Home Lead News ಪಟ್ಟಾಭಿಷೇಕ ವಿಳಂಬ

ಪಟ್ಟಾಭಿಷೇಕ ವಿಳಂಬ

ಚೆನ್ನೈ, ಮೇ ೭- ತಮಿಳುನಾಡಿನಲ್ಲಿ ನಟ ಹಾಗೂ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ಅವರ ಪಟ್ಟಾಭಿಷೇಕ ಮತ್ತಷ್ಟು ವಿಳಂಬವಾಗಲಿದ್ದು, ನಟ ವಿಜಯ್ ರಾಜ್ಯಪಾಲರಿಗೆ ಬಹುಮತದ ಸಾಕ್ಷ್ಯ ನೀಡಿದ ನಂತರವೇ ಅವರಿಗೆ ಸರ್ಕಾರ ರಚನೆಗೆ ಅವಕಾಶ ಸಿಗಲಿದೆ.


ಮೊದಲು ಬಹುಮತ ತೋರಿಸಿ ನಂತರ ಸರ್ಕಾರ ರಚನೆಗೆ ಅವಕಾಶ ಕೇಳಿ ಎಂದು ರಾಜ್ಯಪಾಲ ರಾಜೇಂದ್ರ ಹರ್ಲೆಕರ್ ನಟ ವಿಜಯ್ ಅವರಿಗೆ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಹೇಳಲಾಗಿದ್ದು, ರಾಜ್ಯಪಾಲರ ಈ ನಿರ್ಧಾರದಿಂದ ತಮಿಳುನಾಡಿನಲ್ಲಿ ನೂತನ ಸರ್ಕಾರ ರಚನೆಯ ಅನಿಶ್ಚಿತತೆ ಮುಂದುವರೆದಿದೆ.


ನಟ ವಿಜಯ್ ಕಳೆದ ೨೪ಗಂಟೆಗಳಲ್ಲಿ ಎರಡನೇ ಬಾರಿಗೆ ಇಂದು ಬೆಳಗ್ಗೆಯೇ ತಮಿಳುನಾಡಿನ ರಾಜ್ಯಪಾಲ ರಾಜೇಂದ್ರ ಹರ್ಲೆಕರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಮತ್ತೊಮ್ಮೆ ಕೋರಿಕೆ ಸಲ್ಲಿಸಿ, ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುತ್ತೇನೆ ಎಂದು ಹೇಳಿದ್ದರಾದರೂ ಅದಕ್ಕೆ ರಾಜ್ಯಪಾಲರು ಒಪ್ಪಲಿಲ್ಲ ಎಂದು ಹೇಳಲಾಗಿದೆ.


ನಟ ವಿಜಯ್ ಅವರುತಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ ರಾಜ್ಯಪಾಲರು ೧೧೮ ಶಾಸಕರ ಬೆಂಬಲದ ಪತ್ರದೊಂದಿಗೆ ಬನ್ನಿ ಸರ್ಕಾರ ರಚನೆಗೆ ಅವಕಾಶ ಕೊಡುತ್ತೇನೆ. ಅಲ್ಲಿಯವರೆಗೂ ಸರ್ಕಾರ ರಚನೆಗೆ ಅವಕಾಶ ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.


ರಾಜ್ಯಪಾಲರ ಈ ನಿರ್ಧಾರದಿಂದ ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರ ರಚನೆ ಹಾಗೂ ವಿಜಯ್ ಅವರ ಮುಖ್ಯಮಂತ್ರಿ ಪಟ್ಟಾಭಿಷೇಕ ಮತ್ತಷ್ಟು ವಿಳಂಬವಾಗಲಿದೆ.


ನಿನ್ನೆ ನಟ ವಿಜಯ್ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಕೋರಿದ್ದರು. ಆದರೆ ರಾಜ್ಯಪಾಲರು ನೀವು ೧೧೨ ಶಾಸಕರ ಬೆಂಬಲದ ಪಟ್ಟಿ ನೀಡಿದ್ದೀರಿ. ಬಹುಮತಕ್ಕೆ ಅಗತ್ಯವಾದ ಶಾಸಕರ ಸಂಖ್ಯಾಬಲದ ಸಾಕ್ಷ್ಯ ನೀಡಿ ಎಂದು ಹೇಳಿ, ಸರ್ಕಾರ ರಚನೆಗೆ ಆಹ್ವಾನವನ್ನು ನಟ ವಿಜಯ್ ಅವರಿಗೆ ನೀಡಿರಲಿಲ್ಲ. ಇಂದು ಮತ್ತೆ ವಿಜಯ್ ರಾಜ್ಯಪಾಲರನ್ನು ಭೇಟಿ ಮಾಡಿ ನನಗೆ ಬಹುಮತವಿದೆ. ವಿಧಾನಸಭೆಯಲ್ಲಿ ಅದನ್ನು ಸಾಬೀತುಪಡಿಸುತ್ತೇನೆ. ಸರ್ಕಾರ ರಚನೆಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.


