
ಬೆಂಗಳೂರು, ಮೇ ೨೨- ಕರ್ನಾಟಕದ ೪ ಸ್ಥಾನಗಳು ಸೇರಿದಂತೆ ರಾಜ್ಯಸಭೆಯ ಒಟ್ಟು ೨೪ ಸ್ಥಾನಗಳಿಗೆ ಜೂನ್ ೧೮ ರಂದು ಚುನಾವಣೆ ನಡೆಯಲಿದೆ.
ಈ ಎಲ್ಲಾ ೨೪ ಸ್ಥಾನಗಳು ಮುಂದಿನ ತಿಂಗಳು ತೆರವಾಗಲಿದ್ದು, ಈ ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ಚುನಾವಣಾ ವೇಳಾ ಪಟ್ಟಿಯನ್ನು ಪ್ರಕಟಿಸಿದ್ದು, ಜೂನ್ ೧೮ ರಂದು ಮತದಾನ ನಿಗದಿಯಾಗಿದೆ.
ನಾಮಪತ್ರ ಸಲ್ಲಿಸಲು ಜೂನ್ ೮ ಕಡೇ ದಿನವಾಗಿದ್ದು, ನಾಮಪತ್ರ ವಾಪಸ್ಸಾತಿಗೆ ಜೂನ್ ೧೧ ಕೊನೆಯ ದಿನ. ಜೂನ್ ೧೮ ರಂದು ಮತದಾನ, ಮತಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.
ವಿವಿಧ ರಾಜ್ಯಗಳ ವಿಧಾನಸಭೆಗಳಿಂದ ರಾಜ್ಯಸಭೆಯ ೨೪ ಸ್ಥಾನಗಳಿಗೆ ಸದಸ್ಯರ ಆಯ್ಕೆ ನಡೆಯಲಿದೆ.
ಕರ್ನಾಟಕದಲ್ಲೂ ೪ ಸ್ಥಾನಕ್ಕೆ ಚುನಾವಣೆ
ಕರ್ನಾಟಕದಲ್ಲೂ ೪ ರಾಜ್ಯಸಭಾ ಸ್ಥಾನಗಳು ಖಾಲಿಯಾಗಲಿದ್ದು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯ ಈರಣ್ಣ ಕಡಾಡಿ ಮತ್ತು ಕೆ. ನಾರಾಯಣ ಇವರುಗಳ ಅವಧಿ ಬರುವ ಜೂನ್ ೨೫ಕ್ಕೆ ಕೊನೆಗೊಳ್ಳಲಿದೆ.
ವಿಧಾನಸಭೆಯಲ್ಲಿ ಶಾಸಕರ ಸಂಖ್ಯಾಬಲದ ಪ್ರಕಾರ ೪ ಸ್ಥಾನಗಳಲ್ಲಿ ಮೂರು ಸ್ಥಾನಗಳು ಕಾಂಗ್ರೆಸ್‌ಗೆ ಸಿಗಲಿದ್ದು, ಒಂದು ಸ್ಥಾನ ಬಿಜೆಪಿಗೆ ಸಿಗಲಿದೆ.
ಹಾಲಿ ರಾಜ್ಯಸಭಾ ಸದಸ್ಯರಾಗಿರುವ ಮಾಜಿ ಪ್ರಧಾನಿ ದೇವೇಗೌಡರು ಮತ್ತೊಂದು ಅವಧಿಗೆ ರಾಜ್ಯಸಭೆಗೆ ಪ್ರವೇಶಿಸಲು ಉತ್ಸುಕರಾಗಿದ್ದಾರೆ. ಆದರೆ ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಶಾಸಕರ ಸಂಖ್ಯಾಬಲ ಇಲ್ಲದ ಕಾರಣ ಮೈತ್ರಿ ಪಕ್ಷವಾದ ಬಿಜೆಪಿ ಒಪ್ಪಿದರೆ ದೇವೇಗೌಡರನ್ನು ರಾಜ್ಯಸಭೆಗೆ ಆಯ್ಕೆ ಮಾಡಬಹುದು.
ರಾಜ್ಯಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ಬೆಂಬಲಿಸುವ ಬಗ್ಗೆ ಬಿಜೆಪಿಯಲ್ಲಿ ಇನ್ನೂ ಯಾವ ತೀರ್ಮಾನಗಳು ಆಗಿಲ್ಲ.
ನಿನ್ನೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಸಭಾ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಇಲ್ಲವೇ ನಿರ್ಮಲ್ ಕುಮಾರ್ ಸುರಾನ ಅವರ ಹೆಸರನ್ನು ಶಿಫಾರಸ್ಸು ಮಾಡುವ ಬಗ್ಗೆ ಚರ್ಚೆಗಳು ನಡೆದಿದ್ದವು.
ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದು, ಒಂದು ವೇಳೆ ಬಿಜೆಪಿ ವರಿಷ್ಠರು ದೇವೇಗೌಡರಿಗೆ ಅವಕಾಶ ಮಾಡಿಕೊಟ್ಟರೆ ದೇವೇಗೌಡರು ಮತ್ತೊಮ್ಮೆ ರಾಜ್ಯಸಭಾ ಸದಸ್ಯರಾಗಲಿದ್ದಾರೆ.
ದೇವೇಗೌಡರಿಗೆ ರಾಜ್ಯಸಭಾ ಸ್ಥಾನಕ್ಕೆ ಮತ್ತೊಂದು ಅವಧಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರು ದೆಹಲಿ ಮಟ್ಟದಲ್ಲಿ ಬಿಜೆಪಿ ನಾಯಕರ ಜತೆ ಚರ್ಚೆ ನಡೆಸಿದ್ದು, ೩-೪ ದಿನಗಳ ಹಿಂದೆ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು.

























