
ಬೆಂಗಳೂರು.ಮೇ೨೨: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ‘ಗೃಹಲಕ್ಷ್ಮಿ’ ಹೆಸರಿನಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ಧಿಗೋಷ್ಠಿ ಇಂದು ನಡೆಸಿ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಲ್ಲದೆ, ನೇರ ಸವಾಲುಗಳನ್ನು ಎಸೆದಿದ್ದಾರೆ.
ನಿಖಿಲ್ ಸ್ಟೇಟಸ್ ಏನು ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಟೀಕೆಗೆ ತಿರುಗೇಟು ನೀಡಿದ ನಿಖಿಲ್, “ನಾನು ಕನ್ನಡ ನಾಡಿನ ಹುಡುಗ, ಇಲ್ಲಿನ ತೆರಿಗೆದಾರ. ನಾಡಿನ ಜನರ ಪರವಾಗಿ ಒಬ್ಬ ಸಾಮಾನ್ಯ ಪ್ರಜೆಯಾಗಿ ಪ್ರಶ್ನೆ ಮಾಡುತ್ತಿದ್ದೇನೆ, ಇದೇ ನನ್ನ ಸ್ಟೇಟಸ್” ಎಂದರು. ಮುಂದುವರಿದು, “ಡಿಸಿಎಂ ಅವರು ಬೇಕಿದ್ದರೆ ‘ಕಾಕ್ರೋಜ್ ಪಾರ್ಟಿ’ಗೆ ಅಧ್ಯಕ್ಷರಾಗಲಿ. ಅವರ ನೇತೃತ್ವದಲ್ಲೇ ಪಕ್ಷ ಕಟ್ಟಿ, ಮುಂಬರುವ ಚುನಾವಣೆಯಲ್ಲಿ ೫೦ ಸೀಟುಗಳನ್ನು ಗೆದ್ದು ತೋರಿಸಲಿ ನೋಡೋಣ” ಎಂದು ನೇರ ಸವಾಲು ಹಾಕಿದರು.
ರಾಜ್ಯ ಸರ್ಕಾರದ ವಿರುದ್ಧ ದೊಡ್ಡ ಆರ್ಥಿಕ ಹಗರಣದ ಆರೋಪ ಹೊರಿಸಿದ ನಿಖಿಲ್ ಕುಮಾರಸ್ವಾಮಿ, ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಅಂಕಿ-ಅಂಶಗಳನ್ನು ಮುಂದಿಟ್ಟರು.
ಅಂಕಿ-ಅಂಶಗಳ ಲೆಕ್ಕಾಚಾರ: ೨೦೨೪-೨೫ರ ಆರ್ಥಿಕ ವರ್ಷದಲ್ಲಿ ಒಟ್ಟು ೧ ಕೋಟಿ ೨೮ ಲಕ್ಷ ಗೃಹಲಕ್ಷ್ಮಿ ಫಲಾನುಭವಿಗಳಿದ್ದಾರೆ. ಬಜೆಟ್‌ನಲ್ಲಿ ನಿಗದಿಪಡಿಸಿದ ಲೆಕ್ಕಾಚಾರದ ಪ್ರಕಾರ ವರ್ಷಕ್ಕೆ ೨೮ ಸಾವಿರ ಕೋಟಿ ರೂ. ವೆಚ್ಚವಾಗಬೇಕಿತ್ತು. ಆದರೆ, ಸರ್ಕಾರ ಕೇವಲ ೧೦ ತಿಂಗಳಿಗೆ ಮಾತ್ರ ಅಂದರೆ ೨೩ ಸಾವಿರ ಕೋಟಿ ರೂ. ಮಾತ್ರ ಜಮಾ ಮಾಡಿದೆ.
ಕಾಣೆಯಾದ ೫ ಸಾವಿರ ಕೋಟಿ ಎಲ್ಲಿದೆ: ೨೦೨೫ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ೨ ಕಂತುಗಳ ಒಟ್ಟು ೫ ಸಾವಿರ ಕೋಟಿ ರೂ. ಹಣವನ್ನು ಮಹಿಳೆಯರ ಖಾತೆಗೆ ಹಾಕಿಲ್ಲ. ಆರ್ಥಿಕ ಇಲಾಖೆ ಈ ಹಣ ಬಿಡುಗಡೆ ಮಾಡದಿರುವುದನ್ನು ಸಚಿವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ.
ಚುನಾವಣೆಗೆ ಬಳಕೆ ಆಯಿತೇ?: “ಈ ೫ ಸಾವಿರ ಕೋಟಿ ರೂ. ಹಣ ಎಲ್ಲಿ ಹೋಯಿತು? ಇದನ್ನು ಚುನಾವಣೆಗೆ ಬಳಕೆ ಮಾಡಿದ್ದೀರಾ ಅಥವಾ ಬೇರೆ ಯಾವುದಕ್ಕೆ ವರ್ಗಾಯಿಸಿದ್ದೀರಾ ಇದಕ್ಕೆ ಮುಖ್ಯಮಂತ್ರಿಗಳೇ ನೇರ ಹೊಣೆ, ಅವರು ಉತ್ತರ ನೀಡಬೇಕು” ಎಂದು ಒತ್ತಾಯಿಸಿದರು.
