು ಹಾಗೂ ರೈತರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದು, ಸಿಡಿಲು ಹಾಗೂ ಬಿರುಗಾಳಿ ಸಂದರ್ಭಗಳಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಮನವಿ ಮಾಡಿದೆ.

