ಆದರೆ ರಾಜ್ಯಪಾಲರು ೧೧೨ ಶಾಸಕರ ಬೆಂಬಲದಿಂದ ಸ್ಥಿರ ಸರ್ಕಾರ ಸಾಧ್ಯವೇ, ನಿಮಗೆ ಬಹುಮತದ ಕೊರತೆ ಇದೆ. ಬಹುಮತದ ಬಗ್ಗೆ ನೀವು ದಾಖಲೆ ಕೊಡಿ. ನಿಮಗೆ ಯಾವ ಪಕ್ಷಗಳು ಬೆಂಬಲ ನೀಡಿವೆ. ಆ ಬಗ್ಗೆಯೂ ಪತ್ರ ಕೊಡಿ ಎಂದು ಸ್ಪಷ್ಟವಾಗಿ ಹೇಳಿರುವುದು ತಮಿಳುನಾಡಿನಲ್ಲಿ ನೂತನ ಸರ್ಕಾರ ರಚನೆ ಮತ್ತಷ್ಟು ಮುಂದಕ್ಕೆ ಹೋಗುವಂತಾಗಿದೆ.


ತಮಿಳುನಾಡಿನ ರಾಜ್ಯಪಾಲರು ಟಿವಿಕೆ ಪಕ್ಷ ಬಹುಮತದ ಸಾಕ್ಷ್ಯ ನೀಡುವವರೆಗೂ ಸರ್ಕಾರ ರಚನೆಗೆ ಅವಕಾಶ ಕೊಡದಿರುವ ತೀರ್ಮಾನವನ್ನು ಕೈಗೊಂಡಿರುವುದು ಟಿವಿಕೆ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಟಿವಿಕೆ ಪಕ್ಷ ತನ್ನ ೧೦೭ ಶಾಸಕರ ಪಟ್ಟಿ ಜತೆಗೆ ಕಾಂಗ್ರೆಸ್‌ನ ಐದು ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ನೀಡಿತ್ತು. ಆದರೆ ರಾಜ್ಯಪಾಲರು ಬಹುಮತದ ೧೧೮ ಶಾಸಕರ ಪಟ್ಟಿ ನೀಡುವಂತೆ ಸೂಚನೆ ನೀಡಿದ್ದಾರೆ. ಇಂದೂ ಸಹ ರಾಜ್ಯಪಾಲರು ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಬಹುಮತ ಹೊಂದಿರುವ ದಾಖಲೆ ಕೊಡಿ ನಂತರವಷ್ಟೇ ಸರ್ಕಾರ ರಚನೆಗೆ ಅವಕಾಶ ಎಂದು ಪುನರುಚ್ಛರಿಸಿದ್ದಾರೆ. ಹಾಗಾಗಿ ಟಿವಿಕೆ ಪಕ್ಷ ಈಗ ತನಗೆ ಬೆಂಬಲ ಸೂಚಿಸಿರುವ ಎಡಪಕ್ಷಗಳು, ವಿಕೆಸಿ ಪಕ್ಷಗಳ ಬೆಂಬಲದ ಪತ್ರವನ್ನು ರಾಜ್ಯಪಾಲರಿಗೆ ನೀಡುವ ಅನಿವಾರ್ಯತೆ ಎದುರಾಗಿದೆ.


ಕಾಂಗ್ರೆಸ್ ಹಾಗೂ ಸಣ್ಣಪುಟ್ಟ ಪಕ್ಷಗಳ ಬೆಂಬಲದೊಂದಿಗೆ ಬಹುಮತ ಸಾಬೀತುಪಡಿಸುವ ವಿಶ್ವಾಸದಲ್ಲಿದ್ದ ನಟ ವಿಜಯ್ ಅವರಿಗೆ ರಾಜ್ಯಪಾಲ ಹರ್ಲೆಕರ್ ಅವರು ೧೧೮ ಶಾಸಕರ ಸಹಿಯೊಂದಿಗೆ ಬನ್ನಿ ಅಲ್ಲಿಯವರೆಗೂ ಸರ್ಕಾರ ರಚನೆಗೆ ಅವಕಾಶ ಇಲ್ಲ ಎಂದು ವಿಜಯ್ ಅವರನ್ನು ವಾಪಸ್ ಕಳುಹಿಸಿದ್ದಾರೆ. ಈಗ ಟಿವಿಕೆ ಪಕ್ಷ ತನ್ನ ಬೆಂಬಲಕ್ಕೆ ನಿಂತಿರುವ ಪಕ್ಷಗಳ ಜತೆ ಮಾತುಕತೆ ನಡೆಸಿ ಅವರ ಬೆಂಬಲ ಪತ್ರ ಪಡೆಯುವ ಪ್ರಯತ್ನದಲ್ಲಿ ತೊಡಗಿದೆ.