“ಯೋಜನೆ ಆರಂಭವಾದಾಗಿನಿಂದ ಒಟ್ಟು ೨೧ ಕಂತುಗಳನ್ನು ನೀಡಬೇಕಿತ್ತು. ಆದರೆ ೨೦೨೩-೨೪ರಲ್ಲಿ ೮ ಕಂತು, ೨೦೨೪-೨೫ರಲ್ಲಿ ೧೦ ಕಂತು ಮಾತ್ರ ನೀಡಲಾಗಿದೆ. ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸುಳ್ಳು ಹೇಳಿ ಎರಡು ಕಂತಿನ ಹಣವನ್ನು ಮುಚ್ಚಿಟ್ಟಿದ್ದಾರೆ. ಶಾಸಕ ಮಹೇಶ್ ತೆಂಗಿನಕಾಯಿ ಈ ವಿಚಾರವನ್ನು ಬಹಿರಂಗಪಡಿಸಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ೨೦೨೫ರ ಡಿಸೆಂಬರ್ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ೫ ತಿಂಗಳಾದರೂ ಉತ್ತರವಿಲ್ಲ. ಇದು ಸಿಎಂ ಕಚೇರಿಯಲ್ಲಿ ಮುಚ್ಚಿಡುವ ದಾಖಲೆಯಲ್ಲ, ಜನರ ಮುಂದೆ ಇಡಬೇಕಾದ ವಿಚಾರ.”
ಈಗಾಗಲೇ ಈ ಕುರಿತು ಮಹಿಳೆಯರು ಹೈಕೋರ್ಟ್‌ನಲ್ಲಿ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಸಲ್ಲಿಕೆ ಮಾಡಿದ್ದು, ನ್ಯಾಯಾಲಯ ಸರ್ಕಾರಕ್ಕೆ ಚಾಟಿ ಬೀಸಲಿದೆ. ಇದರ ವಿರುದ್ಧ ಜೆಡಿಎಸ್ ದೊಡ್ಡ ಮಟ್ಟದ ಹೋರಾಟ ರೂಪಿಸಲಿದೆ ಎಂದು ಎಚ್ಚರಿಸಿದರು.
ಬಿಡದಿ ಕೈಗಾರಿಕಾ ಮಹಾ ಯೋಜನೆ ಅಥವಾ ಇಂಟಿಗ್ರೇಟೆಡ್ ಟೌನ್‌ಶಿಪ್‌ಗಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸುತ್ತಿರುವ ಸರ್ಕಾರದ ನಿಲುವನ್ನು ನಿಖಿಲ್ ತೀವ್ರವಾಗಿ ಖಂಡಿಸಿದರು. ಈ ಯೋಜನೆ ಹಿಂದೆ ಹೆಚ್.ಡಿ. ಕುಮಾರಸ್ವಾಮಿ ಅವರ ಕನಸಿನ ಕೂಸಾಗಿದ್ದರೂ, ಅಂದು ‘ಕೃಷ್ಣಾ’ ಕಚೇರಿಯಲ್ಲಿ ರೈತರೊಂದಿಗೆ ಸಭೆ ನಡೆಸಿದ ಬಳಿಕ ಅವರ ಮನವಿಗೆ ಸ್ಪಂದಿಸಿ ಯೋಜನೆಯನ್ನು ಕೈಬಿಡಲಾಗಿತ್ತು ಎಂದು ನೆನಪಿಸಿದರು.
ಆದರೆ ಈಗಿನ ಸರ್ಕಾರ ಇದನ್ನು ಪ್ರತಿಷ್ಠೆಯಾಗಿ ತಗೆದುಕೊಂಡಿದೆ. ಅಲ್ಲಿ ರೈತರೇ ಇಲ್ಲ ಎಂದು ಡಿಸಿಎಂ ಹಠ ಹಿಡಿದಿದ್ದಾರೆ. ಕೃಷಿ ಜಮೀನನ್ನೇ ಏಕೆ ರೈತರಿಂದ ಬಲವಂತವಾಗಿ ಕಿತ್ತುಕೊಳ್ಳುತ್ತಿದ್ದೀರಿ ಡಿಸಿಎಂ ಮೊದಲು ಹಳ್ಳಿಗಳಿಗೆ ಬಂದು ರೈತರ ಕ್ಷಮೆ ಕೇಳಲಿ ಎಂದರು.
ಅಷ್ಟೊಂದು ಮಾತಾಡುವ ಡಿಸಿಎಂ, ಈ ಯೋಜನೆಯಲ್ಲಿ ಸ್ಥಳೀಯರಿಗೆ ಕಡ್ಡಾಯವಾಗಿ ಶೇ. ೫೦ ರಷ್ಟು ಉದ್ಯೋಗ ನೀಡಲೇಬೇಕು ಎಂಬ ಕಾನೂನನ್ನು ತರಲಿ ನೋಡೋಣ, ಆಗ ನಾನು ಒಪ್ಪುತ್ತೇನೆ. ಕುಮಾರಸ್ವಾಮಿ ಅವರಿಗೆ ಚಾಲೆಂಜ್ ಮಾಡುವುದನ್ನು ಬಿಟ್ಟು ರೈತರ ಪ್ರಶ್ನೆಗಳಿಗೆ ಉತ್ತರಿಸಲಿ. ನಾನು ಯಾವುದೇ ಸ್ಟೇಟಸ್ ಇಲ್ಲದೆ ಕಾಮನ್ ಮ್ಯಾನ್ ಆಗಿ ಹಳ್ಳಿಗಳಿಗೆ ಬರಲು ಸಿದ್ಧ” ಎಂದು ಸವಾಲು ಹಾಕಿದರು.

