ಗೌರ್‍ನರ್ ವಿರುದ್ಧ ಆಕ್ರೋಶ
ಸರ್ಕಾರ ರಚನೆಗೂ ಮುನ್ನವೇ ಬಹುಮತ ಸಾಬೀತಿಗೆ ನಟ ವಿಜಯ್ ಅವರಿಗೆ ಬಹುಮತ ಸಾಬೀತುಪಡಿಸುವಂತೆ ಹೇಳಿರುವ ತಮಿಳುನಾಡು ರಾಜ್ಯಪಾಲ ಹರ್ಲೆಕರ್ ವಿರುದ್ಧ ಟಿಎಂಕೆ, ಕಾಂಗ್ರೆಸ್, ಎಡಪಕ್ಷಗಳು ಹಾಗೂ ನಟ ಕಮಲಹಾಸನ್ ವಾಗ್ದಾಳಿ ನಡೆಸಿ, ತಮಿಳುನಾಡು ರಾಜ್ಯಪಾಲರ ನಡೆ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.


ಕಾಂಗ್ರೆಸ್ ಪಕ್ಷ ರಾಜ್ಯಪಾಲರ ವಿರುದ್ಧ ಕಟುವಾಗಿ ಟೀಕೆ ಮಾಡಿ, ರಾಜ್ಯಪಾಲರು ಬಿಜೆಪಿ ಜತೆ ಕೈಜೋಡಿಸಿ ಸರ್ಕಾರ ರಚನೆಗೆ ಅವಕಾಶ ಕೊಡುತ್ತಿಲ್ಲ ಎಂದು ದೂರಿದ್ದಾರೆ.


ಬಿಜೆಪಿ ರಾಜ್ಯಪಾಲರ ಮೇಲೆ ಒತ್ತಡ ಹೇರಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಅತಿ ದೊಡ್ಡ ಪಕ್ಷಕ್ಕೆ ಸರ್ಕಾರ ರಚನೆಗೆ ಅವಕಾಶ ನೀಡಬೇಕು. ಆದರೂ ರಾಜ್ಯಪಾಲರು ಅವಕಾಶ ನೀಡದಿರುವ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಕಾಂಗ್ರೆಸ್ ದೂರಿದೆ.


ಡಿಎಂಕೆ ಪಕ್ಷ ಸಹ ರಾಜ್ಯಪಾಲರ ನಡೆಗೆ ಅಸಮಾಧಾನ ಹೊರ ಹಾಕಿ ನಟ ವಿಜಯ್ ಅವರಿಗೆ ಸರ್ಕಾರ ರಚನೆಗೆ ಅವಕಾಶ ಕೊಡಪಬೇಕು. ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಸೂಚಿಸಬೇಕು ಎಂದು ಹೇಳಿದೆ.


ಎಡಪಕ್ಷಗಳೂ ಸಹ ರಾಜ್ಯಪಾಲರ ನಡೆ ವಿರುದ್ಧ ಟೀಕೆ ಮಾಡಿದ್ದು, ನಟ ಕಮಲಾಹಾಸನ್ ಸಹ ರಾಜ್ಯಪಾಲರ ನಡೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯಪಾಲರು ವಿಜಯ್ ಅವರಿಗೆ ಸರ್ಕಾರ ರಚನೆಗೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ರೆಸಾರ್ಟ್ ರಾಜಕೀಯ ಶುರು
ತಮಿಳುನಾಡು ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ದಳಪತಿ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ರಚನೆ ಕಸರತ್ತು ಆರಂಭವಾಗಿರುವ ಬೆನ್ನಲ್ಲೇ ರೆಸಾರ್ಟ್ ರಾಜಕೀಯ ಆರಂಭವಾಗಿದೆ.

ಬಹುಮತಕ್ಕೆ ಟಿವಿಕೆಗೆ ಇನ್ನೂ ೬ ರಿಂದ ೭ ಶಾಸಕರು ಅಗತ್ಯವಿರುವ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಶಾಸಕರನ್ನು ತಮ್ಮತ್ತ ಸೆಳೆಯಬಹುದು ಎನ್ನುವ ಉದ್ದೇಶದಿಂದ ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ತನ್ನ ಶಾಸಕರನ್ನು ಪುದುಚೆರಿಯ ರೆಸಾರ್ಟ್‌ಗೆ ಸ್ಥಳಾಂತರ ಮಾಡಿದೆ.

ಎಐಎಡಿಎಂಕೆ ಪಕ್ಷ ಹೊಸದಾಗಿ ಆಯ್ಕೆಯಾದ ಶಾಸಕರನ್ನು ನೆರೆಯ ಪುದುಚೇರಿಗೆ ಸ್ಥಳಾಂತರಿಸಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಐಎಡಿಎಂಕೆ ವಕ್ತಾರ ಕೋವೈ ಸತ್ಯನ್, ಪಕ್ಷದ ಶಾಸಕರನ್ನು ಪುದುಚೇರಿಯ ರೆಸಾರ್ಟ್‌ಗೆ ಸ್ಥಳಾಂತರ ಮಾಡಲಾಗಿದೆ ಎಂದು ಹೇಳಿದ್ಧಾರೆ, ಆದರೆ ಅಲ್ಲಿಗೆ ಎಷ್ಟು ಮಂದಿ ಶಾಸಕರನ್ನು ಕಳುಹಿಸಲಾಗಿದೆ, ಅದರ ಹಿಂದಿನ ಉದ್ದೇಶ ಏನು ಎನ್ನುವುದನ್ನು ಸ್ಪಷ್ಟವಾಗಿಲ್ಲ.

ಈ ನಡುವೆ ಎಡಪ್ಪಾಡಿ ಕೆ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ, ವಿಜಯ್ ನೇತೃತ್ವದ ಟಿವಿಕೆಗೆ ಸರ್ಕಾರ ರಚಿಸಲು ಸಹಾಯ ಮಾಡಲು ಬೇಷರತ್ತು ಬೆಂಬಲವನ್ನು ನೀಡಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ, ಎರಡೂ ಕಡೆಯ ನಡುವೆ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ, ಈ ನಡುವೆ ರೆಸಾರ್ಟ್ ರಾಜಕೀಯ ಆರಂಭವಾಗಿದೆ ಎನ್ನಲಾಗಿದೆ.

ಎಐಡಿಎಂಕೆ ಪಕ್ಷದ ಪ್ರಸ್ತಾಪಕ್ಕೆ ಟಿವಿಕೆ ಯಾವುದೇ ಪ್ರತಿಕ್ರಿಯೆ ನೀಡದೆ ಸರ್ಕಾರ ರಚನೆಗೆ ಅಗತ್ಯವಿರುವ ಶಾಸಕರ ಬಲ ಹೆಚ್ಚಿಸಿಕೊಳ್ಳಲು ಕಸರತ್ತು ನಡೆಸಿದೆ, ಮೂಲಗಳ ಪ್ರಕಾರ ಎಐಎಡಿಎಂಕೆ ಮತ್ತು ಡಿಎಂಕ ಬೆಂಬಲ ಪಡೆಯುವ ಯಾವುದೇ ಪ್ರಸ್ತಾಪ ಮುಂದಿಲ್ಲ ಎಂದು ಹೇಳಲಾಗಿದೆ.

ಹೀಗಿದ್ದರೂ ಎಐಎಡಿಎಂಕೆ ನಾಯಕರು ಕಡೆಯ ಯತ್ನವಾಗಿ ಟಿವಿಕೆ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ, ಇದರ ನಡುವೆ ಟಿವಿಕೆಯ ನಾಯಕರು ಸಾಧ್ಯವಿರುವ ಎಲ್ಲಾ ಆಯ್ಕೆಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳಲಾಗಿದೆ.

“ಸ್ಥಿರ ಸರ್ಕಾರಕ್ಕಾಗಿ ನಾವು ಬೇಷರತ್ತಾದ ಬೆಂಬಲ ನೀಡಲು ಸಿದ್ದರಿದ್ದೇವೆ, ನಮಗೆ, ಪರಸ್ಪರ ಗೌರವವಿದ್ದರೆ ಮಾತುಕತೆ ನಡೆಸಬಹುದು ಎಂದು ಎಐಎಡಿಎಂಕೆ ಹಿರಿಯ ನಾಯಕ, ಪಳನಿಸ್ವಾಮಿ ಅವರ ಆಪ್ತರ ಹೇಳಿಕೆಗೂ ಟಿವಿಕೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಲಾಗಿದೆ.

ಈಗಾಗಲೇ ಟಿವಿಕೆಗೆ ಕಾಂಗ್ರೆಸ್ ಷರತ್ತುಬದ್ಧ ಬೆಂಬಲವನ್ನು ನೀಡಿ, “ಸಂವಿಧಾನ ರಕ್ಷಿಸುವ ಮತ್ತು ಕೋಮು ಶಕ್ತಿಗಳನ್ನು ಅಧಿಕಾರದಿಂದ ದೂರ ಇಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.